ಬೆಳಗಾವಿ:ಜಿಲ್ಲೆಯ ಖಾನಾಪುರ ಭಾಗದ ರೈತರು ಭತ್ತ, ಮೆಣಸಿನಕಾಯಿ ಹಾಗೂ ಗೋಡಂಬಿ(ಕಾಜು) ಬೆಳೆಗಳನ್ನು ಮಾತ್ರ ಹೆಚ್ಚಾಗಿ ಬೆಳೆಯುತ್ತಾರೆ. ಪಶ್ಚಿಮಘಟ್ಟದಲ್ಲಿ ಬೆಳೆಯಬಹುದಾದ ಅತ್ಯಧಿಕ ಲಾಭ ತಂದುಕೊಡುವ ಬೆಳೆಗಳ ಪರಿಚಯ ಇವರಿಗಿಲ್ಲ. ಆ ನಿಟ್ಟಿನಲ್ಲಿ ಖಾನಾಪುರದ ಶೇಡೆಗಾಳಿ ತೋಟಗಾರಿಕಾ ಕ್ಷೇತ್ರವು ವಿನೂತನ ಪ್ರಯೋಗಕ್ಕೆ ಮುಂದಾಗಿದೆ.
ಖಾನಾಪುರ ಪಟ್ಟಣದಿಂದ 4 ಕಿ.ಮೀ. ದೂರದಲ್ಲಿ ಸಿಂಧನೂರು-ಹೆಮ್ಮಡಗಾ ಹೆದ್ದಾರಿಯಿಂದ ಬಲಕ್ಕೆ 1 ಕಿ.ಮೀ. ಅಂತರದಲ್ಲಿ ಮಲಪ್ರಭಾ ನದಿ ದಡದ ಕೂಗಳತೆಯಲ್ಲಿ ಶೇಡೆಗಾಳಿ ತೋಟಗಾರಿಕಾ ಕ್ಷೇತ್ರವಿದೆ. 1965ರಲ್ಲಿ ತೋಟಗಾರಿಕಾ ಇಲಾಖೆ ರಾಜ್ಯ ಘಟಕವು 30 ಎಕರೆ ಪ್ರದೇಶದಲ್ಲಿ ಇದನ್ನು ಆರಂಭಿಸಿತ್ತು. ಆರಂಭದಲ್ಲಿ ಕೆಲವೇ ಕೆಲವು ತಳಿಯ ಗೋಡಂಬಿ, ಮಾವು ಮತ್ತು ಚಿಕ್ಕು ಸಸಿಗಳನ್ನು ಮಾತ್ರ ಅಭಿವೃದ್ಧಿಪಡಿಸಿ ರೈತರಿಗೆ ವಿತರಿಸಲಾಗುತ್ತಿತ್ತು. ಅಲ್ಲದೇ, ಅಧಿಕಾರಿಗಳ ಇಚ್ಛಾಶಕ್ತಿಯೋ ಅಥವಾ ಸಿಬ್ಬಂದಿಯ ಕೊರತೆಯಿಂದಲೋ ಏನೋ ಇದು ರೈತರಿಗೆ ಅಷ್ಟೊಂದು ಉಪಯೋಗ ಆಗಿರಲಿಲ್ಲ. ಆದರೆ, ಈಗ ವರದಾನವಾಗಿ ಮಾರ್ಪಟ್ಟಿದೆ.
ಖಾನಾಪುರದಲ್ಲಿದೆ ರಾಜ್ಯದಲ್ಲೇ ಮಾದರಿ ತೋಟಗಾರಿಕಾ ಕ್ಷೇತ್ರ (ETV Bharat) ಶೇಡೆಗಾಳಿ ತೋಟಗಾರಿಕಾ ಕ್ಷೇತ್ರಕ್ಕೆ 2021ರಲ್ಲಿ ರಾಜಕುಮಾರ ಟಾಕಳೆ ಅವರು ಸಹಾಯಕ ತೋಟಗಾರಿಕಾ ನಿರ್ದೇಶಕರಾಗಿ ಬಂದ ಬಳಿಕ ಇದರ ಚಿತ್ರಣವೇ ಬದಲಾಗಿದೆ ಎನ್ನುತ್ತಾರೆ ರೈತರು. ಇಲ್ಲಿ ನಾನಾ ತರಹದ ಸುಧಾರಿತ ತಳಿಗಳ ಹಣ್ಣಿನ ಸಸಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸಸಿಗಳ ವಿತರಣೆ ಜೊತೆಗೆ ರೈತರಿಗೆ ಅಧ್ಯಯನಕ್ಕೂ ಇದು ಕೈ ಬೀಸಿ ಕರೆಯುತ್ತಿದೆ. ಬೆಳೆಯುವ ವಿಧಾನವನ್ನು ತಿಳಿಸಲಾಗುತ್ತಿದೆ. ಅಲ್ಲದೇ ಸರ್ಕಾರಕ್ಕೆ ಲಕ್ಷ ಲಕ್ಷ ರೂ. ಆದಾಯ ತಂದು ಕೊಡುತ್ತಿರುವುದು ವಿಶೇಷ.
