ಶಿವಮೊಗ್ಗ: ಜಿಲ್ಲೆಯಲ್ಲಿ ಹೊಸ ವರ್ಷಾಚರಣೆ ಆಚರಿಸಲು ವ್ಯವಸ್ಥೆ ಮಾಡಿಕೊಂಡಿರುವ ಹೋಂ ಸ್ಟೇ, ರೆಸಾರ್ಟ್, ಕ್ಲಬ್ ಮಾಲೀಕರು ಕಡ್ಡಾಯವಾಗಿ ಪೊಲೀಸ್ ಅನುಮತಿ ಪಡೆಯಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ಕುಮಾರ್ ತಿಳಿಸಿದ್ದಾರೆ. ನಗರದ ಡಿಎಆರ್ ಸಭಾಂಗಣದಲ್ಲಿ ಕ್ಲಬ್, ಹೋಟೆಲ್, ಹೋಂ ಸ್ಟೇ ಹಾಗೂ ರೆಸಾರ್ಟ್ ಮಾಲೀಕರೊಂದಿಗೆ ಏರ್ಪಡಿಸಲಾಗಿದ್ದ ಸಭೆ ನಡೆಸಿ ಅವರು ಸೂಚನೆಗಳನ್ನು ನೀಡಿದರು.
ಹೊಸ ವರ್ಷಾಚರಣೆ: ಹೋಂ ಸ್ಟೇ, ರೆಸಾರ್ಟ್ ಮಾಲೀಕರಿಗೆ ಶಿವಮೊಗ್ಗ ಎಸ್ಪಿ ಖಡಕ್ ಸೂಚನೆ - INSTRUCTIONS TO RESORT OWNERS
ಹೊಸ ವರ್ಷಾಚರಣೆ ಆಚರಿಸಲು ವ್ಯವಸ್ಥೆ ಮಾಡಿಕೊಂಡಿರುವ ಹೋಂ ಸ್ಟೇ, ರೆಸಾರ್ಟ್ನವರು ಕಡ್ಡಾಯವಾಗಿ ಪೊಲೀಸ್ ಅನುಮತಿ ಪಡೆಯಬೇಕು ಎಂದು ಎಸ್ಪಿ ಮಿಥುನ್‌ಕುಮಾರ್ ತಿಳಿಸಿದ್ದಾರೆ.
ಎಸ್ಪಿ ಖಡಕ್ ಸೂಚನೆ (ETV Bharat)
Published : Dec 28, 2024, 9:18 PM IST
ಎಸ್ಪಿ ಕೊಟ್ಟ ಸೂಚನೆಗಳು:
- ಹೊಸ ವರ್ಷ ಆಚರಣೆಯ ಹಿನ್ನೆಲೆ ಯಾವುದೇ ಕಾರ್ಯಕ್ರಮ ಆಯೋಜಿಸುವಾಗ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ಪೊಲೀಸ್ ಇಲಾಖೆಯ ಗಮನಕ್ಕೆ ಬಾರದೆ ಮತ್ತು ಅನುಮತಿ ಪಡೆಯದೆ ಯಾವುದೇ ರೀತಿಯ ಕಾರ್ಯಕ್ರಮ ಆಯೋಜಿಸುವಂತಿಲ್ಲ.
- ಕಾರ್ಯಕ್ರಮ ಆಯೋಜಿಸುವವರು ಸ್ಥಳಾವಕಾಶವನ್ನು ಗಮನದಲ್ಲಿಟ್ಟುಕೊಂಡು, ಅಷ್ಟೇ ಜನರಿಗೆ ಅನುಮತಿ ನೀಡಬೇಕು. ಆಯೋಜಿಸಲಾಗುವ ಕಾರ್ಯಕ್ರಮಕ್ಕೆ ಎಷ್ಟು ಜನ ಸೇರುತ್ತಾರೆ ಮತ್ತು ಸಂಖ್ಯೆಗೆ ಅನುಗುಣವಾಗಿ ಕೈಗೊಳ್ಳಲಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು.
- ಕಾರ್ಯಕ್ರಮದ ಆಯೋಜಕರು ಸಂಭ್ರಮಾಚರಣೆಯಲ್ಲಿ ಮದ್ಯಪಾನಕ್ಕೆ ಅವಕಾಶ ಇದ್ದಲ್ಲಿ, ಅಬಕಾರಿ ಇಲಾಖೆಯ ಷರತ್ತು ಹಾಗೂ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವ ಸ್ಥಿತಿಯಲ್ಲಿ ಇಲ್ಲದಿದ್ದಲ್ಲಿ ಬೇರೆ ಚಾಲಕರ ಏರ್ಪಾಡು ಮಾಡಿ ಕಳುಹಿಸಬೇಕು. ಇಲ್ಲವಾದಲ್ಲಿ ಅಲ್ಲಿಯೇ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಬೇಕು.
