ಹಾವೇರಿ : ವಾರದಲ್ಲಿ ಎರಡು ದಿನ ವಹಿವಾಟು ನಡೆಸುವುದು ಬಿಟ್ಟು ಒಂದೇ ದಿನ ವಹಿವಾಟು ನಡೆಸಲು ಮುಂದಾಗಿದ್ದೇ ಸೋಮವಾರದ ದಾಂಧಲೆಗೆ ಕಾರಣ ಎಂದು ಹಾವೇರಿ ಜಿಲ್ಲೆ ಬ್ಯಾಡಗಿ ಮೆಣಸಿನಕಾಯಿ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಘಟನೆ ಹಿನ್ನೆಲೆ ಮಂಗಳವಾರ ನಡೆದ ವರ್ತಕರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇನ್ನು ಮುಂದೆ ಯಾವುದೇ ಕಾರಣಕ್ಕೂ ವಾರಕ್ಕೆ ಒಂದು ಬಾರಿ ವಹಿವಾಟು ನಡೆಸುವುದಿಲ್ಲ. ಇನ್ನು ಮುಂದೆ ವಾರಕ್ಕೆ ಎರಡು ಬಾರಿ ವಹಿವಾಟು ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ಮಾರ್ಚ್ ತಿಂಗಳಲ್ಲಿ ಅಧಿಕ ಜಾತ್ರೆಗಳು ಸೇರಿದಂತೆ ವಿವಿಧ ಧಾರ್ಮಿಕ ಕೆಲಸಗಳು ನಡೆಯುತ್ತವೆ. ಈ ಹಿನ್ನೆಲೆ ಕೂಲಿ ಕಾರ್ಮಿಕರ ಸಮಸ್ಯೆ ಇದೆ, ಮಾರುಕಟ್ಟೆಯಲ್ಲಿ ಅಧಿಕ ಆವಕದಿಂದ ವಾರಕ್ಕೆ ಒಂದು ಬಾರಿ ವಹಿವಾಟು ನಡೆಸಬೇಕಾಯಿತು. ಜೊತೆಗೆ ರೈತರು ಮೆಣಸಿನಕಾಯಿಗೆ ಹೆಚ್ಚು ನೀರು ಹಾಕಿಕೊಂಡು ಬರುತ್ತಾರೆ. ಈ ರೀತಿ ಮೆಣಸಿನಕಾಯಿ ಬಂದಾಗ ಅಧಿಕ ದಿನಗಳು ಬೇಕು. ಆದರೆ ವಾರದಲ್ಲಿ ಇನ್ನು ಮುಂದೆ ಎರಡು ಬಾರಿ ವಹಿವಾಟು ನಡೆಸುವುದಾಗಿ ಹೇಳಿದರು.
ಅಲ್ಲದೇ ವರ್ತಕ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದರು. ವರ್ತಕರ ಸಂಘದ ಸಭೆಯಲ್ಲಿ ಜಿಲ್ಲಾಧಿಕಾರಿ ರಘುನಂದನಮೂರ್ತಿ, ಎಸ್ಪಿ ಅಂಶುಕುಮಾರ್ ಸೇರಿದಂತೆ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಘಟನೆ ಬಗ್ಗೆ ಚರ್ಚೆ ನಡೆಸಲಾಯಿತು.
ಇದೇ ವೇಳೆ ಮಾತನಾಡಿದ ಸಂಘದ ಗೌರವ ಕಾರ್ಯದರ್ಶಿ ರಾಜು ಮೋರಗೇರಿ, ಸೋಮವಾರ ನಡೆದ ದಾಂಧಲೆ ಘಟನೆಯಲ್ಲಿ ಪಾಲ್ಗೊಂಡವರು ರೈತರಲ್ಲ ಎಂದು ತಿಳಿಸಿದರು. ಅನ್ನದಾತರು ಈ ರೀತಿ ಕ್ಷುದ್ರವಾಗಿ ನಡೆದುಕೊಂಡ ಘಟನೆಗಳು ನಮ್ಮ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಸಂಭವಿಸಿರಲಿಲ್ಲ. ದಾಂಧಲೆಯಂತಹ ಘಟನೆಗಳಿಗೆ ರೈತರು ಕೈ ಹಾಕುವುದಿಲ್ಲ. ಸರ್ಕಾರಿ ಕಚೇರಿಗೆ ಬೆಂಕಿ ಇಟ್ಟಿದ್ದಾರೆ. ಸರ್ಕಾರಿ ನೌಕರರಿಗೆ ಹೊಡೆದಿದ್ದಾರೆ. ರೈತ ಯಾವಾಗಲು ಬೆಳೆಸುವವನೇ ಹೊರತು, ಹಾಳು ಮಾಡುವವನಲ್ಲ ಎಂದು ಅವರು ಹೇಳಿದರು.
ಮಾರುಕಟ್ಟೆಗೆ ಬಂದಿದ್ದ ರೈತರಲ್ಲಿ ಪ್ರತಿಶತ 95ರಷ್ಟು ರೈತರು ತಮ್ಮ ಉತ್ಪನ್ನಮಾರಿ ಗ್ರಾಮಗಳಿಗೆ ತೆರಳಿದ್ದಾರೆ. ಆದರೆ ಪ್ರತಿಶತ 5ರಷ್ಟು ರೈತರು ಸೋಮವಾರ ಕ್ಷುದ್ರರಾಗಿ ವರ್ತಿಸಿದ್ದಾರೆ ಎಂದು ರಾಜು ಮೋರಗೇರಿ ಆರೋಪಿಸಿದರು.