ಬೆಂಗಳೂರು:ಕಳ್ಳರ ಪಾಲಾಗಿದ್ದ ಚಿನ್ನಾಭರಣ, ದೇವಿಯ ಬೆಳ್ಳಿ ಮುಖ ಸೇರಿದಂತೆ ವಿವಿಧ ಆಭರಣಗಳನ್ನು ವಶಪಡಿಸಿಕೊಳ್ಳುವ ಮೂಲಕ ವರಮಹಾಲಕ್ಷ್ಮಿ ಹಬ್ಬದ ದಿನವೇ ಮನೆ ಮಾಲೀಕರಿಗೆ ಪೊಲೀಸರು ಸಿಹಿ ಸುದ್ದಿ ನೀಡಿದ್ದಾರೆ. ಮಹಾದೇವಪುರ ಠಾಣಾ ವ್ಯಾಪ್ತಿಯ ಲಕ್ಷ್ಮೀಸಾಗರ ಲೇಔಟ್ನ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಕೆಜಿಎಫ್ ಮೂಲದ ಜ್ಞಾನಪ್ರಕಾಶ್, ಸಂತೋಷ್, ಪ್ರೇಮ್ ಕುಮಾರ್ ಎಂಬಾತನ ಸಹಿತ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಲಾಗಿದೆ.
ದಿನಪತ್ರಿಕೆಗಳು ಬಿದ್ದಿರುವ, ಲೈಟ್ ಆಫ್ ಆಗಿರುವ ಅಥವಾ ಚಪ್ಪಲಿಗಳು ಕಾಣದ ಮನೆಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದ ಆರೋಪಿಗಳು ಬೀಗ ಮುರಿದು ಕಳ್ಳತನ ಮಾಡುತ್ತಿದ್ದರು. ಜುಲೈ 12ರಂದು ಲಕ್ಷ್ಮೀ ಸಾಗರ ಲೇಔಟ್ನಲ್ಲಿರುವ ಮನೆಯೊಂದರಲ್ಲಿ ವಾಸವಿದ್ದ ವ್ಯಕ್ತಿಯೊಬ್ಬರು ತಮ್ಮ ಸ್ವಂತ ಊರಾದ ಕೇರಳಕ್ಕೆ ತೆರಳಿದ್ದಾಗ ಮನೆ ಬಳಿ ಬಂದಿದ್ದ ಆರೋಪಿಗಳು, ಬೀಗ ಮುರಿದು ಕಳ್ಳತನ ಎಸಗಿ ಪರಾರಿಯಾಗಿದ್ದರು. ಜುಲೈ 18ರಂದು ಮನೆಗೆ ಮರಳಿದಾಗ ಕಳ್ಳತನವಾಗಿರುವುದು ಪತ್ತೆಯಾಗಿತ್ತು. ತಕ್ಷಣ ಮನೆ ಮಾಲೀಕ ಮಹದೇವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.