ಮಂಗಳೂರು: ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅವರ ನಿವಾಸದ ಮೇಲೆ ಇತ್ತೀಚೆಗೆ ಕಲ್ಲು ತೂರಾಟ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಭರತ್ ಯಾನೆ ಯಕ್ಷಿತ್ (24) ಮತ್ತು ದಿನೇಶ್ ಕುಡ್ತಮೊಗೇರು (20) ಬಂಧಿತರು.
ಐವನ್ ಡಿಸೋಜ ಅವರು ರಾಜ್ಯಪಾಲರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ರಾಜ್ಯಪಾಲರಿಗೆ ಬಾಂಗ್ಲಾದ ಪ್ರಧಾನಿಗಾದ ರೀತಿ ಆಗಲಿದೆ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ನೀಡಿದ ಬಳಿಕ ಐವನ್ ಡಿಸೋಜ ಮನೆಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳನ್ನು ಬಂಧಿಸಲು ಎಸಿಪಿ ಸೆಂಟ್ರಲ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ತಂಡವು ಸಿಸಿಟಿವಿ ದೃಶ್ಯಾವಳಿಗಳನ್ನು, ವಾಹನದ ವಿವರಗಳನ್ನು ಮತ್ತು ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಸಂಗ್ರಹಿಸಿ ಬಂಧಿಸಲಾಗಿದೆ.
ಆರೋಪಿ ಭರತ್ ಮೇಲೆ ಈ ಹಿಂದೆ ಮೂರು ಹಲ್ಲೆ ಪ್ರಕರಣಗಳು ದಾಖಲಾಗಿವೆ. ವಿಚಾರಣೆ ವೇಳೆ ಆರೋಪಿಗಳು ಐವನ್ ಡಿಸೋಜ ನೀಡಿದ ಹೇಳಿಕೆಗಳ ಮೇಲಿನ ಕೋಪವೇ ತಮ್ಮ ಕೃತ್ಯದ ಹಿಂದಿನ ಉದ್ದೇಶ ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ರಾತ್ರಿ 9:30 ರ ಸುಮಾರಿಗೆ ಫ್ರಿಶ್ ಕ್ರೌನ್ ಹೋಟೆಲ್‌ನಲ್ಲಿ ಭೋಜನ ಮಾಡಿದ ನಂತರ, ಅವರು ಐವನ್ ಡಿಸೋಜ ಅವರ ಮನೆಗೆ ಕಲ್ಲು ಎಸೆಯಲು ನಿರ್ಧರಿಸಿದರು ಎಂದು ಅವರು ಪೊಲೀಸರಿಗೆ ತನಿಖೆ ವೇಳೆ ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳು ಮತ್ತು ಮೊಬೈಲ್ ದಾಖಲೆಗಳ ಮೂಲಕ ಅವರ ಚಲನವಲನಗಳ ಪರಿಶೀಲನೆ ವೇಳೆ ಪ್ರಕರಣದಲ್ಲಿ ಅವರು ಭಾಗಿಯಾಗಿರುವುದು ದೃಢಪಟ್ಟಿದೆ. ತನಿಖೆ ಮುಂದುವರಿದಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ:ಮಂಗಳೂರಲ್ಲಿ ಕಾಂಗ್ರೆಸ್ ನಾಯಕ ಐವನ್ ಡಿಸೋಜಾ ಮನೆ ಮೇಲೆ ಕಲ್ಲು ತೂರಾಟ - Ivan DSouza house attacked