''ಕಸ-ಕಡ್ಡಿ, ಹಳೆಯ ಗಿಡಗಳಿಂದ ಇದು ನಿರುಪಯುಕ್ತವಾಗಿತ್ತು. ಈಗ ಪ್ರತಿಯೊಂದು ಪ್ರಕಾರದ ಬೆಳೆಗಳಿಗೂ ಒಂದೊಂದು ಪ್ಲಾಟ್ ನಿರ್ಮಿಸಲಾಗಿದೆ. ಮಲಪ್ರಭಾ ನದಿಯಿಂದ ಪೈಪ್ಲೈನ್ ಮಾಡಿದ್ದು, ಹನಿ ನೀರಾವರಿ ಪದ್ಧತಿ ಅಳವಡಿಸಲಾಗಿದೆ. ಸಂಪೂರ್ಣವಾಗಿ ಸಾವಯವ ಕೃಷಿಯನ್ನೇ ರೂಢಿಸಿಕೊಳ್ಳಲಾಗಿದೆ" ಎಂದು ಈಟಿವಿ ಭಾರತಕ್ಕೆ ಸಹಾಯಕ ತೋಟಗಾರಿಕಾ ನಿರ್ದೇಶಕ ರಾಜಕುಮಾರ ಟಾಕಳೆ ಅವರು ತಿಳಿಸಿದರು.
ವಿಭಿನ್ನವಾಗಿ ಬೆಳೆಯುತ್ತಿರುವ ಗಿಡಗಳು (ETV Bharat) ''ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಕೊಪ್ಪಳ ಸೇರಿ ವಿವಿಧ ಜಿಲ್ಲೆಗಳ ರೈತರು ಇಲ್ಲಿಗೆ ಬಂದು ಸಸಿಗಳನ್ನು ಒಯ್ಯುತ್ತಾರೆ. ಅಲ್ಲದೇ, ವಿವಿಧೆಡೆಯ ವಿದ್ಯಾರ್ಥಿಗಳು ಕೂಡ ಶೈಕ್ಷಣಿಕ ಅಧ್ಯಯನಕ್ಕೆ ಬರುತ್ತಾರೆ. ನಾವು ಅವರಿಗೆ ಮಾರ್ಗದರ್ಶನ ಕೂಡ ನೀಡುತ್ತಿದ್ದೇವೆ. ತೋಟಗಾರಿಕೆ ಇಲಾಖೆ ಹಿರಿಯ ಅಧಿಕಾರಿಗಳೂ ಇಲ್ಲಿಗೆ ಭೇಟಿ ನೀಡಿ ನಮ್ಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ'' ಎಂದು ಟಾಕಳೆ ವಿವರಿಸಿದರು.
