ಕರ್ನಾಟಕ

karnataka

ETV Bharat / state

ಲೋಕಸಭೆ ಚುನಾವಣೆ: ಮತದಾರರ ಸೆಳೆಯಲು ವಿಶೇಷ ಮತಗಟ್ಟೆಗಳ ಸ್ಥಾಪನೆ - Special Polling Booths

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ದಾವಣಗೆರೆ ಮತ್ತು ಹಾವೇರಿಯಲ್ಲಿ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

special polling booths
ವಿಶೇಷ ಮತಗಟ್ಟೆ (Etv Bharat)

By ETV Bharat Karnataka Team

Published : May 7, 2024, 8:19 AM IST

ದಾವಣಗೆರೆ/ಹಾವೇರಿ:ರಾಜ್ಯದಲ್ಲಿಂದು ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದೆ. ದಾವಣಗೆರೆ ಮತ್ತು ಹಾವೇರಿ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮತದಾರರನ್ನು ಸೆಳೆಯಲು ವಿಶೇಷ ಮತಗಟ್ಟೆಗಳನ್ನೂ ಮಾಡಲಾಗಿದೆ.

ಹಾವೇರಿಯಲ್ಲಿ ಗ್ರೀನ್ ಬೂತ್: ಹಾವೇರಿ ಜಿಲ್ಲಾಡಳಿತ ಗ್ರೀನ್ ಬೂತ್ ರಚಿಸಿದೆ. ತೆಂಗಿನಗರಿಯ ತಳಿರು ತೋರಣದಿಂದ ಮತಗಟ್ಟೆಗಳನ್ನು ಅಲಂಕರಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆಯ ಜೊತೆಗೆ ಸಹಾಯವಾಣಿ ತೆರೆಯಲಾಗಿದೆ. ಜಿಲ್ಲೆಯಲ್ಲಿ 1,982 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 2,000ಕ್ಕೂ ಅಧಿಕ ಸಿಬ್ಬಂದಿಯನ್ನು ಚುನಾವಣಾ ಕೆಲಸಕ್ಕೆ ನಿಯೋಜಿಸಲಾಗಿದೆ. ಒಟ್ಟು 17,92,774 ಮತದಾರರ ಪೈಕಿ ಪುರುಷರು-9,02,119, ಮಹಿಳೆಯರು-8,90,572, ಇತರೆ- 83 ಮಂದಿ ಇದ್ದಾರೆ.

ವಿಶೇಷ ಮತಗಟ್ಟೆ (ETV Bharat)

ದಾವಣಗೆರೆಯಲ್ಲಿ ವಿಶೇಷ ಮತಗಟ್ಟೆಗಳು: ಮತದಾನವನ್ನು ಹಬ್ಬದಂತೆ ಸಂಭ್ರಮದಿಂದ ಆಚರಿಸಲು ಜಿಲ್ಲೆಯಾದ್ಯಂತ 63 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ನಡೆದಿದೆ. ಇನ್ನು, ಮಹಿಳಾ ಸಿಬ್ಬಂದಿಯಿಂದಲೇ ನಿರ್ವಹಿಸಲ್ಪಡುವ 35 ಸಖಿ ಮತಗಟ್ಟೆಗಳಿವೆ. ಧ್ಯೇಯಾಧಾರಿತ ಮತಗಟ್ಟೆಗಳಲ್ಲಿ ಅಡಿಕೆ, ಕೃಷಿ, ವೀಳ್ಯದೆಲೆ, ಸಂಚಾರ ನಿಯಂತ್ರಣ, ಜಲಸಂರಕ್ಷಣೆ, ಸ್ಕೌಟ್ ಆ್ಯಂಡ್ ಗೈಡ್ಸ್, ಅರಣ್ಯ, ಅಂಗನವಾಡಿ, ಸಾಂಪ್ರದಾಯಿಕ ಮತಗಟ್ಟೆಗಳಲ್ಲಿ ಪರಿಸರಸ್ನೇಹಿ, ಲಂಬಾಣಿ ಸಂಸ್ಕೃತಿ, ಯಾದವ, ಹಕ್ಕಿಪಿಕ್ಕಿ ಸಂಪ್ರದಾಯ ಸೇರಿದಂತೆ ಜನಜೀವನದ ಬಗ್ಗೆ ಗಮನ ಸೆಳೆಯುವ ವಿಚಾರಗಳ ಚಿತ್ರಣವಿದೆ. ಯುವಕರಿಂದ ನಿರ್ವಹಿಸಲ್ಪಡುವ ಯುವ ಮತಗಟ್ಟೆಗಳ ಜೊತೆಗೆ ವಿಶೇಷಚೇತನರಿಂದ ನಿರ್ವಹಿಸಲ್ಪಡುವ ಮತಗಟ್ಟೆಗಳನ್ನೂ ಸಿದ್ಧಗೊಳಿಸಲಾಗಿದೆ.

