ಬೆಂಗಳೂರು: "ರಾಜ್ಯದಲ್ಲಿ ಈಗ ಎಲ್ಲಾ ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮತ್ತು ಬಿಜೆಪಿ ಪರ ವಾತಾವರಣ ಇದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ನಗರದ ಮಲ್ಲೇಶ್ವರದ ಬಾವುರಾವ್ ದೇಶಪಾಂಡೆ ಭವನದಲ್ಲಿ ಮಾತನಾಡಿದ ಅವರು, "ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕಾರ್ಯಕ್ರಮಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ದೇಶದ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿಯೇ ಉತ್ತಮ ಮತ್ತು ನರೇಂದ್ರ ಮೋದಿಯವರ ಸರಕಾರ ಬೇಕೆಂಬ ತೀರ್ಮಾನಕ್ಕೆ ಜನರು ಬಂದಿದ್ದಾರೆ" ಎಂದು ವಿಶ್ಲೇಷಿಸಿದರು.
"28 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯದ ಅಭ್ಯರ್ಥಿಗಳ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ. ಇವತ್ತು, ನಾಳೆಯೊಳಗೆ ಎಲ್ಲವೂ ಅಂತಿಮವಾಗಲಿದೆ. 22, 23, 24 ಕ್ಷೇತ್ರ ಗೆಲುವಿನ ಪ್ರಶ್ನೆ ಅಲ್ಲ. ಹೊಸ ಇತಿಹಾಸವನ್ನು ಬಿಜೆಪಿ ರಾಜ್ಯದಲ್ಲಿ ಸೃಷ್ಟಿಸಲಿದೆ ಎನ್ನುವ ವಿಶ್ವಾಸ ರಾಜ್ಯಾಧ್ಯಕ್ಷನಾಗಿ ನನಗಿದೆ. ಹಿಂದೆ ಬಾರದಂಥ ಅತ್ಯುತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ನಾವಿದ್ದೇವೆ" ಎಂದು ತಿಳಿಸಿದರು.