ವಿವಿಧ ಪ್ರಧಾನ ಹಣ್ಣುಗಳು:ರೋಗ ನಿರೋಧಕ ಮತ್ತು ಔಷಧೀಯ ಗುಣಗಳನ್ನು ಹೊಂದಿರುವ ಪ್ರಧಾನ ಮತ್ತು ಅಪ್ರಧಾನ ಹಣ್ಣುಗಳನ್ನು ಇಲ್ಲಿ ನಾಟಿ ಮಾಡಲಾಗಿದೆ. ಪ್ರಧಾನ ಪ್ರಕಾರದಲ್ಲಿ ಬಿಳಿ ಮತ್ತು ನೀಲಿ ನೇರಳೆ ಹಣ್ಣುಗಳನ್ನು ಬೆಳೆಯಲಾಗಿದೆ. ಇಲ್ಲಿ ಹಲಸಿನ ಹಣ್ಣಿನಲ್ಲಿ 7-8 ತಳಿಗಳಿದ್ದು, ಸಿದ್ದು, ಭೈರಸಂದ್ರ, ನಾಗಸಂದ್ರ, ಮಂಕಾಳೆ ರೆಡ್, ವಿಯೆಟ್ನಾಂ ರೆಡ್, ರಾಜಾ ಹಲಸು, ರುದ್ರಾಕ್ಷಿ ಹಲಸು, ಪ್ರಕಾಶಚಂದ್ರ ಹಾಗೂ ವಿಯೆಟ್ನಾಂ ಸೂಪರ್ ಅರ್ಲಿಗಳಿವೆ. ಅದೇ ರೀತಿ, ತೆಂಗು ಟಿ×ಡಿ, ಡಿ×ಡಿ, ಚಿಕ್ಕು ಸಸಿಗಳು, ಕಾಜು ವೆಂಗುರ್ಲಾ 4 ಮತ್ತು 7 ಹೆಸರಿನ ಸಸಿಗಳು ಸೇರಿ ಮತ್ತಿತರ ಹಣ್ಣುಗಳ ಸಸಿಗಳು ಇಲ್ಲಿ ಮಾರಾಟಕ್ಕೆ ಲಭ್ಯ ಇವೆ.
ಮಿಲ್ಕ್ ಫ್ರೂಟ್ (ETV Bharat) ಅಪ್ರಧಾನ ಹಣ್ಣುಗಳು:ಅತ್ಯಧಿಕ ಪೋಷಕಾಂಶ ಮತ್ತು ವಿವಿಧ ರೋಗಗಳಿಗೆ ರಾಮಬಾಣವಾಗಿರುವ ಬಟರ್ ಫ್ರೂಟ್, ಮಿರಾಕಲ್ ಫ್ರೂಟ್, ವಾಟರ್ ಆ್ಯಪಲ್, ಬ್ರೆಡ್ ಫ್ರೂಟ್, ಎಗ್ ಫ್ರೂಟ್, ಮೆಕಡಾಮಿಯಾ ನಟ್, ಲಾಂಗನ್, ಮಿಲ್ಕ್ ಫ್ರೂಟ್, ರಾಮ ಭೂತಾನ್, ಲಿಚ್ಚಿ, ಆಪಲ್, ಮ್ಯಾಂಗೋ ಸ್ಟಿನ್, ಕೋಕಂ, ಲಕ್ಷ್ಮಣ ಫಲ, ಹನುಮಾನ ಫಲ, ರಾಮಫಲ, ಬರ್ಬಾ, ಸ್ಟಾರ್ ಫ್ರೂಟ್ ಸೇರಿ ನಾವು ಹೆಸರೇ ಕೇಳದಿರುವ ಅನೇಕ ಹಣ್ಣುಗಳನ್ನೂ ಇಲ್ಲಿ ಬೆಳೆಯಲಾಗಿದ್ದು, ಈಗ ಅವು ಫಲ ಕೊಡುತ್ತಿವೆ. ಇವುಗಳ ಸಸಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ರೈತರಿಗೆ ಮಾರಾಟ ಮಾಡಲು ತೋಟಗಾರಿಕೆ ಇಲಾಖೆ ಸಿದ್ಧತೆ ನಡೆಸಿದೆ.
40 ಬಗೆಯ ಮಾವು:ಮಾವಿನ ಹಣ್ಣಿನಲ್ಲಿ 40 ವಿವಿಧ ಬಗೆಯ ಸಸಿಗಳನ್ನು ನಾಟಿ ಮಾಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಈಗ ಅವು ಹೂ ಬಿಟ್ಟಿವೆ. ಅಲ್ಲದೇ ಮಿಯಾಜಾಕಿ ಮಾವು ಕೂಡ ಬೆಳೆಯಲಾಗುತ್ತಿದೆ. ಸದ್ಯಕ್ಕೆ ಆಪೂಸ್, ಕೇಸರ್, ಮಲ್ಲಿಕಾ, ತೋತಾಪುರಿ, ಗೋವಾ ಮಂಕೂರ್, ಅಪ್ಪೆಮಿಡಿ, ಪೈರಿ, ದೂಧಪೇಡಾ, ಬೆನೆಶಾನ್, ಸ್ವರ್ಣರೇಖಾ, ಬಂಗಾನಪಲ್ಲಿ, ನೀಲಂ ಸೇರಿ 10-12 ಬಗೆಯ ಸಸಿಗಳನ್ನು ವಿತರಿಸಲಾಗುತ್ತಿದೆ.
