ಕರ್ನಾಟಕ

karnataka

ETV Bharat / state

ವಂಚನೆ ಆರೋಪ: ಚಾಮರಾಜನಗರ ಕೋರ್ಟ್​ಗೆ ಸ್ನೇಹಮಯಿ ಕೃಷ್ಣ ಹಾಜರು - Snehamayi Krishna - SNEHAMAYI KRISHNA

ಸಾಲ ಮರಳಿಸದೇ ವಂಚನೆ ಮಾಡಿರುವ ಆರೋಪ ಪ್ರಕರಣದಲ್ಲಿ ಮೈಸೂರು ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಚಾಮರಾಜನಗರ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿದ್ದರು. ನನ್ನ ವಿರುದ್ಧದ ಈ ಸುಳ್ಳು ಆರೋಪದ ಬಗ್ಗೆ ಶೀಘ್ರದಲ್ಲೇ ನಿಜಾಂಶ ಗೊತ್ತಾಗಲಿದೆ ಎಂದು ಅವರು ಪ್ರತಿಕ್ರಿಯಿಸಿದರು.

snehamayi krishna
ಸ್ನೇಹಮಯಿ ಕೃಷ್ಣ (ETV Bharat)

By ETV Bharat Karnataka Team

Published : Sep 27, 2024, 10:01 PM IST

ಚಾಮರಾಜನಗರ:ಸಾಲದ ಹಣ ಕೊಡದೇ ವಂಚನೆ ಮಾಡಿರುವ ಆರೋಪ ಪ್ರಕರಣ ಸಂಬಂಧ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಶುಕ್ರವಾರ ಚಾಮರಾಜನಗರದ ಎಸಿಜೆ ನ್ಯಾಯಾಲಯಕ್ಕೆ ಹಾಜರಾದರು.

ಕಂತಿನ ರೂಪದಲ್ಲಿ ಒಟ್ಟು 3 ಲಕ್ಷ ರೂ. ಹಣವನ್ನು ಪಡೆದು, ಬಳಿಕ ಸಾಲ ವಾಪಸ್ ಮಾಡದೇ ವಂಚಿಸಿದ್ದಾರೆಂದು ಆರೋಪಿಸಿ ಕರುಣಾಕರ್ ಎಂಬವರು ಸ್ನೇಹಮಯಿ ಕೃಷ್ಣ ವಿರುದ್ಧ ದೂರು ನೀಡಿದ್ದರು. ಈ ಸಂಬಂಧ ಸ್ನೇಹಮಯಿ ಕೃಷ್ಣ ಶುಕ್ರವಾರ ​​ ಮಧ್ಯಾಹ್ನ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದರು.

ಸ್ನೇಹಮಯಿ ಕೃಷ್ಣ ಪ್ರತಿಕ್ರಿಯೆ (ETV Bharat)

ಪ್ರಕರಣದ ಬಗ್ಗೆ ಸ್ನೇಹಮಯಿ ಕೃಷ್ಣ ಹೇಳಿದ್ದೇನು?:ನ್ಯಾಯಾಲಯದ ವಿಚಾರಣೆಗೆ ಹಾಜರಾದ ಬಳಿಕ‌ ಸ್ನೇಹಮಯಿ ಕೃಷ್ಣ ಮಾಧ್ಯಮದವರೊಂದಿಗೆ ಮಾತನಾಡಿ, ''ಕರುಣಾಕರ್ ಎಂಬವರು ನನಗೆ ಪರಿಚಿತರೇ ಆಗಿದ್ದು, ನನ್ನ ವಿರುದ್ದ ಸುಳ್ಳು ಪ್ರಕರಣ ದಾಖಲಿಸಿದ್ದಾರೆ.‌ ನಾನು ಅವರ ಬಳಿ 50 ಸಾವಿರ ರೂ. ಸಾಲವನ್ನು ಪಡೆದಿದ್ದು ನಿಜ, ಆದರೆ, 3 ಲಕ್ಷ ರೂ. ಸಾಲ‌ ಕೊಡಿಸುವುದಾಗಿ ಪ್ರಾಮಿಸರಿ ನೋಟ್ ಬರೆಸಿಕೊಂಡಿದ್ದರು. ಪ್ರತಿ ತಿಂಗಳು 50 ಸಾವಿರ ಪಡೆದ ಸಾಲಕ್ಕೆ ಬಡ್ಡಿ ಕೊಡುತ್ತಾ ಬಂದಿದ್ದೇನೆ'' ಎಂದರು.

