ಕರ್ನಾಟಕ

karnataka

ETV Bharat / state

ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ; ಆರೋಪಿ ನಿಖಿತಾ ಸಿಂಘಾನಿಯಾ ಜಾಮೀನು ಅರ್ಜಿ ವಿಚಾರಣೆ‌ ಇಂದು - TECHI ATUL SUBHASH DEATH CASE

ಜನವರಿ 4ರಂದೇ ಜಾಮೀನು ಅರ್ಜಿಯನ್ನ ಇತ್ಯರ್ಥಗೊಳಿಸಬೇಕು ಎಂದು ಹೈಕೋರ್ಟ್ ಸೂಚಿಸಿದ್ದು, ಅದರಂತೆ ಇಂದು ವಿಚಾರಣಾ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ.

techi-atul-subhash-death-case-karnataka-hc-hear-wife-nikita-singhania-bail-plea
ಹೈಕೋರ್ಟ್​ (ಈಟಿವಿ ಭಾರತ್​​)

By ETV Bharat Karnataka Team

Published : Jan 4, 2025, 1:05 PM IST

ಬೆಂಗಳೂರು: ಆತ್ಮಹತ್ಯೆಗೆ ಶರಣಾಗಿದ್ದ ಟೆಕ್ಕಿ ಅತುಲ್ ಸುಭಾಷ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆತನ ಪತ್ನಿ ನಿಖಿತಾ ಸಿಂಘಾನಿಯಾ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಇಂದು 29ನೇ ಎಸಿಎಂಎಂ ನ್ಯಾಯಾಲಯದಲ್ಲಿ ನಡೆಯಲಿದೆ. ಜನವರಿ 4ರಂದೇ ಜಾಮೀನು ಅರ್ಜಿಯನ್ನ ಇತ್ಯರ್ಥಗೊಳಿಸಬೇಕು ಎಂದು ಹೈಕೋರ್ಟ್ ಸೂಚಿಸಿದ್ದು, ಅದರಂತೆ ಇಂದು ವಿಚಾರಣಾ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ.

ಪ್ರಕರಣದಲ್ಲಿ ಸೂಕ್ತ ಕಾರಣ ನೀಡದೆ ತಮ್ಮನ್ನ ಬಂಧಿಸಲಾಗಿದ್ದು, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿ ನಿಖಿತಾ ಸಿಂಘಾನಿಯಾ ಮತ್ತು ಅವರ ಕುಟುಂಬ ಸದಸ್ಯರು ಅರ್ಜಿ ಸಲ್ಲಿಸಿದ್ದಾರೆ.

ವಿಚಾರಣೆ ವೇಳೆ, "ನಿಖಿತಾ ಸಿಂಘಾನಿಯಾ ಬಳಿಯಿರುವ ಮಗುವನ್ನು ವಶಕ್ಕೆ ಪಡೆಯುವುದಕ್ಕಾಗಿ ಮೃತ ಅತುಲ್ ಸುಭಾಷ್ ತಂದೆ ಸುಪ್ರೀಂ ಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿ ಸಂಬಂಧ ನಿಖಿತಾ ಸಿಂಘಾನಿಯಾ ಅವರಿಗೆ ನೋಟಿಸ್ ಜಾರಿಯಾಗಿದೆ. ಆದರೆ, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ನಿಖಿತಾ ಸಿಂಘಾನಿಯಾ ಆ ನೋಟಿಸ್‌ಗೆ ಆಕ್ಷೇಪಣೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಹಾಗೂ ಅವರನ್ನ ಯಾವ ಕಾರಣಕ್ಕಾಗಿ ಬಂಧಿಸಲಾಗಿದೆ ಎಂಬುದಕ್ಕೆ ವಿವರಣೆ ನೀಡಿಲ್ಲ. ಆದ್ದರಿಂದ, ಅವರಿಗೆ ಜಾಮೀನು ಮಂಜೂರು ಮಾಡಬೇಕು" ಎಂದು ನಿಖಿತಾ ಸಿಂಘಾನಿಯಾ ಪರ ವಕೀಲರು ಮನವಿ ಸಲ್ಲಿಸಿದ್ದರು.

ಇದೇ ವೇಳೆ ಪ್ರತಿವಾದಿಸಿದ ಸರ್ಕಾರ ಪರ ವಕೀಲರು "ಪ್ರಕರಣ ಸಂಬಂಧ ತನಿಖಾಧಿಕಾರಿಗಳು ಮಾಹಿತಿ ಪಡೆಯಬೇಕಿದೆ. ಆದ್ದರಿಂದ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬಾರದು" ಎಂದು ತಿಳಿಸಿದರು.

ವಿಚಾರಣೆ ನಡೆಸಿದ ಹೈಕೋರ್ಟ್ ಜನವರಿ 4ರಂದು ವಿಚಾರಣಾ ನ್ಯಾಯಾಲಯ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಇತ್ಯರ್ಥಪಡಿಸಬೇಕು ಎಂದು ಸೂಚನೆ ನೀಡಿತ್ತು.

ಪ್ರಕರಣದ ಹಿನ್ನೆಲೆ:ಬೆಂಗಳೂರಿನ ನೆಲೆಸಿದ್ದ ಉತ್ತರ ಪ್ರದೇಶ ಮೂಲದ ಅತುಲ್ ಸುಭಾಷ್ (34) ಡಿಸೆಂಬರ್ 9ರಂದು ಮಾರತ್​ಹಳ್ಳಿಯ ಮಂಜುನಾಥ ಲೇಔಟ್‌ನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಸುದೀರ್ಘ ಡೆತ್​ನೋಟ್ ಬರೆದಿಟ್ಟು, ಆತ್ಮಹತ್ಯೆಗೆ ಶರಣಾಗಿದ್ದರು. ಅತುಲ್ ಸುಭಾಷ್ ಸಹೋದರ ಬಿಕಾಸ್ ಕುಮಾರ್ ನೀಡಿದ ದೂರಿನನ್ವಯ ಆತನ ಪತ್ನಿ ನಿಕಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ ಸಿಂಘಾನಿಯಾ, ಬಾಮೈದ ಅನುರಾಗ್ ಸಿಂಘಾನಿಯಾ ಹಾಗೂ ಸಂಬಂಧಿ ಸುಶೀಲ್ ಸಿಂಘಾನಿಯಾ ವಿರುದ್ಧ ಭಾರತೀಯ ನ್ಯಾಯಸಂಹಿತೆ ಕಾಯ್ದೆ 108 (ಆತ್ಮಹತ್ಯೆಗೆ ಪ್ರಚೋದನೆ) ಆರೋಪದಡಿ ಮಾರತ್​ಹಳ್ಳಿ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಬಳಿಕ ಹರಿಯಾಣದ ಗುರುಗ್ರಾಮದಲ್ಲಿ ನಿಖಿತಾ ಸಿಂಘಾನಿಯಾ,​ ಹಾಗೂ ಉತ್ತರ ಪ್ರದೇಶದ ಪ್ರಯಾಗ್​ರಾಜ್​​ನಲ್ಲಿ ಅವರ ತಾಯಿ ನಿಶಾ ಸಿಂಘಾನಿಯಾ, ಅನುರಾಗ್ ಸಿಂಘಾನಿಯಾರನ್ನ ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ: ಪತ್ನಿ ನಿಖಿತಾ ಜಾಮೀನು ಅರ್ಜಿ ಜ.4ರಂದೇ ಇತ್ಯರ್ಥಕ್ಕೆ ಸೂಚನೆ

ABOUT THE AUTHOR

...view details