ಬೆಂಗಳೂರು:ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ಬಗ್ಗೆ ಸರ್ಕಾರ ಸ್ಪಂದಿಸದಿರುವ ಬಗ್ಗೆ ರಾಜ್ಯ ಗುತ್ತಿಗೆದಾರರ ಸಂಘ ಏಳು ಸಚಿವರಿಗೆ ಪತ್ರ ಬರೆದು ಆಕ್ರೋಶ ವ್ಯಕ್ರಪಡಿಸಿದೆ.
ಏಳು ಮಂದಿ ಸಚಿವರಿಗೆ ಪತ್ರ ಬರೆದ ಕರ್ನಾಟಕ ಕಂಟ್ರಾಕ್ಟರ್ಸ್ ಅಸೋಸಿಯೇಷನ್, ಸಚಿವರು ಹಾಗೂ ಅಧಿಕಾರಿಗಳ ನಡವಳಿಕೆ ವಿರುದ್ಧ ಕಿಡಿಕಾರಿದ್ದಾರೆ. ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಪ್ರಿಯಾಂಕ್ ಖರ್ಗೆ, ಸಚಿವ ಮಹದೇವಪ್ಪ, ಸಚಿವ ಜಮೀರ್ ಅಹಮದ್, ಸಚಿವ ಬೋಸರಾಜು, ಸಚಿವ ದಿನೇಶ್ ಗುಂಡೂರಾವ್ ಹಾಗೂ ಸಚಿವ ರಹೀಂ ಖಾನ್ಗೆ ಪತ್ರ ಬರೆದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಅಧಿಕಾರಿಗಳ ಜೊತೆಗೆ ಚರ್ಚೆಗೆ ಅವಕಾಶ ಕೊಡಿ:ಗುತ್ತಿಗೆದಾರರ ಕುಂದು-ಕೊರತೆಗಳ ಬಗ್ಗೆ ಹಾಗೂ ಗುತ್ತಿಗೆದಾರರ ಬಾಕಿ ಬಿಲ್ ಬಗ್ಗೆ ಸುಮಾರು ಬಾರಿ ತಮ್ಮ ಗಮನಕ್ಕೆ ತಂದಿರುತ್ತೇವೆ. ಆದರೆ ತಾವುಗಳು ಇದುವರೆಗೂ ನಮಗೆ ಯಾವುದೇ ಪತ್ರ ಸಹ ಬರೆದಿಲ್ಲ. ಹೀಗಾಗಿ, ಸಭೆ ಕರೆದು ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಚರ್ಚಿಸಲು ಅವಕಾಶ ಮಾಡಿಕೊಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ರಾಜ್ಯ ಗುತ್ತಿಗೆದಾರರ ಸಂಘದ ಪತ್ರ (ETV Bharat) ತಮ್ಮ ಇಲಾಖೆಯ ಅಧಿಕಾರಿಗಳನ್ನು ನಾವು ಕೇಳಿದರೆ, ಹಣ ಪಾವತಿಯಾಗಲಿ ಬೇರೆ ವಿಷಯದಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಮಂತ್ರಿಗಳನ್ನು ಭೇಟಿ ಮಾಡಿ ಎಂದು ಹೇಳುತ್ತಾರೆ. ಹಣ ಪಾವತಿಸುವ ವಿಷಯದಲ್ಲಿ ಸಚಿವರು ಕೊಟ್ಟ ಪಟ್ಟಿಯ ಪ್ರಕಾರ ಜೇಷ್ಠತೆಯನ್ನು ಕಡೆಗಣಿಸಿ ಪಾವತಿಸುವಂತೆ ಸೂಚಿಸಿರುತ್ತಾರೆ. ಹೀಗೆ ಮಾಡಿದರೆ ನಮ್ಮ ಎಲ್ಲಾ ಗುತ್ತಿಗೆದಾರರಿಗೂ ಅನ್ಯಾಯ ಮಾಡಿದಂತಾಗುತ್ತದೆ ಎಂದು ಆಕ್ಷೇಪಿಸಿದ್ದಾರೆ.
7 ದಿನದೊಳಗೆ ಸಭೆ ಕರೆದು ನಮಗೆ ನ್ಯಾಯ ಒದಗಿಸಿ:ನಾವು ಈ ಹಿಂದಿನ ಸರ್ಕಾರದ ವಿರುದ್ಧ ಹೋರಾಟ ಮಾಡಿರುವ ಬಗ್ಗೆ ತಮಗೆ ತಿಳಿದಿದೆ. ಆದ್ದರಿಂದ ತಮಗೆ ನಮ್ಮ ಸಂಘದ ಬಗ್ಗೆ ಸ್ವಲ್ಪವೂ ಕರುಣೆ ಇಲ್ಲ ಎಂದು ಅನಿಸುತ್ತದೆ. ಈ ರೀತಿ ನಮ್ಮನ್ನು ಕಡೆಗಣಿಸುತ್ತೀರಿ ಎಂದು ನಾವು ಕನಸಿನಲ್ಲೂ ಭಾವಿಸಿರಲಿಲ್ಲ. ಈ ಪತ್ರ ತಲುಪಿ 7 ದಿನದೊಳಗೆ ನಮ್ಮ ಸಂಘದ ಸಭೆ ಕರೆದು ನಮಗೆ ನ್ಯಾಯ ಒದಗಿಸಬೇಕು. ಇಲ್ಲವಾದರೆ ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕಾಗುತ್ತದೆ. ಮುಂದೆ ಹೋರಾಟದ ಹಾದಿ ಹಿಡಿಯಲು ನಾವು ನಡೆಸಿದ ಸಭೆಯಲ್ಲಿ ನಿರ್ಧರಿಸಲಾಗಿದೆ. ಆದ ಕಾರಣ ಅದಷ್ಟು ಬೇಗ ಇದರ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಇದನ್ನೂ ಓದಿ:ಜಾತಿಗಣತಿ ಬಗ್ಗೆ ಅನಗತ್ಯ ಗೊಂದಲ ಬೇಡ, ಸಭೆ ಮುಂದೂಡಿ: ಒಕ್ಕಲಿಗರ ಸಂಘದ ಪದಾಧಿಕಾರಿಗಳಿಗೆ ಡಿಕೆಶಿ ಸೂಚನೆ