ಕರ್ನಾಟಕ

karnataka

ETV Bharat / state

ನೀತಿ ಸಂಹಿತೆ ಉಲ್ಲಂಘನೆ ಆರೋಪ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಸಮನ್ಸ್ ಜಾರಿ - Summons To Lakshmi Hebbalkar

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್‌ ಜಾರಿಗೊಳಿಸಿದೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಸಮನ್ಸ್ ಜಾರಿ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಸಮನ್ಸ್ ಜಾರಿ

By ETV Bharat Karnataka Team

Published : Mar 29, 2024, 10:01 AM IST

ಬೆಳಗಾವಿ:ಲೋಕಸಭೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ ಸಮನ್ಸ್‌ ಜಾರಿ ಮಾಡಿ ಆದೇಶಿಸಿದೆ.

ಬೆಳಗಾವಿಯ ಕುವೆಂಪು ನಗರದ ತಮ್ಮ ಗೃಹ ಕಚೇರಿ ಸಮೀಪದ ಸಭಾಂಗಣದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಮಾರ್ಚ್ 20ರಂದು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗು ಆಶಾ ಕಾರ್ಯಕರ್ತೆಯರ ಜತೆ ಸಭೆ ನಡೆಸಿದ್ದರು. ಈ ಸಭೆಗೆ ಅನುಮತಿ ಪಡೆದಿರಲಿಲ್ಲ. ಈ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿತ್ತು.

ಅಲ್ಲದೇ ತಮ್ಮ ಪುತ್ರ ಹಾಗು ಕಾಂಗ್ರೆಸ್​ ಅಭ್ಯರ್ಥಿ ಮೃಣಾಲ್ ಪರ ಪ್ರಚಾರ ಮಾಡುವಂತೆಯೂ ಈ ಸಭೆಯಲ್ಲಿ ಹೆಬ್ಬಾಳ್ಕರ್ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಸೂಚಿಸಿದ್ದರು ಎಂಬ ಆರೋಪವಿದೆ. ಇದರ ಬೆನ್ನಲ್ಲೇ ಹೆಬ್ಬಾಳ್ಕರ್ ಅವರಿಗೆ ಸಮನ್ಸ್ ಜಾರಿಯಾಗಿದ್ದು, ಏಪ್ರಿಲ್ 30ರೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ. ಎರಡನೇ ಆರೋಪಿಯಾಗಿ ಸಭೆಗೆ ಅವಕಾಶ ಮಾಡಿಕೊಟ್ಟ ಸಭಾಂಗಣದ ಮಾಲೀಕ ಉಮೇಶ ಮಲ್ಲಪ್ಪ ವಾಸಣ್ಣ ಎಂಬವರಿಗೂ ಸಮನ್ಸ್‌ ಜಾರಿ ಮಾಡಲಾಗಿದೆ.

ಸಿಎಂ, ಡಿಸಿಎಂಗೂ ಸಮನ್ಸ್:ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡಿರುವ ಆರೋಪದಡಿ ದಾಖಲಾಗಿದ್ದ ಪ್ರಕರಣ ಸಂಬಂಧ ಏಪ್ರಿಲ್​ 29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಖುದ್ದು ಹಾಜರಿಗೆ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್​ ಜಾರಿಗೊಳಿಸಿದೆ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಪಪ್ರಚಾರ ಮಾಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಖಾಸಗಿ ದೂರು ನೀಡಿತ್ತು. ಈ ದೂರಿನ ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಪ್ರಕರಣದ ಪ್ರತಿವಾದಿಗಳಾದ ರಾಹುಲ್​ ಗಾಂಧಿ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್​ ಮಾರ್ಚ್ 28ಕ್ಕೆ ಖುದ್ದು ಹಾಜರಾಗುವಂತೆ ಸೂಚಿಸಿತ್ತು.

ಇದನ್ನೂ ಓದಿ:ಬಿಜೆಪಿ ಸರ್ಕಾರದ ವಿರುದ್ಧ ಅಪಪ್ರಚಾರ ಆರೋಪ: ಸಿಎಂ, ಡಿಸಿಎಂಗೆ ಸಮನ್ಸ್​ ಜಾರಿ ಮಾಡಿದ ಕೋರ್ಟ್​​ - Court summons to CM and DCM

ABOUT THE AUTHOR

...view details