ಶೇಡೆಗಾಳಿ ತೋಟಗಾರಿಕಾ ಕ್ಷೇತ್ರಕ್ಕೆ ವಿದ್ಯಾರ್ಥಿಗಳ ಭೇಟಿ (ETV Bharat) 2023-24ರಲ್ಲಿ 5 ಸಾವಿರ ಮಾವು, 4 ಸಾವಿರ ಲಿಂಬು, 4 ಸಾವಿರ ಕರಿಬೇವು ಸೇರಿ ಇನ್ನಿತರ ಸಸಿಗಳನ್ನು ಮಾರಾಟ ಮಾಡಲಾಗಿದೆ. 1 ಸಸಿಗೆ ಮಾವು 42 ರೂ., ಲಿಂಬೆ 18 ರೂ., ಕರಿಬೇವು 15 ರೂ., ಗೋಡಂಬಿ 30 ರೂ. ಹಾಗೂ ಅಂಜೂರಕ್ಕೆ 50 ರೂ. ದರ ನಿಗದಿಪಡಿಸಲಾಗಿದೆ. ಪ್ರತಿವರ್ಷ ಇಲ್ಲಿ ಬಳಸಿ ಉಳಿದಿರುವ ಸುಮಾರು 50 ಟನ್ ಎರೆಹುಳು ಗೊಬ್ಬರವನ್ನು ರೈತರಿಗೆ ಮಾರಾಟ ಮಾಡಲಾಗುತ್ತಿದೆ. ಅದೇ ರೀತಿ, ಅಲ್ಲಲ್ಲಿ ಜೇನುಪೆಟ್ಟಿಗೆಗಳನ್ನು ಅಳವಡಿಸಲಾಗಿದೆ. ಇವುಗಳಿಂದಲೂ ಇಲಾಖೆಗೆ ಉತ್ತಮ ಆದಾಯ ಬರುತ್ತಿದೆ.
ಪಾಲಿ ಹೌಸ್ನಲ್ಲಿ ಅಂಜೂರ:''ಒಣಭೂಮಿ ಪ್ರದೇಶದಲ್ಲಿ ಅಂಜೂರ ಬೆಳೆಯಲಾಗುತ್ತದೆ. ಆದರೆ, ಹೆಚ್ಚು ಮಳೆ ಬೀಳುವ ಖಾನಾಪುರದಲ್ಲಿ ಪಾಲಿಹೌಸ್ನಲ್ಲಿ 180 ಹನಿ ಮತ್ತು ಡಯನಾ ತಳಿಯ ಅಂಜೂರ ನಾಟಿ ಮಾಡಿದ್ದು, ಗಿಡಗಳು ಉತ್ತಮವಾಗಿ ಬೆಳೆದಿವೆ. ಇದು ರಾಜ್ಯದಲ್ಲೇ ಮೊದಲ ಪ್ರಯೋಗ. ಈಗ ಹಣ್ಣು ಬಿಡಲು ಶುರುವಾಗಿದೆ. ತುಂಬಾ ರುಚಿಕರವಾಗಿವೆ. ಇನ್ನೊಂದು ತಿಂಗಳಲ್ಲಿ ಪೂರ್ತಿ ಗಿಡಗಳಲ್ಲಿ ಹಣ್ಣು ಕಾಣಿಸಲಿವೆ. ಟೆಂಡರ್ ಕರೆದು ಮಾರಾಟ ಮಾಡಲಿದ್ದೇವೆ. ಒಳ್ಳೆಯ ಆದಾಯ ಬರುವ ನಿರೀಕ್ಷೆ ಇದೆ'' ಎನ್ನುತ್ತಾರೆ ರಾಜಕುಮಾರ ಟಾಕಳೆ.
