ಬೆಂಗಳೂರು: ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಕರ್ನಾಟಕದ ಕೆಲ ಭಾಗ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ನೀಡಿರುವ ಹೇಳಿಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಬೇಕು. ರಾಜ್ಯದ ಭೂಭಾಗವನ್ನು ಬೇರೆ ರಾಜ್ಯಕ್ಕೆ ಕೊಡುವ ಹಿಡನ್ ಅಜೆಂಡಾ ನಿಮ್ಮ ಗ್ಯಾರಂಟಿ ಪ್ರಣಾಳಿಕೆಯಲ್ಲಿಯೇ ಇದೆಯಾ ಎನ್ನುವುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಂಚಾಲಕ ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಿನ್ನೆ ಕಾಂಗ್ರೆಸ್ನ ಉತ್ತರಕನ್ನಡ ಅಭ್ಯರ್ಥಿ ಮಾತನಾಡುವಾಗ ರಾಜ್ಯದ ಕೆಲವು ಭಾಗಗಳು ಮಹಾರಾಷ್ಟ್ರಕ್ಕೆ ಸೇರ್ಪಡೆಯಾಗಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿರುವುದು ಖಂಡನೀಯ, ಕಾಂಗ್ರೆಸ್ ಅಭ್ಯರ್ಥಿಯ ನಿಲುವಿನ ಬಗ್ಗೆ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸ್ಪಷ್ಟನೆ ಕೊಡಬೇಕು ಎಂದರು.
ರಾಜ್ಯದ ಭಾಗಗಳನ್ನು ಬೇರೆ ರಾಜ್ಯಕ್ಕೆ ಸೇರ್ಪಡೆಗೊಳಿಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆಯಾ? ನಿಮ್ಮ ಅಜೆಂಡಾದಲ್ಲಿ ಇದು ಇದೆಯಾ?, ನೀವು ಹೇಳಬೇಕಾಗಿದ್ದನ್ನು ನಿಮ್ಮ ಉತ್ತರಕನ್ನಡ ಅಭ್ಯರ್ಥಿ ಮೂಲಕ ಹೇಳುತ್ತಿದ್ದೀರಾ ಎಂಬುದನ್ನು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು. ಈ ಹಿಂದೆಯೂ ಪಾಕ್ ಪರ ವಿಧಾನಸೌಧದಲ್ಲಿ ಘೋಷಣೆ ಕೂಗಿದಾಗ ಸಿಎಂ ಮೌನವಾಗಿದ್ದರು. ಮೇಕೆದಾಟು ಅನುಷ್ಠಾನಕ್ಕೆ ಬಿಡುವುದಿಲ್ಲ ಎಂದು ಕಾಂಗ್ರೆಸ್ನ ಮಿತ್ರಪಕ್ಷ ಡಿಎಂಕೆ ಪ್ರಣಾಳಿಕೆಯಲ್ಲಿ ಹೇಳಿದಾಗಲೂ ಸಿಎಂ ಸೇರಿದಂತೆ ಕಾಂಗ್ರೆಸ್ ಪಕ್ಷ ಸಹ ಮೌನವಾಗಿತ್ತು ಎಂದು ಆರೋಪಿಸಿದರು.
ತಮಿಳುನಾಡಿಗೆ ನೀರು ಬಿಟ್ಟಾಗಲೂ ಇವರೆಲ್ಲಾ ಮೌನವಾಗಿದ್ದರು, ಇಂದು ರಾಜ್ಯದ ಭೂಭಾಗವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯೇ ಹೇಳಿದರೂ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡುತ್ತಿಲ್ಲ ಎಂದರೆ ಯಾವ ಹಿಡನ್ ಅಜೆಂಡಾ ಇಲ್ಲಿ ಕೆಲಸ ಮಾಡುತ್ತಿದೆ? ನಿಮ್ಮ ಗ್ಯಾರಂಟಿಗಳಲ್ಲಿ ಇದೂ ಇದೆಯಾ? ರಾಜ್ಯದ ಭೂಭಾಗವನ್ನ ಬೇರೆ ರಾಜ್ಯಕ್ಕೆ ಕೊಡುವ ವಿಷಯವೂ ಗ್ಯಾರಂಟಿ ಪ್ರಣಾಳಿಕೆಯಲ್ಲಿ ಸೇರಿದೆಯಾ? ಸಿಎಂ ಕೂಡಲೇ ಈ ಕುರಿತು ವಿವರವಾದ ಸ್ಪಷ್ಟನೆ ಕೊಡಬೇಕು ಎಂದು ಒತ್ತಾಯಿಸಿದರು.