ಬೆಂಗಳೂರು:ರಾಜ್ಯದಲ್ಲಿ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಕಾರ್ಯ ಚುರುಕಾಗಿದ್ದು, 2024ರ ಹಿಂಗಾರು ಹಂಗಾಮಿನಲ್ಲಿ 2.97 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಗಳ ಬೇಡಿಕೆಗೆ, 4.29 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಗಳು ಲಭ್ಯವಿದೆ. ರಾಜ್ಯಾದ್ಯಂತ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳ ಮೂಲಕ ಗುರುವಾರದವರೆಗೆ 85,392 ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ.
ರೈತ ಸಂಪರ್ಕ ಕೇಂದ್ರಗಳಲ್ಲಿ 1.51 ಲಕ್ಷ ಕ್ವಿಂಟಾಲ್‌ಗಳಷ್ಟು ದಾಸ್ತಾನು ಇದೆ. ಉಳಿದ ದಾಸ್ತಾನು ಸಂಬಂಧಿಸಿದ ಸಂಸ್ಥೆಗಳಲ್ಲಿ ಲಭ್ಯವಿದ್ದು, ಬೇಡಿಕೆ ಆಧಾರದ ಮೇಲೆ ಸರಬರಾಜು ಮಾಡಲಾಗುತ್ತದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬಿತ್ತನೆ ಬೀಜ ವಿತರಣೆ ಕಾರ್ಯ ಪ್ರಗತಿಯಲ್ಲಿದೆ. ಪ್ರಸ್ತುತವಾಗಿ ಯಾವುದೇ ಬಿತ್ತನೆ ಬೀಜದ ಕೊರತೆಯಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಜೋಳ, ನೆಲಗಡಲೆ, ಕಡಲೆ ಮತ್ತು ಗೋಧಿ ಬೆಳೆಗಳ ಬಿತ್ತನೆ ಬೀಜಗಳ ಬೇಡಿಕೆ ಮತ್ತು ಲಭ್ಯತೆ ಈ ಕೆಳಕಂಡಂತೆ ಇದೆ.
ಬೆಳೆಗಳು | ಬೇಡಿಕೆ | ಲಭ್ಯತೆ | |
1. | ಜೋಳ | 6,861 ಕ್ವಿಂಟಾಲ್ | 10,690 ಕ್ವಿಂ. |
2. | ನೆಲಗಡಲೆ | 60,747 ಕ್ವಿಂ. | 1,30,662 ಕ್ವಿಂ. |
3. | ಕಡಲೆ | 2,14,359 ಕ್ವಿಂ. | 2,50,000 ಕ್ವಿಂ. |
4. | ಗೋಧಿ | 8,218 ಕ್ವಿಂ. | 8,990 ಕ್ವಿಂ. |
ವಿವಿಧ ಬೆಳೆಗಳ ಮಾರಾಟ ದರಗಳಲ್ಲಿ ಏರಿಕೆ: ಬಿತ್ತನೆ ಬೀಜಗಳ ಮಾರಾಟ ದರಗಳನ್ನು ನಿಗದಿಪಡಿಸುವ ಸಂದರ್ಭಗಳಲ್ಲಿ, ಬಿತ್ತನೆ ಬೀಜ ಖರೀದಿ ದರಗಳು ಹಾಗೂ ಗರಿಷ್ಠ ಎಪಿಎಂಸಿ ಮಾರಾಟ ದರಗಳನ್ನು ಆಧಾರವಾಗಿ ಪರಿಗಣಿಸಲಾಗುತ್ತದೆ. 2023-24ನೇ ಸಾಲಿಗೆ ಹೋಲಿಸಿದಾಗ, 2024-25ನೇ ಸಾಲಿನಲ್ಲಿ ವಿವಿಧ ಬೆಳೆಗಳ ಮಾರಾಟ ದರಗಳಲ್ಲಿ ಶೇ.13.07ರಿಂದ 15.88ರಷ್ಟು ಏರಿಕೆ ಕಂಡಿದೆ.
ಬೀಜೋತ್ಪಾದನೆಯನ್ನು ಕರ್ನಾಟಕ ರಾಜ್ಯ ಬೀಜ ನಿಗಮ, ರಾಷ್ಟ್ರೀಯ ರಾಜ್ಯ ಬೀಜ ನಿಗಮ, ಕರ್ನಾಟಕ ಎಣ್ಣೆಬೀಜ ಬೆಳೆಗಾರರ ಮಹಾ ಮಂಡಳಿ ಹಾಗೂ ಖಾಸಗಿ ಸಂಸ್ಥೆಗಳು ರೈತರ ಜಮೀನಿನಲ್ಲಿಯೇ ಕೈಗೊಂಡು ಸರಬರಾಜು ಮಾಡುವುದರಿಂದ ಖರೀದಿ ದರ ಹೆಚ್ಚಳ ಮೊತ್ತವು ಬೀಜೋತ್ಪಾದನೆ ಕೈಗೊಳ್ಳುವ ರೈತರಿಗೆ ವರ್ಗಾವಣೆಯಾಗಿದೆ. 2023-24ನೇ ಸಾಲಿಗೆ ಹೋಲಿಸಿದಾಗ, 2024-25ನೇ ಸಾಲಿನಲ್ಲಿ ವಿವಿಧ ಬೆಳೆಗಳ ಎಪಿಎಂಸಿ ಮಾರಾಟ ದರಗಳಲ್ಲಿ ಗರಿಷ್ಠ ಶೇ.0.73ರಿಂದ 31.52ವರೆಗೆ ಹೆಚ್ಚಳವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.