ಜೆರುಸಲೇಂ/ಗಾಜಾ: ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದ ಜಾರಿಗೆ ಬಂದಿದೆ. ಒಪ್ಪಂದದ ಮೊದಲ ದಿನವೇ ಗಾಜಾದಲ್ಲಿ ಹಮಾಸ್ ಸೆರೆಯಲ್ಲಿದ್ದು, ಬಿಡುಗಡೆಯಾದ ಮೂವರು ಮಹಿಳೆಯರು ಇಸ್ರೇಲ್‌ಗೆ ಆಗಮಿಸಿದ್ದಾರೆ ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ.
ಮೂವರ ಬಿಡುಗಡೆ: ಬ್ರಿಟಿಷ್-ಇಸ್ರೇಲಿ 28 ವರ್ಷದ ಎಮಿಲಿ ದಮರಿ, 30 ವರ್ಷದ ಪಶುವೈದ್ಯಕೀಯ ನರ್ಸ್ ಡೊರೊನ್ ಸ್ಟೈನ್‌ಬ್ರೆಚರ್, 23 ವರ್ಷದ ರೋಮಿ ಗೊನೆನ್ ಬಿಡುಗಡೆಗೊಂಡ ಮಹಿಳೆಯರಾಗಿದ್ದಾರೆ. ನೋವಾ ಸಂಗೀತ ಉತ್ಸವದಿಂದ ಇವರೆಲ್ಲರನ್ನು ಹಮಾಸ್ ಉಗ್ರರು ಅಪಹರಿಸಿದ್ದರು. ಹಮಾಸ್ ನಿಂದ ಅಪಹರಣಕ್ಕೆ ಒಳಗಾಗಿ 471 ದಿನಗಳ ಸೆರೆಯಲ್ಲಿದ್ದ ಇವರು ಅಂತಿಮವಾಗಿ ಭಾನುವಾರ ಬಿಡುಗಡೆಗೊಂಡಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇನ್ನೂ 33 ಮಂದಿ ಬಿಡುಗಡೆ ನಿರೀಕ್ಷೆ: ಮೂರು - ಹಂತದ ಒಪ್ಪಂದದ ಅಡಿಯಲ್ಲಿ ಭಾನುವಾರ ಒತ್ತೆಯಾಳುಗಳ ಬಿಡುಗಡೆ ಆಗಿದೆ. ಆರು ವಾರಗಳ ಶಾಂತಿ ಒಪ್ಪಂದ ಈ ಮೂಲಕ ಜಾರಿಗೆ ಬಂದಿದೆ. ಗಾಜಾದ ಆರೋಗ್ಯ ಅಧಿಕಾರಿಗಳ ಪ್ರಕಾರ, 46,900 ಕ್ಕೂ ಹೆಚ್ಚು ಪ್ಯಾಲೆಸ್ತೇನಿಯರು ಈ ಯುದ್ಧದಲ್ಲಿ ಮೃತಪಟ್ಟಿದ್ದಾರೆ.
ಒಪ್ಪಂದದ ಪ್ರಕಾರ, ಹಮಾಸ್ ಪ್ರತಿ ವಾರ ಮೂರರಿಂದ ನಾಲ್ಕು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುತ್ತಾ ಬರುತ್ತದೆ. ಇದಕ್ಕೆ ಪ್ರತಿಯಾಗಿ, ಇಸ್ರೇಲ್ ತನ್ನ ಜೈಲಿನಲ್ಲಿರುವ ನೂರಾರು ಪ್ಯಾಲೆಸ್ತೀನ್ ಬಂಧಿತರನ್ನು ಬಿಡುಗಡೆ ಮಾಡುತ್ತದೆ. ಆಕ್ರಮಿತ ವೆಸ್ಟ್ ಬ್ಯಾಂಕ್ ಮತ್ತು ಪೂರ್ವ ಜೆರುಸಲೆಮ್‌ನ 90 ಜನರನ್ನು ಇಸ್ರೇಲ್ ಬಿಡುಗಡೆ ಮಾಡಿದೆ. ಇದರಲ್ಲಿ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳಿದ್ದಾರೆ.
ರೆಡ್ ಕ್ರಾಸ್ ನೇತೃತ್ವದಲ್ಲಿ ಒತ್ತೆಯಾಳುಗಳ ಬಿಡುಗಡೆ: ಗಾಜಾದಲ್ಲಿನ ರೆಡ್‌ಕ್ರಾಸ್ ಮೂಲಕ ಹಮಾಸ್ ಮೂವರು ಮಹಿಳಾ ಒತ್ತೆಯಾಳುಗಳನ್ನು ಇಸ್ರೇಲಿ ಪಡೆಗಳಿಗೆ ಹಸ್ತಾಂತರಿಸಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. ಸ್ವಲ್ಪ ಸಮಯದ ಹಿಂದೆ ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಮತ್ತು ಶಿನ್ ಬೆಟ್ ಪಡೆಗಳೊಂದಿಗೆ ಬಿಡುಗಡೆಯಾದ ಒತ್ತೆಯಾಳುಗಳು ಗಾಜಾ ಗಡಿಯನ್ನು ದಾಟಿದರು ಎಂದು ಇಸ್ರೇಲ್ ರಕ್ಷಣಾ ಪಡೆಗಳು ತಿಳಿಸಿವೆ.
