ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದೆ. ಲಾರಿಗಳ ನಡುವಿನ ಅಪಘಾತದ ನಂತರ ಕಂಟೇನರ್ವೊಂದು ಡಿವೈಡರ್ ಹಾರಿ ಕಾರಿನ ಮೇಲೆ ಪಲ್ಟಿಯಾದ ಪರಿಣಾಮ ಅದರಲ್ಲಿದ್ದ ಒಂದೇ ಕುಟುಂಬದ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮೂವರು ಮಕ್ಕಳು, ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ.
ಉದ್ಯಮಿ ಚಂದ್ರ ಯಗಪಗೋಳ, 16 ವರ್ಷದ ಜಾನ್, 12 ವರ್ಷದ ದೀಕ್ಷಾ, 6 ವರ್ಷದ ಆರ್ಯ, 36 ವರ್ಷದ ವಿಜಯಲಕ್ಷ್ಮಿ, 42 ವರ್ಷದ ಗೌರಬಾಯಿ ಮೃತ ದುರ್ದೈವಿಗಳು.
ನೆಲಮಂಗಲ ತಾಲೂಕಿನ ಟಿ. ಬೇಗೂರು ಬಳಿ ಎರಡು ಕಾರು, ಎರಡು ಲಾರಿ, ಸ್ಕೂಲ್ ಬಸ್ ನಡುವೆ ಈ ಸರಣಿ ಅಪಘಾತ ನಡೆದಿದೆ. ವೇಗವಾಗಿ ಬಂದ ಲಾರಿಗಳ ನಡುವೆ ಅಪಘಾತವಾಗಿದೆ. ಡಿಕ್ಕಿ ರಭಸಕ್ಕೆ ಪಲ್ಟಿಯಾಗಿ ಕಾರಿನ ಮೇಲೆ ಕಂಟೇನರ್ ಬಿದ್ದಿದ್ದರಿಂದ ಅದರಲ್ಲಿದ್ದ ಇಬ್ಬರು ಮಹಿಳೆಯರು, ಇಬ್ಬರು ಪುರುಷರು, ಮೂವರು ಮಕ್ಕಳು ಸೇರಿ ಒಟ್ಟು 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸರಣಿ ಅಪಘಾತ ಸಂಭವಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಸುಮಾರು 10 ಕಿಲೋ ಮೀಟರ್ವರೆಗೂ ಸಂಚಾರಕ್ಕೆ ಅಡ್ಡಿಯಾಗಿದ್ದು ಪೊಲೀಸರು ವಾಹನಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಹಕರಿಸುವಂತೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಸಿ ಕೆ ಬಾಬಾ ಅವರು ಮನವಿ ಮಾಡಿದ್ದಾರೆ.
Traffic advisory:
— SP Bengaluru District Police (@bngdistpol) December 21, 2024
Slow-moving traffic in Bengaluru-Tumkur national highway due to vehicle accidents between canter and car near Beguru in Nelmangla.
Kindly co-operate. pic.twitter.com/0x6FmlOKyo
ಕಂಟೇನರ್ ಲಾರಿ ಬಿದ್ದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಮೃತದೇಹಗಳು ಕೂಡ ಛಿದ್ರವಾಗಿವೆ. KA 01 ND 1536 ಕಾರಿನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಜೈಪುರ - ಅಜ್ಮೀರ್ ಹೈವೇಯಲ್ಲಿ ಗ್ಯಾಸ್ ಟ್ಯಾಂಕರ್ ಸ್ಫೋಟ : ಐದು ಮಂದಿ ಸಜೀವ ದಹನ, 37 ಜನರಿಗೆ ಗಾಯ
ಮೃತರು ವಿಜಯಪುರ -ಮಹಾರಾಷ್ಟ್ರ ಗಡಿ ಭಾಗದವರೆಂದು ಗುರುತಿಸಲಾಗಿದೆ. ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ನಲ್ಲಿ ವಾಸವಾಗಿದ್ದ ಕುಟುಂಬಸ್ಥರು ಕ್ರಿಸ್ಮಸ್ ರಜಾ ದಿನಗಳ ಹಿನ್ನೆಲೆ ಸಂಭ್ರಮಾಚರಣೆಗೆ ತಮ್ಮ ಸ್ವಗ್ರಾಮಕ್ಕೆ ವೋಲ್ವೋ ಕಾರಿನಲ್ಲಿ ತೆರಳುತ್ತಿದ್ದರು. ಬೆಂಗಳೂರಿನಿಂದ ತುಮಕೂರು ಕಡೆ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಕಂಟೈನರ್ ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ವೋಲ್ವೋ ಕಾರಿನ ಮೇಲೆ ಪಲ್ಟಿಯಾಗಿದೆ. ಪರಿಣಾಮ ಕಾರಲ್ಲಿದ್ದ ಮೂವರು ಮಕ್ಕಳು ಸೇರಿದಂತೆ ಆರು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಕ್ಷಣವೇ ಅವರನ್ನು ಕಾರಿನಿಂದ ತೆಗೆದು ಸಾಗಿಸಿದ್ದೇವೆ. ಕಂಟೇನರ್ ಚಾಲಕನಿಗೂ ತೀವ್ರ ಗಾಯಗಳಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಚಂದ್ರ ಯಗಪಗೋಳ ಅವರು ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಇದೆ. ರಾಷ್ಟ್ರೀಯ ಹೆದ್ದಾರಿ ಮಧ್ಯೆ ಅಪಘಾತ ಸಂಭವಿಸಿದ್ದರಿಂದ ಕೆಲಕಾಲ ಸಂಚಾರ ಸ್ಥಗಿತಗೊಳಿಸಿದ್ದೆವು. ಬಳಿಕ ಎಲ್ಲವನ್ನೂ ತೆರವುಗೊಳಿಸಿ, ಸಂಚಾರಕ್ಕೆ ಅನುಮತಿ ನೀಡಿದ್ದೇವೆ - ಸಿ.ಕೆ. ಬಾಬಾ, ಎಸ್ಪಿ
ಇದನ್ನೂ ಓದಿ: ಕೋಲಾರ: 3 ಬೈಕ್ಗಳಿಗೆ ಬೊಲೆರೋ ವಾಹನ ಡಿಕ್ಕಿ, ಐವರು ಸ್ಥಳದಲ್ಲೇ ಸಾವು