ಕಾಳುಮೆಣಸು ಪ್ರಯೋಗ:''ಪ್ರಾಯೋಗಿಕವಾಗಿ 20 ಗುಂಟೆ ಪಾಲಿ ಹೌಸ್ ಜಾಗದಲ್ಲಿ 1 ಸಾವಿರ ಕಾಳುಮೆಣಸು (ಬೂಶ್ ಪೆಪ್ಪರ್) ಸಸಿ ನೆಟ್ಟಿದ್ದೇವೆ. ಯಾವುದೇ ರೋಗ-ಕೀಟಬಾಧೆ ಕಂಡು ಬಂದಿಲ್ಲ. ಇನ್ನೂ ಮೂರ್ನಾಲ್ಕು ವರ್ಷಗಳ ಬಳಿಕ ಇಳುವರಿ ಪ್ರಾರಂಭವಾಗಲಿದೆ. ವರ್ಷಕ್ಕೆ ಅಂದಾಜು 2.5 ಲಕ್ಷ ರೂ. ಆದಾಯದ ನಿರೀಕ್ಷೆ ಇದೆ. ಸಾಲಿನಿಂದ ಸಾಲಿಗೆ 3 ಅಡಿ, ಗಿಡದಿಂದ ಗಿಡಕ್ಕೆ 3 ಅಡಿ ಅಂತರ ಕಾಯ್ದುಕೊಳ್ಳಲಾಗಿದೆ. ಮಿಶ್ರ ಬೆಳೆಯಾಗಿ ಮೆಣಸಿನಕಾಯಿ, ಟೊಮೆಟೊ ಸೇರಿ ಮತ್ತಿತರ ಬೆಳೆ ಬೆಳೆಯಹುದಾಗಿದೆ. ಸದ್ಯ ಬೆಳೆದಿರುವ ಮೆಣಸಿನಕಾಯಿಯಿಂದಲೂ 60-80 ಸಾವಿರ ರೂ. ಆದಾಯದ ನಿರೀಕ್ಷೆಯಿದೆ. ಪಾಲಿ ಹೌಸ್ಗೆ ಗಾಳಿ ತಡೆಯಲು ಗಾಳಿ ಮರಗಳನ್ನು ಬೆಳೆಸಲಾಗಿದೆ'' ಎಂದು ರಾಜಕುಮಾರ ಟಾಕಳೆ ತಿಳಿಸಿದರು.
ರೈತರು, ವಿದ್ಯಾರ್ಥಿಗಳು ಸದುಪಯೋಗ ಪಡೆಯಿರಿ:ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ ಅವರು ಮಾತನಾಡಿ, ''ಪಶ್ಚಿಮಘಟ್ಟದಲ್ಲಿ ಬೆಳೆಯಬಹುದಾದ ಬೆಳೆಗಳ ಪರಿಚಯ ಈ ಭಾಗದ ರೈತರಿಗೆ ಇಲ್ಲ. ಅವರಿಗೆ ಇಂಥ ಬೆಳೆ ಬೆಳೆಯುವಂತೆ ಬರೀ ಬಾಯಿ ಮಾತಿನಲ್ಲಿ ಹೇಳಿದರೆ ಅವರು ಬೆಳೆಯುವುದಿಲ್ಲ. ಹಾಗಾಗಿ, ನಮ್ಮ ಕ್ಷೇತ್ರದಲ್ಲಿ ಬೆಳೆದು ತೋರಿಸೋಣ ಎಂದು ನಾನಾ ರೀತಿಯ ಹಣ್ಣಿನ ಸಸಿಗಳನ್ನು ನಾಟಿ ಮಾಡಿದ್ದೇವೆ. ಈಗ ಕೆಲವೊಂದು ಹಣ್ಣು ಬಿಡುತ್ತಿವೆ. ಅವುಗಳನ್ನು ನೋಡಲು ಬರುವ ರೈತರಿಗೆ ಸಾಕಷ್ಟು ಜ್ಞಾನ ಮತ್ತು ಮಾಹಿತಿ ಸಿಗುತ್ತಿದೆ. ಹೆಚ್ಚಿನ ಬೆಲೆಗೆ ಮಾರಾಟ ಆಗುವ ಹಣ್ಣುಗಳನ್ನು ರೈತರು ಬೆಳೆದರೆ ಹೆಚ್ಚಿನ ಲಾಭ ಪಡೆಯಬಹುದಾಗಿದೆ. ಈ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಿದ ರಾಜಕುಮಾರ ಟಾಕಳೆ ಮತ್ತು ಸಿಬ್ಬಂದಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮತ್ತು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ'' ಕೋರಿದರು.
