ಬೆಂಗಳೂರು:ಗ್ರೇಸ್ ಮಾರ್ಕ್ಸ್ ಮೂಲಕ ಫಲಿತಾಂಶ ಕುಸಿತ ತಡೆಯುವ ನಿರ್ಧಾರ ಮಾಡಿ ಟೀಕೆಗೆ ಗುರಿಯಾಗಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಇದೀಗ ಎಸ್ಎಸ್ಎಲ್ಸಿ ಪರೀಕ್ಷೆ-2ರಲ್ಲಿ ಫಲಿತಾಂಶ ಪ್ರಮಾಣ ಹೆಚ್ಚಳಕ್ಕೆ ಬ್ರಿಡ್ಜ್ ಕೋರ್ಸ್ ಆರಂಭಿಸಿದೆ. ಪರೀಕ್ಷೆಗೆ ಒಂದು ತಿಂಗಳಿಕ್ಕಿಂತ ಕಡಿಮೆ ಸಮಯ ಇರುವ ಹಿನ್ನೆಲೆ ವಿಶೇಷ ತರಗತಿ ಕಾರ್ಯಾಗಾರದ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ದಗೊಳಿಸಲಾಗುತ್ತಿದೆ.
ವಿಶೇಷ ತರಗತಿ:ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ಕ್ಕೆ ಹೆಸರು ನೋಂದಣಿ ಮಾಡಿರುವ ವಿದ್ಯಾರ್ಥಿಗಳಿಗೆ ಇಂದಿನಿಂದ ಜೂನ್ 5ರ ತನಕ ಆಯಾ ಪ್ರೌಢಶಾಲೆಗಳಲ್ಲಿ ವಿಶೇಷ ತರಗತಿ ನಡೆಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ದೇಶನ ನೀಡಿದ್ದು, ಪರೀಕ್ಷಾ ಫಲಿತಾಂಶದ ಪ್ರಮಾಣ ಹೆಚ್ಚಳಕ್ಕೆ ಕಸರತ್ತು ನಡೆಸಿದೆ. 2024ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ಕ್ಕೆ ನೋಂದಾಯಿಸಿಕೊಂಡು ಪರೀಕ್ಷೆಗೆ ಗೈರು ಹಾಜರಾದ, ನಾಟ್ ಕಂಪ್ಲೀಟ್ ಆದ,ಅಂಕಗಳ ಹೆಚ್ಚಳ ಮಾಡಿಕೊಳ್ಳಲು ಇಚ್ಛಿಸಿದ, ಹಾಗೂ ಹಿಂದಿನ ಸಾಲಿನಲ್ಲಿ ಅನುತ್ತೀರ್ಣ ಅಭ್ಯರ್ಥಿಗಳಿಗೆ ಜೂನ್ 7 ರಿಂದ 14ರ ವರೆಗೆ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ಆರಂಭಗೊಳ್ಳುವ ಎರಡು ದಿನದ ಮೊದಲಿನವರೆಗೂ ಎಲ್ಲ ಮಕ್ಕಳಿಗೆ ವಿಶೇಷ ತರಗತಿಗಳ ಮೂಲಕ ಪಠ್ಯವನ್ನು ಬೋಧಿಸಲಾಗುತ್ತದೆ.
ಮೇ 29ರ ತನಕ ಶಾಲೆಗಳಿಗೆ ರಜೆ ಇದ್ದರೂ ಶಾಲೆಗಳಿಗೆ ಇಂದಿನಿಂದ ಆಗಮಿಸುವಂತೆ ಶಿಕ್ಷಕರು ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ. ಹಾಗಾಗಿ ಐದಿನೈದು ದಿನ ಮೊದಲೇ ಶಿಕ್ಷಕರು ಶಾಲೆಗಳಿಗೆ ಆಗಮಿಸಬೇಕಾಗಿದೆ. ಶಾಲೆಗಳಿಗೆ ಮೇ 15ರಿಂದಲೇ ಆಗಮಿಸಬೇಕಿದೆ. ಪರೀಕ್ಷಾ ಕೆಲಸ, ಚುನಾವಣಾ ಕೆಲಸದ ಒತ್ತಡದಿಂದಾಗಿ ಕುಟುಂಬದ ಜೊತೆ ಸಮಯ ಕಳೆಯಲು ಸಾಧ್ಯವಾಗಿಲ್ಲ ಅಷ್ಟರಲ್ಲೇ ಶಾಲೆಗಳಿಗೆ 15 ದಿನ ಮೊದಲೇ ಮರಳಲು ಸೂಚನೆ ನೀಡಲಾಗಿದೆ ಎಂದು ಶಿಕ್ಷಕರು ಬೇಸರ ಹೊರಹಾಕಿದ್ದಾರೆ. ಆದರೆ, ಶಿಕ್ಷಣ ಇಲಾಖೆ ನಿರ್ದೇಶನ ಪಾಲಿಸಲೇಬೇಕಾದ ಹಿನ್ನೆಲೆಯಲ್ಲಿ ಶಾಲೆಗಳತ್ತ ಶಿಕ್ಷಕರು ಹೆಜ್ಜೆ ಇಟ್ಟಿದ್ದಾರೆ.