ಬೆಂಗಳೂರು : ಸಿಲಿಕಾನ್ ಸಿಟಿಯ ಈರುಳ್ಳಿ ಪ್ರಿಯರಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ನ್ಯಾಷನಲ್ ಕೋ ಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್) ಬೆಂಗಳೂರು ಶಾಖೆ ಭಾರತ ಸರ್ಕಾರದ ನಿರ್ದೇಶನದ ಅನುಸಾರದಂತೆ, ರಿಯಾಯತಿ ದರದಲ್ಲಿ ಬೆಲೆ ಸ್ಥಿರೀಕರಣ ನಿಧಿ (ಪಿಎಸ್ಎಫ್) ಅಡಿಯಲ್ಲಿ ಈರುಳ್ಳಿ ಮಾರಾಟವನ್ನು ಇಂದಿನಿಂದ ಆರಂಭಿಸಿದೆ.
ಇಂದು ಮೊಬೈಲ್ ವ್ಯಾನ್ ಮೂಲಕ ಈರುಳ್ಳಿ ಮಾರಾಟ ಮಧ್ಯಾಹ್ನ 12.30 ರಿಂದ ಹೆಚ್ಡಿಎಫ್ಸಿ ಬ್ಯಾಂಕ್ ಲಿಮಿಟೆಡ್, ನಂ.27, ಡಾಲರ್ಸ್ ಕಾಲೋನಿ, 1 ಮುಖ್ಯ ರಸ್ತೆ, ನಂದಿನಿ ಲೇಔಟ್, ಬೆಂಗಳೂರು - 560096 ನಲ್ಲಿ ಆರಂಭವಾಗಿದೆ.
35 ರೂಪಾಯಿಗೆ ಒಂದು ಕಿಲೋ ಈರುಳ್ಳಿಯನ್ನು ಈ ಮೊಬೈಲ್ ವ್ಯಾನ್ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಏರಿಕೆಯ ವರದಿಗಳ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಈರುಳ್ಳಿ ಪೂರೈಸಲು ಈ ಉಪಕ್ರಮವನ್ನು ತೆಗೆದುಕೊಳ್ಳಲಾಗಿದೆ.