ಕರ್ನಾಟಕ

karnataka

ETV Bharat / state

ಬೈಕ್‌ ಗುದ್ದಿಸಿ ವ್ಯಕ್ತಿ ಕೊಲೆಗೈದು 'ರಸ್ತೆ ಅಪಘಾತ'ವೆಂದು ಬಿಂಬಿಸಿ‌ದ 6 ಆರೋಪಿಗಳು ಸೆರೆ - Belagavi Murder Case - BELAGAVI MURDER CASE

ವ್ಯಕ್ತಿಯೋರ್ವನನ್ನು ಕೊಲೆಗೈದು ರಸ್ತೆ ಅಪಘಾತವೆಂದು ಬಿಂಬಿಸಲು ಯತ್ನಿಸಿದ ಆರೋಪಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು
ಕೊಲೆ ಆರೋಪಿಗಳು (ETV Bharat)

By ETV Bharat Karnataka Team

Published : Jun 7, 2024, 5:36 PM IST

ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ (ETV Bharat)

ಬೆಳಗಾವಿ:ವ್ಯಕ್ತಿಯೋರ್ವನನ್ನು ಹತ್ಯೆಗೈದು ರಸ್ತೆ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದ ಪ್ರಕರಣ ಭೇದಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ 6 ಆರೋಪಿಗಳನ್ನು ಬಂಧಿಸಲಾಗಿದೆ.

ಬಿಮ್ಸ್‌ ಆಸ್ಪತ್ರೆಯೆದುರು ಮೇ 30ರಂದು ನಡೆದಿದ್ದ ರಸ್ತೆ ಅಪಘಾತದಲ್ಲಿ ಬಿಮ್ಸ್ ಆಸ್ಪತ್ರೆಯ ಮುಖ್ಯ ಔಷಧಾಲಯ ಅಧಿಕಾರಿ ವಿರೂಪಾಕ್ಷ ಹರ್ಲಾಪುರ (60) ಮೃತಪಟ್ಟಿದ್ದರು. ಇವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿತ್ತು. ಮೇಲ್ನೋಟಕ್ಕೆ ಘಟನೆ ಅಪಘಾತದಂತೆ ಕಂಡುಬಂದಿತ್ತು. ಆದರೆ, ತನಿಖೆ ಕೈಗೊಂಡ ಪೊಲೀಸರು, ಇದು ಅಪಘಾತವಲ್ಲ, ಕೊಲೆ ಎಂಬುದನ್ನು ಬಯಲಿಗೆಳೆದಿದ್ದಾರೆ.

ಈ ಕುರಿತು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾಹಿತಿ ನೀಡಿ, ''ಘಟನೆ ನಡೆದ ದಿನ ಬೆಳಿಗ್ಗೆ 7.30ರಿಂದ ಚನ್ನಮ್ಮ ಸರ್ಕಲ್ ಸುತ್ತಮುತ್ತ ಬೈಕ್ ಓಡಾಡಿದ್ದು ಸಿಸಿಟಿವಿ ದೃಶ್ಯಾವಳಿಯಿಂದ ಗೊತ್ತಾಯಿತು. ಸುಮಾರು 10.30ಕ್ಕೆ ಈ ಅಪಘಾತ ಸಂಭವಿಸಿದೆ. ಬೈಕ್ ವಿವರ ಪಡೆದು ತನಿಖೆ ಕೈಗೊಳ್ಳಲಾಯಿತು. ಆರೋಪಿ ರವಿ ಕುಂಬರಗಿ ಎಂಬಾತ ಬೈಕ್ ಬಾಡಿಗೆ ಪಡೆದಿದ್ದ. ಕೂಡಲೇ ಆತನನ್ನು ಕರೆಸಿ ವಿಚಾರಣೆ ನಡೆಸಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂತು. ಬಳಿಕ ಪ್ರಕರಣವನ್ನು ನಗರ ಸಂಚಾರ ಠಾಣೆಯಿಂದ ಎಪಿಎಂಸಿ ಠಾಣೆಗೆ ವರ್ಗಾಯಿಸಲಾಯಿತು" ಎಂದು ತಿಳಿಸಿದರು.

