ಕರ್ನಾಟಕ

karnataka

ETV Bharat / state

ಸಿಇಟಿಗೆ ಶೇ.92ರಷ್ಟು ಹಾಜರಾತಿ: ಪ್ರಶ್ನೆಗಳ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಏ.27 ರವರೆಗೆ ಕಾಲಾವಕಾಶ - CET Exam

ಸಿಇಟಿ ಪ್ರಶ್ನೆಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಏ.27ರೊಳಗೆ ಸಲ್ಲಿಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.

By ETV Bharat Karnataka Team

Published : Apr 19, 2024, 6:54 PM IST

Updated : Apr 19, 2024, 7:58 PM IST

ಸಿಇಟಿ ಪ್ರಶ್ನೆ
ಸಿಇಟಿ ಪ್ರಶ್ನೆ

ಬೆಂಗಳೂರು:ಎಂಜಿನಿಯರಿಂಗ್, ಕೃಷಿ ಸೇರಿದಂತೆ ಹಲವು ವೃತ್ತಿಪರ ಕೋರ್ಸುಗಳಿಗಾಗಿ ಗುರುವಾರ ಮತ್ತು ಶುಕ್ರವಾರ ಸಿಇಟಿ ನಡೆದಿದೆ. ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳ ಬಗ್ಗೆ‌ ಆಕ್ಷೇಪಣೆಗಳು ಇದ್ದಲ್ಲಿ ಏ.27ರೊಳಗೆ ವಿಷಯ, ವರ್ಷನ್‌ ಕೋಡ್, ಪ್ರಶ್ನೆ ಸಂಖ್ಯೆ ನಮೂದಿಸಿ keaugcet24@gmail.com ಮೂಲಕ ಸಲ್ಲಿಸಬಹುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಭ್ಯರ್ಥಿಗಳಿಗೆ ತಿಳಿಸಿದೆ.

ಇದನ್ನೂ ಓದಿ:ಇಂದಿನಿಂದ ರಾಜ್ಯದಲ್ಲಿ ಸಿಇಟಿ: 737 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿರುವ 3.49 ಲಕ್ಷ ವಿದ್ಯಾರ್ಥಿಗಳು - CET EXAM 2024

ಸಿಇಟಿ ಸುಗಮವಾಗಿ ನಡೆದಿದೆ. ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ 3,49,637 ವಿದ್ಯಾರ್ಥಿಗಳ ಪೈಕಿ ಪ್ರಾಥಮಿಕ ಮಾಹಿತಿ ಪ್ರಕಾರ ಶೇ.92ರಷ್ಟು ಮಂದಿ ಪರೀಕ್ಷೆ ಬರೆದಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.

ಕಳೆದ ಸಾಲಿಗಿಂತ ಈ ಬಾರಿ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಎಲ್ಲೂ ಸಮಸ್ಯೆ ಆಗಿಲ್ಲ, ವ್ಯವಸ್ಥಿತ ರೀತಿಯಲ್ಲಿ ಪರೀಕ್ಷೆ ನಡೆಸಲಾಗಿದೆ. ಶೇ.92 ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಪತ್ರಿಕಾ ಹೇಳಿಕೆ ಮೂಲಕ ಅವರು ಮಾಹಿತಿ ನೀಡಿದ್ದಾರೆ.

