ಬೆಂಗಳೂರು: "ಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ಅವಕಾಶ ಇಲ್ಲವೇ ಇಲ್ಲ. ಬಣದ ಹೆಸರಿನಲ್ಲಿ ಸಭೆಗಳನ್ನು ಆಯೋಜಿಸುವುದನ್ನು ಒಪ್ಪಲಾಗದು" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, "ಬಣದ ಹೆಸರಲ್ಲಿ ಸಭೆ, ಸಮಾವೇಶಗಳನ್ನು ಮಾಡಲು ಯಾರೇ ಹೊರಟಿದ್ದರೂ ಕೂಡಲೇ ತಮ್ಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕೆಂದು ವಿನಂತಿಸುವೆ. ರಾಜ್ಯಾಧ್ಯಕ್ಷನಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಗೆ ಇನ್ನಷ್ಟು ಬಲ ತುಂಬುವ ಕಾರ್ಯಕ್ರಮಗಳಡಿಯಲ್ಲಿ ಪಕ್ಷದ ಹಿರಿಯರು, ಶಾಸಕರು, ಮಾಜಿ ಶಾಸಕರು ಹಾಗೂ ಪಕ್ಷದ ಎಲ್ಲ ಹಿರಿಯರೊಂದಿಗೆ ಅತೀ ಶೀಘ್ರದಲ್ಲೇ ಸಭೆ ಕರೆಯಲಿದ್ದೇನೆ" ಎಂದಿದ್ದಾರೆ.
"ಭಾರತೀಯ ಜನತಾ ಪಾರ್ಟಿ ಕೂಡು ಕುಟುಂಬವಿದ್ದಂತೆ, ಪಕ್ಷದ ಚೌಕಟ್ಟಿನಲ್ಲೇ ಪ್ರತಿಯೊಂದು ಸಭೆ, ಕಾರ್ಯಕ್ರಮಗಳು ನಡೆಯಬೇಕೇ ಹೊರತು ಪಕ್ಷದ ನಿಯಮ, ಧ್ಯೇಯಗಳನ್ನು ಬದಿಗೆ ಸರಿಸಿ ಯಾವುದೇ ಚಟುವಟಿಕೆಗಳನ್ನು ನಡೆಸುವುದು ಸಂಘಟನೆಯ ಆಶಯಕ್ಕೆ ಪೂರಕವಾಗಿಲ್ಲ. ಇದನ್ನು ವಿನಮ್ರತೆಯಿಂದ ಸಹೃದಯರಲ್ಲಿ ತಿಳಿಸಬಯಸುತ್ತೇನೆ" ಎಂದು ಬರೆದಿದ್ದಾರೆ.
ಎಂ.ಪಿ.ರೇಣುಕಾಚಾರ್ಯ ಮತ್ತು ಕಟ್ಟಾ ಸುಬ್ರಮಣ್ಯ ನಾಯ್ಡು ನೇತೃತ್ವದಲ್ಲಿ ಯತ್ನಾಳ್ ಬಣದ ವಿರುದ್ಧ ದಾವಣಗೆರೆಯಲ್ಲಿ ಸಮಾವೇಶ ಮಾಡಲು ಯೋಜಿಸಿದ್ದರು. ಇದಕ್ಕೆ ಕೌಂಟರ್ ಆಗಿ ಯತ್ನಾಳ್ ಬಣದಿಂದಲೂ ಸಮಾವೇಶ ಆಯೋಜಿಸಲು ಚಿಂತನೆ ನಡೆದಿತ್ತು. ಬಣ ಬಡಿದಾಟಕ್ಕೆ ತೆರೆ ಎಳೆಯಲು ಮುಂದಾದ ಬಿ.ವೈ.ವಿಜಯೇಂದ್ರ ಇದೀಗ ಬಣದ ಹೆಸರಲ್ಲಿ ಯಾವುದೇ ಬಣ ಪ್ರತ್ಯೇಕ ಸಭೆಗಳನ್ನು ನಡೆಸದಂತೆ ತಾಕೀತು ಮಾಡಿದ್ದಾರೆ.
ಇದನ್ನೂ ಓದಿ:ರಾಜ್ಯದ ಸಂಸದರಿಗೆ ಹೊಸ ಕಾರು ಭಾಗ್ಯ; ₹7.50 ಕೋಟಿ ವೆಚ್ಚದಲ್ಲಿ 26 ಹೈ ಎಂಡ್ ಕಾರು ಖರೀದಿ