''ನ್ಯಾಯಾಧೀಶರ ಮುಂದೆಯೂ ಇದನ್ನು ಹೇಳಿದ್ದು, 50 ಸಾವಿರಕ್ಕೆ ಎಷ್ಟು ಸೇರಿಸಿ ಕೊಡ್ತಿರಾ ಅಂತ ಕೇಳಿದರು. ಅದಕ್ಕೆ, 25 ಸಾವಿರ ಸೇರಿಸಿ 75 ಸಾವಿರ ಕೊಡಲು ಒಪ್ಪಿದ್ದೇನೆ. ನನ್ನ ವಿರುದ್ಧದ ಈ ಸುಳ್ಳು ಆರೋಪದ ಬಗ್ಗೆ ಶೀಘ್ರದಲ್ಲೇ ನಿಜಾಂಶ ಗೊತ್ತಾಗಲಿದೆ. ನನ್ನ ವಿರುದ್ಧ ಒಟ್ಟು 22 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ, 9 ಪ್ರಕರಣಗಳು ಬೋಗಸ್ ಎಂದು ಬಿ ರಿಪೋರ್ಟ್ ಆಗಿದೆ, 8 ಪ್ರಕರಣಗಳಲ್ಲಿ ನಾನು ನಿರಪರಾಧಿ ಅಂತ ಸಾಬೀತಾಗಿದೆ. ಇತರ 3 ಪ್ರಕರಣಗಳಲ್ಲಿ ವಿಚಾರಣೆ ನಡೆಯುತ್ತಿದೆ. ಅದರಂತೆ, ಇಲ್ಲಿಯೂ ಕೂಡ ವಿಚಾರಣೆ ನಡೆಯುತ್ತಿದೆ. ನಿಜಾಂಶ ಶೀಘ್ರದಲ್ಲೇ ಗೊತ್ತಾಗಲಿದೆ'' ಎಂದರು.

''ನನ್ನ‌ ವಿರುದ್ಧ ಕರುಣಾಕರ್ ಸುಳ್ಳು ಆರೋಪ ಮಾಡಿ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ದೂರು ಕೊಡಲಾಗಿದೆ. ದೋಷಾರೋಪಣೆ ಪಟ್ಟಿ ಸಲ್ಲಿಸುವ ಹಂತದಲ್ಲಿದೆ'' ಎಂದು ಸ್ನೇಹಮಯಿ ಕೃಷ್ಣಮಾಹಿತಿ ನೀಡಿದರು‌.

ದೂರುದಾರ ಕರುಣಾಕರ್ ಪ್ರತಿಕ್ರಿಯೆ (ETV Bharat)

ದೂರುದಾರ ಕರುಣಾಕರ್ ಆರೋಪವೇನು?: ''ಪ್ರಾಮಿಸಿಂಗ್ ನೋಟ್​​ಗಳನ್ನು ಕೊಟ್ಟು 2018, 2019 ಹಾಗೂ 2020ರಲ್ಲಿ ಒಟ್ಟು 3 ಲಕ್ಷ ರೂ. ಹಣವನ್ನು ಪಡೆದು ಬಳಿಕ ಈಗ ಹಣ ವಾಪಸ್ ಮಾಡದೇ ಸ್ನೇಹಮಯಿ ಕೃಷ್ಣ ವಂಚಿಸಿದ್ದಾರೆ'' ಎಂದು ದೂರುದಾರ ಕರುಣಾಕರ್ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ನೇಹಮಯಿ ಕೃಷ್ಣ ನಾನಾ ಸಬೂಬು ಹೇಳಿ, ಅನಾರೋಗ್ಯದ ನೆಪವೊಡ್ಡಿ ಹಣ ಪಡೆದು ಈಗ ಹಣ ವಾಪಾಸ್ ಮಾಡದೇ ವಂಚಿಸಿದ್ದಾರೆ'' ಎಂದು ಆರೋಪಿಸಿದರು.

''ಲೈಸೆನ್ಸ್ ಇಲ್ಲದೆ ಫೈನಾನ್ಸ್ ಮಾಡ್ತಿದ್ದಾರೆಂದು ನಮ್ಮ ವಿರುದ್ಧವೇ ದೂರು ಕೊಟ್ಟಿದ್ದಾರೆ. ಹಿಂದೆ 2013ರಲ್ಲಿ ನನ್ನ ವಿರುದ್ಧ ಚೀಟಿಂಗ್ ಕೇಸ್ ದಾಖಲಾಗಿತ್ತು. ಆ ವೇಳೆ ನನ್ನನ್ನು ಜೈಲಿನಿಂದ ಬಿಡಿಸಿದ್ದರು. ನಂತರ ನಮ್ಮಿಬ್ಬರ ನಡುವೆ ಸ್ನೇಹ ಬೆಳೆಯಿತು. ಆ ಬಳಿಕ ಮೂರು ಲಕ್ಷ ರೂ. ಸಾಲ ಪಡೆದಿದ್ದಾರೆ. ಮೂರು ಪ್ರಾಮಿಸಿಂಗ್ ನೋಟ್ ಕೊಟ್ಟಿದ್ದಾರೆ'' ಎಂದು ಆರ್​​ಟಿಐ ಕಾರ್ಯಕರ್ತ, ದೂರುದಾರ ಕರುಣಾಕರ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ನನ್ನ ಹೋರಾಟಕ್ಕೆ ಆರಂಭಿಕ ಜಯ ಸಿಕ್ಕಿದೆ: ಸ್ನೇಹಮಯಿ ಕೃಷ್ಣ - Snehamai Krishna

ABOUT THE AUTHOR

...view details