- ಹೊಸ ವರ್ಷದ ಆಚರಣೆಯನ್ನು ಮಧ್ಯರಾತ್ರಿ 12 ಗಂಟೆಗೆ ಆಚರಿಸಿ, ರಾತ್ರಿ 1 ಗಂಟೆಯ ಒಳಗೆ ಎಲ್ಲಾ ರೀತಿಯ ಹೊರಾಂಗಣ ಕಾರ್ಯಕ್ರಮ ಮುಕ್ತಾಯ ಮಾಡಬೇಕು.
- ಕಾರ್ಯಕ್ರಮಕ್ಕೆ ಬರುವ ವಾಹನಗಳಿಗೆ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. 200ಕ್ಕಿಂತ ಹೆಚ್ಚಿನ ಸಾರ್ವಜನಿಕರು ಸೇರುವ ಸ್ಥಳದಲ್ಲಿ, ಕಡ್ಡಾಯವಾಗಿ ಸಿಸಿಟಿವಿಗಳನ್ನು ಅಳವಡಿಸಬೇಕು. ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ಮತ್ತು ಅತಿಥಿಗಳ ಹೆಸರು, ವಿವರವನ್ನು ಬರೆದುಕೊಂಡು, ಒಂದು ಗುರುತಿನ ಚೀಟಿಯನ್ನು ಪಡೆಯಬೇಕು.
- ಕಾರ್ಯಕ್ರಮದ ಆಯೋಜಕರು ಕಾರ್ಯಕ್ರಮ ಆಯೋಜಿಸಿದ ಸ್ಥಳದಲ್ಲಿ ಒಳ ಬರುವ ಮತ್ತು ಹೊರ ಹೋಗುವ ದ್ವಾರದಲ್ಲಿ ತಮ್ಮ ಸಿಬ್ಬಂದಿ ನೇಮಿಸಬೇಕು. ಸಾರ್ವಜನಿಕರ ಸುರಕ್ಷತೆ ಬಗ್ಗೆ ನಿಗಾವಹಿಸಬೇಕು.
- ಕಾರ್ಯಕ್ರಮದಲ್ಲಿ ಭಾಗವಹಿಸುವ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ. ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಂಡು, ಎಚ್ಚರದಿಂದಿ ಇರಬೇಕು. ಯಾವುದೇ ಅಹಿತಕರ ಘಟನೆ ಜರುಗಿದಾಗ ತಕ್ಷಣ 112 ತುರ್ತು ಸಹಾಯವಾಣಿಗೆ ಕರೆ ಮಾಡಬೇಕು.
- ಕಾರ್ಯಕ್ರಮದಲ್ಲಿ ಅಳವಡಿಸುವ ಧ್ವನಿವರ್ಧಕ, ಪಟಾಕಿ ಸಿಡಿಸುವುದರಿಂದ ಸಾರ್ವಜನಿಕರಿಗೆ ಕಿರಿಕಿರಿ ಅಥವಾ ತೊಂದರೆಯಾಗದ ರೀತಿ ನೋಡಿಕೊಳ್ಳಬೇಕು. ಕಾರ್ಯಕ್ರಮ ಆಯೋಜನೆಯ ಸ್ಥಳದಲ್ಲಿ ಸ್ವಿಮ್ಮಿಂಗ್ ಪೂಲ್ ಇದ್ದಲ್ಲಿ, ಹೆಚ್ಚಿನ ಗಮನ ಹರಿಸಬೇಕು. ಈಜುಕೊಳಕ್ಕೆ ಸಾರ್ವಜನಿಕರಿಗೆ ಅವಕಾಶವಿದ್ದಲ್ಲಿ ನುರಿತ ಈಜು ತಜ್ಞರನ್ನು ನೇಮಕ ಮಾಡಬೇಕು.
ಇದನ್ನೂ ಓದಿ:ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು: ಪೊಲೀಸ್, ಸಿವಿಲ್ ಡಿಫೆನ್ಸ್, ಗೃಹರಕ್ಷಕ ದಳ 11,830 ಸಿಬ್ಬಂದಿಯಿಂದ ಭದ್ರತೆ