ಬೆಳಗಾವಿ: ''ಮಹಾತ್ಮ ಗಾಂಧೀಜಿ ಅವರು ದೇಶದ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸುವ ಮೂಲಕ ಬೆಳಗಾವಿಯನ್ನು ಪರಿಚಯಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿತ್ತು. ಹಾಗಾಗಿ, ದೇಶದ ಜನ ಈಗ ಬೆಳಗಾವಿ ಎಲ್ಲಿದೆ ಎಂದು ಕೇಳುತ್ತಿದ್ದಾರೆ. ಬೆಳಗಾವಿಯನ್ನು ಇಡೀ ದೇಶಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದ್ದೇವೆ. ಆ ಪರಂಪರೆ ಉಳಿಸಿ, ಮುಂದುವರಿಸುವ ಕೆಲಸವನ್ನು ನಾವು ಮಾಡುತ್ತೇವೆ. ಆದರೆ, ಈಗ ಬೆಳಗಾವಿಗೆ ಯಾವುದೇ ವಿಶೇಷ ಯೋಜನೆ ಘೋಷಿಸುವುದಿಲ್ಲ. ಮುಂದಿನ ದಿನಗಳಲ್ಲಿ ಖಂಡಿತ ಘೋಷಿಸುತ್ತೇವೆ'' ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಸ್ಮರಣೀಯಗೊಳಿಸುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಸಮಾವೇಶ ನಡೆಯಲಿರುವ ಬೆಳಗಾವಿ ನಗರದ ಸಿಪಿಇಡ್ ಮೈದಾನದಲ್ಲಿ ಉತ್ತರಿಸಿದರು.
''ಸರ್ಕಾರ ಮತ್ತು ಪಕ್ಷದಿಂದ ಹೆಚ್.ಕೆ.ಪಾಟೀಲ್, ವೀರಪ್ಪ ಮೊಯ್ಲಿ, ಬಿ.ಎಲ್.ಶಂಕರ, ಕೆ.ಎಚ್.ಮುನಿಯಪ್ಪ, ರೆಹಮಾನ್ ಖಾನ್ ಸೇರಿ ಇನ್ನಿತರ ಮುಖಂಡರನ್ನು ಒಳಗೊಂಡ ಸಮಿತಿಯನ್ನು ರಚಿಸಿದ್ದೇವೆ. ಆ ಸಮಿತಿಯವರು ಸರ್ಕಾರಕ್ಕೆ ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಇದೆಲ್ಲವನ್ನು ನೆನಪು ಮಾಡಿಕೊಳ್ಳಲು, ಮತ್ತು ಬೇರೆ ಕಡೆ ಕಾರ್ಯಕ್ರಮ ಮಾಡಲು ತಿಳಿಸಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಬಜೆಟ್ನಲ್ಲಿ ಹಣ ಇಟ್ಟಿದ್ದಾರೆ. ಇಡೀ ವರ್ಷ ಕಾರ್ಯಕ್ರಮ ನಡೆಯಲಿವೆ. ಮುಂದಿನ ದಿನಗಳಲ್ಲಿ ವಿಶೇಷ ಕಾರ್ಯಕ್ರಮ ಘೋಷಿಸುತ್ತೇವೆ'' ಎಂದರು.
''ಬೆಳಗಾವಿಯಲ್ಲಿ ಕಾಂಗ್ರೆಸ್ ಮತ್ತು ದೇಶದ ಇತಿಹಾಸದಲ್ಲಿ ಐತಿಹಾಸಿಕ ಸಮಾವೇಶಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಸಮಾವೇಶಕ್ಕೆ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಎಂದು ಎಐಸಿಸಿ ಅವರು ಹೆಸರು ಇಟ್ಟಿದ್ದಾರೆ. ಈ ದೇಶದ ಸ್ವಾತಂತ್ರ್ಯ, ಸಂವಿಧಾನ, ಐಕ್ಯತೆ ಕಾಪಾಡಲು ನಾವು ಗಾಂಧೀಜಿ ತತ್ವ, ಅಂಬೇಡ್ಕರ್ ಅವರ ನೀತಿ ಮತ್ತು ನಮ್ಮ ಸಂವಿಧಾನದ ರಕ್ಷಣೆ ಮಾಡಲು, ಮುಂದಿನ ಪೀಳಿಗೆಗೆ ಮಾರ್ಗದರ್ಶನ ಮಾಡಲು ಐತಿಹಾಸಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ'' ಎಂದು ತಿಳಿಸಿದರು.
''ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಮಾತ್ರ ಅಲ್ಲ. ದೇಶದ ಸಂವಿಧಾನ ಉಳಿಸುವ, ಗಾಂಧೀಜಿ ಆದರ್ಶ ಮತ್ತು ಅಂಬೇಡ್ಕರ್ ಅವರ ತತ್ವದಾರ್ಶಗಳನ್ನು ರಕ್ಷಣೆ ಮಾಡಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಬಿಜೆಪಿ ಸೇರಿ ಯಾವುದೇ ಪಕ್ಷದ ಸದಸ್ಯತ್ವ ಹೊಂದಿರುವವರನ್ನು ಬಿಟ್ಟು ಕಾಂಗ್ರೆಸ್ ಪಕ್ಷ, ಅಂಬೇಡ್ಕರ್ ಮತ್ತು ಸಂವಿಧಾನದ ತತ್ವ, ಸಿದ್ಧಾಂತಗಳಲ್ಲಿ ನಂಬಿಕೆ ಮತ್ತು ಗೌರವ ಹೊಂದಿರುವ ಪ್ರತಿಯೊಬ್ಬರು ಪಕ್ಷಬೇಧ ಮರೆತು ಸಮಾವೇಶದಲ್ಲಿ ಭಾಗಿಯಾಗಬೇಕು. ಇತಿಹಾಸದ ಪುಟದಲ್ಲಿ ತಾವು ಸಾಕ್ಷಿಯಾಗಬೇಕು'' ಎಂದು ಕೇಳಿಕೊಂಡರು.
''ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷದ ಆಚರಣೆ ಸಂದರ್ಭದಲ್ಲಿ ನಮ್ಮ ರಾಜ್ಯದ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರು, ಬ್ಲಾಕ್ ಅಧ್ಯಕ್ಷ ಸ್ಥಾನದಿಂದ ಗಾಂಧೀಜಿ ಅವರ ಸ್ಥಾನದಲ್ಲಿ ಕುಳಿತುಕೊಂಡಿದ್ದಾರೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಅನೇಕ ರಾಷ್ಟ್ರೀಯ ನಾಯಕರು ಸಮಾವೇಶಕ್ಕೆ ಆಗಮಿಸುತ್ತಿದ್ದಾರೆ'' ಎಂದು ವಿವರಿಸಿದರು.
''ಸುವರ್ಣ ವಿಧಾನಸೌಧದಲ್ಲಿ ಮಹಾತ್ಮ ಗಾಂಧೀಜಿ ವಿಶೇಷ ಪ್ರತಿಮೆಯನ್ನು ಸರ್ಕಾರದ ವತಿಯಿಂದ ಅನಾವರಣಗೊಳಿಸುತ್ತಿದ್ದೇವೆ. ಈ ಕಾರ್ಯಕ್ರಮಕ್ಕೆ ಪಕ್ಷಬೇಧ ಮರೆತು ಎಲ್ಲ ಶಾಸಕರನ್ನು ಆಹ್ವಾನಿಸುತ್ತಿದ್ದೇವೆ'' ಎಂದರು.
ಬೆಳಗಾವಿಗೆ ಮತ್ತೊಂದು ಸಚಿವ ಸ್ಥಾನ ನೀಡುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ''ಬ್ರೆಕ್ಫಾಸ್ಟ್ನಲ್ಲಿ ಈ ಬಗ್ಗೆ ಮಾತಾಡೋಣ'' ಎಂದಷ್ಟೇ ಉತ್ತರಿಸಿದರು.
ಇದನ್ನೂ ಓದಿ: ಸುವರ್ಣಸೌಧದ ಬಳಿ ಗಾಂಧಿ ಪ್ರತಿಮೆ ಅನಾವರಣಕ್ಕೆ ಸ್ವಾತಂತ್ರ್ಯ ಹೋರಾಟಗಾರರಿಗೂ ಆಹ್ವಾನ : ಡಿಸಿಎಂ ಡಿ ಕೆ ಶಿವಕುಮಾರ್