ಮಾಳಮಾರುತಿ ಬಡಾವಣೆಯ ಬಸವರಾಜ ಬಗವತಿ (50), ಬೆಳಗಾವಿ ತಾಲೂಕಿನ ಕಂಗ್ರಾಳಿ ಬಿ.ಕೆ.ಗ್ರಾಮದ ಮಹೇಶ ಸುಂಕದ, ಕಂಗ್ರಾಳಿ ಕೆ.ಹೆಚ್‌.ಪ್ರಕಾಶ ರಾಠೋಡ (41), ರವಿ ಕುಂಬರಗಿ (28), ಸಚಿನ್ ಪಾಟೀಲ (24) ಹಾಗು ರಾಮ ವಂಟಮುರಿ(28) ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆ ₹10 ಲಕ್ಷ ಸುಪಾರಿ: ಕೊಲೆಯಾದ ವಿರೂಪಾಕ್ಷ ಹರ್ಲಾಪುರ ಪತ್ನಿ ಜೊತೆಗೆ ಆರೋಪಿ ಬಸವರಾಜ ಬಗವತಿ ಅನೈತಿಕ ಸಂಬಂಧ ಹೊಂದಿರುವ ಆರೋಪವೂ ಕೇಳಿಬಂದಿದೆ. ಅಲ್ಲದೇ ವೈಯಕ್ತಿಕ ದ್ವೇಷದಿಂದಾಗಿಯೂ ವಿರೂಪಾಕ್ಷ ಅವರನ್ನು ಕೊಲೆ ಮಾಡಲು ಆರೋಪಿ ಪ್ರಕಾಶ ರಾಠೋಡಗೆ ಬಸವರಾಜ 10 ಲಕ್ಷ ರೂಪಾಯಿ ಸುಪಾರಿ ಕೊಟ್ಟಿದ್ದಾಗಿ ತನಿಖೆಯಿಂದ ಬಹಿರಂಗವಾಗಿದೆ. ಐದು ತಿಂಗಳ ಹಿಂದೆ ವಿರೂಪಾಕ್ಷ ಅವರನ್ನು ಇದೇ ರೀತಿ ರಸ್ತೆ ಅಪಘಾತದಲ್ಲಿ ಕೊಲೆ ಮಾಡಲು ಯತ್ನಿಸಿ, ಆರೋಪಿಗಳು ವಿಫಲರಾಗಿದ್ದರು. ಸಣ್ಣಪುಟ್ಟ ಗಾಯಗಳಾಗಿ ಅವರು ಬದುಕುಳಿದಿದ್ದರು. ಈ ರೀತಿ ಎರಡ್ಮೂರು ಬಾರಿ ಕೊಲೆಗೆ ಯತ್ನಿಸಿದ್ದರು ಎಂಬುದು ಗೊತ್ತಾಗಿದೆ.

"ವಿರೂಪಾಕ್ಷ ಪತ್ನಿ ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತು ತನಿಖೆ ನಡೆಸುತ್ತಿದ್ದೇವೆ. ಈ ಕುರಿತು ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಅವರನ್ನೂ ಹೆಚ್ಚಿನ ವಿಚಾರಣೆಗೆ ಒಳಪಡಿಸುತ್ತೇವೆ. ಅದೇ ರೀತಿ ಅನುಕಂಪದ ಆಧಾರದ ಮೇಲೆ ಮಗನಿಗೆ ನೌಕರಿ ಕೊಡಿಸುವ ಉದ್ದೇಶದಿಂದ ಕೊಲೆಗೈದಿರುವ ಬಗ್ಗೆಯೂ ವಿಚಾರಣೆ ನಡೆಸುತ್ತಿದ್ದೇವೆ. ಸುಪಾರಿಗೆ ಕೊಟ್ಟಿದ್ದ 10 ಲಕ್ಷ ರೂ. ಪೈಕಿ 4 ಲಕ್ಷ ಹಣವನ್ನು ಆರೋಪಿಗಳಿಂದ ಜಪ್ತಿ ಮಾಡಿಕೊಂಡಿದ್ದೇವೆ. ಮತ್ತೋರ್ವ ಆರೋಪಿ ರಾಮಾ ಪಾಟೀಲ ಬಂಧನಕ್ಕೆ ಬಲೆ ಬೀಸಿದ್ದೇವೆ" ಎಂದು ನಗರ ಪೊಲೀಸ್ ಆಯುಕ್ತರು ವಿವರ ನೀಡಿದರು.

ಇದನ್ನೂ ಓದಿ:ಆಡಳಿತಾತ್ಮಕವಾಗಿ ಬೆಳಗಾವಿ ನಗರ ಪೊಲೀಸ್ ಇಲಾಖೆಯಲ್ಲಿ ಸುಧಾರಣೆ ತರುವೆ: ಯಡಾ ಮಾರ್ಟಿನ್ ಮಾರ್ಬನ್ಯಾಂಗ್

ABOUT THE AUTHOR

...view details