ಬೆಂಗಳೂರು :ಕೋಟ್ಯಂತರ ಜನರು ಅನುವಂಶಿಕವಾಗಿ ಬರುವ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇದು ಕ್ಲಿನಿಕಲ್ ಚಿಕಿತ್ಸೆಯ ಅಗತ್ಯತೆಯನ್ನು ಎತ್ತಿ ತೋರಿಸುತ್ತಿದೆ. ಆದರೆ, ಪ್ರಸ್ತುತ ಭಾರತದಲ್ಲಿ ಈ ಕಾಯಿಲೆಗಳಿಗೆ ಚಿಕಿತ್ಸೆ ಲಭ್ಯವಿಲ್ಲ. ಈ ನಿಟ್ಟಿನಲ್ಲಿ ಕೈಗೆಟುಕುವ ಮತ್ತು ಸುಲಭ ವಿಧಾನದಲ್ಲಿ ಜೀನ್ ಚಿಕಿತ್ಸೆ ಅಭಿವೃದ್ಧಿಪಡಿಸಲು ನಾರಾಯಣ ನೇತ್ರಾಲಯ ದಿಟ್ಟ ಹೆಜ್ಜೆಯನ್ನಿಟ್ಟಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಧನಂಜಯ್ ವೈ. ಚಂದ್ರಚೂಡ್ ಅಭಿಪ್ರಾಯಪಟ್ಟರು.
ಕೈಗೆಟಕುವ ದರದಲ್ಲಿ ಚಿಕಿತ್ಸೆ, ಸಿಜೆಐ ವಿಶ್ವಾಸ:ನಗರದ ಖಾಸಗಿ ಹೋಟೆಲ್ನಲ್ಲಿ ನಾರಾಯಣ ನೇತ್ರಾಲಯ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿರುವ ಜೀನ್ ಥೆರಪಿ ಮತ್ತು ಪ್ರೆಸಿಷನ್ ಮೆಡಿಸಿನ್ ಕಾನ್ಫರೆನ್ಸ್ ಉದ್ಘಾಟಿಸಿ ಮಾತನಾಡಿದ ಅವರು, ಈ ಸಮ್ಮೇಳನ ಅನುವಂಶಿಕ ಕಾಯಿಲೆಗಳಿಗೆ ಜೀನ್ ಮತ್ತು ಸೆಲ್ ಥೆರಪಿಯ ಮೇಲೆ ಕೇಂದ್ರೀಕರಿಸಿದೆ. ಇಲ್ಲಿ ನಿಖರವಾದ ರೋಗನಿರ್ಣಯ ಮತ್ತು ಚಿಕಿತ್ಸೆಗಳ ಕುರಿತು ಪ್ರಾಥಮಿಕ ಬೆಳಕನ್ನು ಚೆಲ್ಲುವ ವಿಶ್ವಾಸವಿದೆ. ಇದರಿಂದ ಕೋಟಿಗಳ ವೆಚ್ಚದಲ್ಲಿ ಇರುವ ಈ ಚಿಕಿತ್ಸೆಗಳು ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ದೊರೆಯಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.
ಸಂಶೋಧನೆಗಳ ಪ್ರಕಾರ, 4600ಕ್ಕಿಂತ ಅಧಿಕ ಅನುವಂಶೀಯ ಗುಂಪುಗಳ ಜನರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಆದ್ದರಿಂದ ತಜ್ಞರು, ವಿಜ್ಞಾನಿಗಳು ಮತ್ತು ಭಾರತದ ಉನ್ನತ ಸಂಸ್ಥೆಗಳ ವೈದ್ಯರು ಈ ಸಮ್ಮೇಳನದಲ್ಲಿ ಹಲವು ಚಿಕಿತ್ಸಾ ವಿಧಾನಗಳ ಕುರಿತು ಚರ್ಚಿಸಿ ಪರಿಹಾರವನ್ನು ಕಂಡುಕೊಳ್ಳಲಿದ್ದಾರೆ. ಇದರಿಂದ ಭಾರತೀಯ ರೋಗಿಗಳಿಗೆ ಕೈಗೆಟಕುವ ಜೀನ್ ಥೆರಪಿ ಅಭಿವೃದ್ಧಿ ವೇಗವನ್ನು ಪಡೆಯಲು ಸಹಾಯವಾಗಲಿದೆ ಎಂದು ಹೇಳಿದರು.