ಹಮಾಸ್ ಹಿಡಿತದಿದ ಬಿಡುಗಡೆಯಾ ಮೂವರನ್ನು ದಕ್ಷಿಣ ಇಸ್ರೇಲ್‌ನ ಗಾಜಾ ಗಡಿಯ ಸಮೀಪವಿರುವ ಸ್ವಾಗತ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅವರು ಆರಂಭಿಕ ವೈದ್ಯಕೀಯ ಮೌಲ್ಯಮಾಪನಕ್ಕೆ ಒಳಗಾದರು ಮತ್ತು ಅವರ ತಾಯಂದಿರನ್ನು ಭೇಟಿಯಾದರು ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ.
ನರಕದಿಂದ ಬಿಡುಗಡೆ ಎಂದ ನೆತನ್ಯಾಹು: ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ದೂರದರ್ಶನದ ತಮ್ಮ ಹೇಳಿಕೆಯಲ್ಲಿ ಮೂವರು ನರಕದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.
ನಿಯಮ ಉಲ್ಲಂಘಿಸಿದರೆ ನಾವು ಸುಮ್ಮನಿರಲ್ಲ: ಇನ್ನು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ IDF ವಕ್ತಾರ ಡೇನಿಯಲ್ ಹಗರಿ, ಮೂವರು ಒತ್ತೆಯಾಳುಗಳು ಮತ್ತು ಅವರ ಕುಟುಂಬಗಳು ಬಹಳ ಸಮಯದ ನಂತರ ಮತ್ತೆ ಒಂದಾಗುತ್ತಿರುವುದನ್ನು ಕಾಣುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇಸ್ರೇಲಿ ಪಡೆಗಳು ಗಾಜಾದ ಹೊರವಲಯಕ್ಕೆ ಸ್ಥಳಾಂತರಗೊಂಡಿವೆ. ಹಮಾಸ್ ಒಪ್ಪಂದವನ್ನು ಉಲ್ಲಂಘಿಸಿದರೆ ನಾವು ತಕ್ಕ ಪ್ರತ್ಯುತ್ತರ ನೀಡಲು ಸನ್ನದ್ಧವಾಗಿದ್ದೇವೆ ಎಂದು ಅವರು ಇದೇ ವೇಳೆ ಎಚ್ಚರಿಕೆ ಕೂಡಾ ನೀಡಿದ್ದಾರೆ.
ಕದನ ವಿರಾಮ ಒಪ್ಪಂದಕ್ಕೆ ಬದ್ಧ: ಹಮಾಸ್‌ನ ಸೇನಾ ವಿಭಾಗವಾದ ಅಲ್-ಕಸ್ಸಾಮ್ ಬ್ರಿಗೇಡ್ಸ್‌ನ ವಕ್ತಾರ ಅಬು ಉಬೈದಾ ಭಾನುವಾರ ಮಾತನಾಡಿ, ಅಲ್-ಕಸ್ಸಾಮ್ ಮತ್ತು ಇತರ ಪ್ಯಾಲೇಸ್ಟಿನಿಯನ್ ಬಣಗಳು ಕದನ ವಿರಾಮ ಒಪ್ಪಂದಕ್ಕೆ ಬದ್ಧವಾಗಿವೆ ಎಂದು ಹೇಳಿದ್ದಾರೆ. ನಾವು ಇತರ ಪ್ರತಿರೋಧದ ಬಣಗಳೊಂದಿಗೆ, ಕದನ ವಿರಾಮ ಒಪ್ಪಂದಕ್ಕೆ ನಮ್ಮ ಸಂಪೂರ್ಣ ಬದ್ಧತೆಯನ್ನು ಘೋಷಿಸುತ್ತೇವೆ. ಆದರೆ, ಇದು ಶತ್ರುಗಳ ಅನುಸರಣೆಯ ಮೇಲೆ ನಿಂತಿದೆ ಎಂದು ಉಬೈದಾ ದೂರದರ್ಶನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: ಕದನ ವಿರಾಮಕ್ಕೆ ವಿರೋಧ: ಇಸ್ರೇಲ್ ರಾಷ್ಟ್ರೀಯ ಭದ್ರತಾ ಸಚಿವ ರಾಜೀನಾಮೆ