ಮಾವಿನ ಗಿಡಗಳು (ETV Bharat) ಇದನ್ನೂ ಓದಿ:ಕೂಡಿ ಬಾಳಿಸುತಿದೆ ಕೃಷಿ.. ಒಂದೇ ಮನೆ ಮೂರು ಧರ್ಮ-ಮೂರು ಪಕ್ಷದ ಸ್ನೇಹಿತರು.. ಬಹುತ್ವ ಭಾರತಕ್ಕೊಂದು ಮಾದರಿ..
''ಕಳೆದ ಹತ್ತು ವರ್ಷಗಳಿಂದ ಈ ಕ್ಷೇತ್ರಕ್ಕೆ ನಾನು ಬರುತ್ತಿದ್ದೇನೆ. ಈ ಮೊದಲು ಇಲ್ಲಿ ಯಾವುದೇ ಅಭಿವೃದ್ಧಿ ಆಗಿರಲಿಲ್ಲ. ಆದರೆ, ರಾಜಕುಮಾರ ಟಾಕಳೆ ಅವರು ಬಂದ ಬಳಿಕ ಉನ್ನತಿ ಕಾಣುತ್ತಿದೆ. ಹೊಸ ತಳಿಗಳನ್ನು ಬೆಳೆದು, ರೈತರಿಗೆ ಸಸಿಗಳನ್ನು ವಿತರಿಸಲಾಗುತ್ತಿದೆ. ನಾನು ಕೂಡ ಮಾವು, ಲಿಂಬೆ ಸಸಿ ಒಯ್ದು ನಾಟಿ ಮಾಡಿದ್ದೇನೆ'' ಎಂಬುದು ರೈತ ಆನಂದ ಕಾಂಬಳೆ ಅವರ ಅಭಿಪ್ರಾಯ.
ಶೇಡೆಗಾಳಿ ತೋಟಗಾರಿಕಾ ಕ್ಷೇತ್ರಕ್ಕೆ ವಿದ್ಯಾರ್ಥಿಗಳ ಭೇಟಿ (ETV Bharat) ಸಿಬ್ಬಂದಿ ಕೊರತೆ:ಸದ್ಯಕ್ಕೆ ಶೇಡೆಗಾಳಿ ತೋಟಗಾರಿಕಾ ಕ್ಷೇತ್ರದಲ್ಲಿ ಸಹಾಯಕ ತೋಟಗಾರಿಕಾ ನಿರ್ದೇಶಕ ರಾಜಕುಮಾರ ಟಾಕಳೆ ಒಬ್ಬರೆ ಖಾಯಂ ಆಗಿದ್ದಾರೆ. ಇನ್ನುಳಿದಂತೆ ಹೊರಗುತ್ತಿಗೆಯಲ್ಲಿ ಓರ್ವ ಅಟೆಂಡರ್, ಟ್ರಾಕ್ಟರ್ ಚಾಲಕ, ರಾತ್ರಿ ಹೊತ್ತು ಓರ್ವ ಭದ್ರತಾ ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರ ಮತ್ತಷ್ಟು ಸಿಬ್ಬಂದಿಯನ್ನು ನೇಮಕ ಮಾಡಿದರೆ ಇನ್ನೂ ಅನೇಕ ಪ್ರಯೋಗಗಳನ್ನು ಕೈಗೊಳ್ಳಬಹುದು ಎನ್ನುತ್ತಾರೆ ಇಲ್ಲಿನ ಅಧಿಕಾರಿಗಳು.
ಇದನ್ನೂ ಓದಿ:ನಾವೀನ್ಯತೆ ಮೂಲಕ ಮಹಾನ್ ಕ್ರಾಂತಿ ಮಾಡಿದ ಯುವ ರೈತ; ಹಲವು ಅನ್ನದಾತರಿಗೆ ಮಾದರಿ ವೆಂಕಟೇಶ್