ಸಾಂಪ್ರದಾಯಿಕ ಮತಗಟ್ಟೆ:ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿರುವ ಜಾಲಿನಗರದ ಜನತಾ ವಿದ್ಯಾಲಯದ ಮತಗಟ್ಟೆ ಸಂಖ್ಯೆ 169ರಲ್ಲಿ ಪರಿಸರಸ್ನೇಹಿ ವಸ್ತುಗಳಿಗೆ ಒತ್ತು ನೀಡಲಾಗಿದೆ. ಇಲ್ಲಿ ಬಿಸಿಲಿಗೆ ತಂಪಾಗಿರಲು ಮಣ್ಣಿನಿಂದ ಮಾಡಿದ ಮನೆ, ಛಾವಣಿ ಮೇಲೆ ತೆಂಗಿನ ಗರಿ, ಮಣ್ಣಿನಿಂದ ಮಡಿಕೆ ತಯಾರಿಸುವ ಟಿಗರಿ, ಉಪಯೋಗಿಸುವ ಮಡಿಕೆಗಳ ಪ್ರದರ್ಶನ, ಬಾವಿಯ ಸಂರಕ್ಷಣೆ, ಪಕ್ಷಿಗಳಿಗೆ ನೀರುಣಿಸುವುದು, ಪ್ಲಾಸ್ಟಿಕ್ ಬದಲಾಗಿ ಬಿದಿರಿನಿಂದ ತಯಾರಿಸಿದ ಬೀಸಣಿಕೆ, ಬುಟ್ಟಿಗಳ ಉಪಯೋಗ, ಪ್ಲಾಸ್ಟಿಕ್ ಬ್ಯಾಗ್‌ಗಳಿಗೆ ಬದಲಾಗಿ ಬಟ್ಟೆ ಬ್ಯಾಗ್‍ಗಳನ್ನು ಉಪಯೋಗಿಸುವ ಮೂಲಕ ಪರಿಸರ ಸಂರಕ್ಷಣೆ ವಿಷಯಾಧಾರಿತ ಮತಗಟ್ಟೆಗಳನ್ನು ತಯಾರಿಸಲಾಗಿದೆ. ಇದನ್ನು ಚಿತ್ರಕಲಾ ಪರಿಷತ್ ಕಲಾವಿದರು ನಿರ್ಮಿಸಿದ್ದಾರೆ.

ವಿಶೇಷ ಮತಗಟ್ಟೆ (ETV Bharat)

ಸಖಿ ಮತಗಟ್ಟೆಗಳು:ದಾವಣಗೆರೆ ಉತ್ತರದ ಎಂ.ಸಿ.ಸಿ. ಬಿ. ಬ್ಲಾಕ್‍ನ ಮತಗಟ್ಟೆ 208ರಲ್ಲಿ ಸಖಿ ಮತಗಟ್ಟೆಯನ್ನು ಸ್ಥಾಪಿಸಿದ್ದು, ಇಲ್ಲಿ ಪಿಆರ್‌ಓ, ಎಪಿಆರ್‌ಓ, ಮತಗಟ್ಟೆ ಸಿಬ್ಬಂದಿ ಎಲ್ಲರೂ ಮಹಿಳೆಯರೇ ಆಗಿದ್ದಾರೆ. ಇಲ್ಲಿ 656 ಪುರುಷ, 671 ಮಹಿಳಾ ಮತದಾರರು ಸೇರಿ ಒಟ್ಟು 1,327 ಮತದಾರರಿದ್ದಾರೆ.

ವಿಶೇಷ ಮತಗಟ್ಟೆಗಳು: ಜಗಳೂರು ತಾಲೂಕಿನ ಮುಸ್ಟೂರಿನ 238ನೇ ಮತಗಟ್ಟೆಯಲ್ಲಿ ಧ್ಯೇಯ ಮಾದರಿ ಜಲಾನಯನ ಪ್ರಾತ್ಯಕ್ಷಿತೆ, ಮಳೆ ನೀರು ಸಂರಕ್ಷಣೆಯ ಬಗ್ಗೆ ವಿವರಿಸಲಾಗಿದೆ. ದಾವಣಗೆರೆ ದಕ್ಷಿಣದ ಮತಗಟ್ಟೆ 139ರಲ್ಲಿ ಜಯದೇವ ಹಾಸ್ಟೆಲ್, ಆನಗೋಡು ಮಠ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೃಷಿ ಆಧಾರಿತ ಮತಗಟ್ಟೆ ಸ್ಥಾಪಿಸಲಾಗಿದೆ. ಇಲ್ಲಿ ಮೆಕ್ಕೆಜೋಳದ ಸ್ವಾಗತ ಕಮಾನು ನಿರ್ಮಿಸಿ ಕೃಷಿ ಮಾಹಿತಿಯುಳ್ಳ ಫಲಕಗಳನ್ನು ಹಾಕಲಾಗಿದೆ. ಹೊನ್ನಾಳಿ ತಾಲೂಕಿನ ಆಂಜನೇಯಪುರದಲ್ಲಿ ಲಂಬಾಣಿ ಸಾಂಪ್ರದಾಯಿಕ ಮತಗಟ್ಟೆ, ಚನ್ನಗಿರಿ ತಾಲೂಕಿನ ಅಸ್ತಾಪನಹಳ್ಳಿಯಲ್ಲಿ ಹಕ್ಕಿಪಿಕ್ಕಿ ಜನಾಂಗದ ಮತಗಟ್ಟೆ, ದಾವಣಗೆರೆ ನಗರದ ನೀರಾವರಿ ಇಲಾಖೆ ಮತಗಟ್ಟೆ 201ರಲ್ಲಿ ಸಂಚಾರಿ ನಿಯಮಗಳ ಜಾಗೃತಿಯುಳ್ಳ ಮತಗಟ್ಟೆ, ಹರಿಹರ ವೀಳ್ಯದೆಲೆ, ಚನ್ನಗಿರಿ ಪಟ್ಟಣ ಅಡಿಕೆ ಬೆಳೆ ಕುರಿತಂತೆ ಮತಗಟ್ಟೆಗಳನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದೆ.

ಇದನ್ನೂ ಓದಿ:ಭಕ್ತರಿಗೆ ಸೂಚನೆ: ಸವದತ್ತಿ ಯಲ್ಲಮ್ಮದೇವಿ ದರ್ಶನಕ್ಕೆ ಇಂದು ಅವಕಾಶವಿಲ್ಲ - Savadatti Yallamma Temple

ABOUT THE AUTHOR

...view details