ಕಲಬುರಗಿ ಪರೀಕ್ಷಾ ಕೇಂದ್ರದಲ್ಲಿ ಅರುಣ್ ಮತ್ತು ವೃಷಭ್ ಎಂಬ ಇಬ್ಬರು ವಿದ್ಯಾರ್ಥಿಗಳಿಗೆ ಒಂದೇ ನೋಂದಣಿ ಸಂಖ್ಯೆ ನೀಡಿರುವುದರಲ್ಲಿ ಪ್ರಾಧಿಕಾರದ ತಪ್ಪೇನೂ ಇಲ್ಲ. ಇದರಲ್ಲಿ ಅರುಣ್ ಎಂಬ ವಿದ್ಯಾರ್ಥಿಯದೇ ಲೋಪವೆಂದು ಕಂಡುಬಂದಿದೆ. ಆದರೂ ಮಾನವೀಯತೆಯ ದೃಷ್ಟಿಯಿಂದ ಆ ವಿದ್ಯಾರ್ಥಿಗೂ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಶಿವಮೊಗ್ಗದ ಎ.ಅರುಣ್ ಮೊದಲು ಕಲಬುರಗಿ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿದ್ದರು. ಬಳಿಕ ಅವರು ಕಾಲೇಜಿನ‌ ಮೂಲಕವೇ ಪರೀಕ್ಷಾ ಕೇಂದ್ರ ಬದಲಾವಣೆಗೆ ಕೋರಿಕೆ ಸಲ್ಲಿಸಿ, ಶಿವಮೊಗ್ಗ ಕೇಂದ್ರ ಬಯಸಿದ್ದರು. ಇದನ್ನು ಮನ್ನಿಸಿ ಅವರಿಗೆ ಎಸ್ಎಂಎಸ್ ಕೂಡ ಕಳುಹಿಸಲಾಗಿತ್ತು. ಆದರೆ ಅವರು ಹೊಸ ಪ್ರವೇಶಪತ್ರ ಡೌನ್‌ಲೋಡ್ ಮಾಡಿಕೊಳ್ಳದೆ, ಹಳೆಯ ಪ್ರವೇಶಪತ್ರದೊಂದಿಗೆ ಕಲಬುರಗಿ ಕೇಂದ್ರಕ್ಕೆ ಹಾಜರಾಗಿದ್ದರಿಂದ ಗೊಂದಲ‌ ಉಂಟಾಗಿದೆ. ಅರುಣ್ ಎಂಬವರಿಗೆ ಶಿವಮೊಗ್ಗ ಕೇಂದ್ರದಲ್ಲಿ ಅವಕಾಶ ಕೊಟ್ಟ ಮೇಲೆ, ಕಲಬುರಗಿ ಕೇಂದ್ರದಲ್ಲಿ ಅವರಿಗೆ ಮೊದಲು ನೀಡಿದ್ದ ನೋಂದಣಿ ಸಂಖ್ಯೆಯನ್ನು ವೃಷಭ್ ಎಂಬ ಅಭ್ಯರ್ಥಿಗೆ ನೀಡಲಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

ನಿಯಮಗಳ ಪ್ರಕಾರ ಸಿಬ್ಬಂದಿಯು ಅರುಣ್​ಗೆ ಮೊದಲು ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಆದರೆ ಆತನ ಭವಿಷ್ಯವನ್ನು ಪರಿಗಣಿಸಿ, ಮಾನವೀಯ ದೃಷ್ಟಿಯಿಂದ ನಂತರ ಪರೀಕ್ಷೆ ಬರೆಯಲು ಅವಕಾಶ ಕೊಡಲಾಯಿತು. ಆದರೆ ಅವರಿಗೆ ಪ್ರತ್ಯೇಕ ನೋಂದಣಿ ಸಂಖ್ಯೆಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಪರೀಕ್ಷೆಯಲ್ಲಿ ನೀಡಿದ್ದ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಏನಾದರೂ ಆಕ್ಷೇಪಣೆ ಇದ್ದಲ್ಲಿ ಏ.27ರ ಸಂಜೆ 5.30ರ ಒಳಗೆ keaugcet24@gmail.com ಇಲ್ಲಿಗೆ ಇ-ಮೇಲ್ ಮೂಲಕ ಸಲ್ಲಿಸಬಹುದು. ಈ ಬಗ್ಗೆ ತಜ್ಞರ ಸಮಿತಿಯು ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸಲಿದೆ. ಹೀಗಾಗಿ ಅಭ್ಯರ್ಥಿಗಳು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಕನ್ನಡದಲ್ಲೇ ಯುಪಿಎಸ್‌ಸಿ ಪರೀಕ್ಷೆ ಬರೆದು 644ನೇ ರ‍್ಯಾಂಕ್‌ ಗಳಿಸಿದ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ - UPSC Achiever

Last Updated : Apr 19, 2024, 7:58 PM IST

ABOUT THE AUTHOR

...view details