ಬೆಂಗಳೂರು:ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಮಾಡುವಂತೆ ಕೋರಿ ಎಸ್ಐಟಿ ವಿದೇಶಾಂಗ ಇಲಾಖೆಗೆ ಪತ್ರ ಬರೆದಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.
ವಿದೇಶಾಂಗ ಇಲಾಖೆಗೆ ಎಸ್ಐಟಿ ಪತ್ರ ಬರೆದ ವಿಚಾರವಾಗಿ ಬೆಂಗಳೂರಲ್ಲಿ ಗೃಹ ಸಚಿವರು ಪ್ರತಿಕ್ರಿಯೆ ನೀಡಿದರು. ಸಿಎಂ ಸಿದ್ದರಾಮಯ್ಯ ಈಗಾಗಲೇ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದುಗೊಳಿಸುವಂತೆ ಕೋರಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಈಗ ವಾರಂಟ್ ಆಧಾರದ ಮೇಲೆ ಪಾಸ್ ಪೋರ್ಟ್ ರದ್ದತಿಗೆ ಎಸ್ಐಟಿ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದೆ. ತಕ್ಷಣ ಪಾಸ್ ಪೋರ್ಟ್ ರದ್ದು ಮಾಡಬೇಕಾಗುತ್ತೆ. ಪಾಸ್ ಪೋರ್ಟ್ ರದ್ದು ಮಾಡುವ ಅಧಿಕಾರ ವಿದೇಶಾಂಗ ಇಲಾಖೆಗೆ ಇದೆ. ವಿದೇಶಾಂಗ ಇಲಾಖೆ ಪಾಸ್‌ಪೋರ್ಟ್ ರದ್ದು ಮಾಡಿದರೆ ಪ್ರಜ್ವಲ್ ವಿದೇಶದಲ್ಲಿ ಇರಲು ಆಗಲ್ಲ. ವಾಪಸ್ ಬರಲೇಬೇಕಾಗುತ್ತೆ. ಇದಕ್ಕೆ ಕೇಂದ್ರ ಸರ್ಕಾರ ಸ್ಪಂದನೆ ಮಾಡಬೇಕು ಎಂದು ಪರಮೇಶ್ವರ ತಿಳಿಸಿದರು.
ಸರ್ಕಾರ ಯಾರ ಫೋನ್ ಟ್ಯಾಪ್ ಮಾಡಿಲ್ಲ ಅಂತ ನಿನ್ನೆಯೇ ಹೇಳಿದ್ದೇನೆ. ಟ್ಯಾಪಿಂಗ್ ಬಗ್ಗೆ ಹೆಚ್ಡಿಕೆ ಬಳಿ ನಿಖರ ಮಾಹಿತಿ ಇದ್ದರೆ ಕೊಡಲಿ, ತನಿಖೆ ಮಾಡುತ್ತೇವೆ. ಎಸ್ಐಟಿ ನಿರಂತರ ತನಿಖೆ ಮಾಡುತ್ತಿದೆ. ಎಸ್ಐಟಿಗೆ ಫ್ರೀಡಂ ಕೊಟ್ಟಿದ್ದೇವೆ. ಸರ್ಕಾರಕ್ಕೆ ಬಹಳ ಕೆಲಸ ಇದೆ, ಟ್ಯಾಪಿಂಗ್ ಮಾಡ್ತಾ ಕೂತ್ಕೊಳ್ತೀವಾ? ಎಂದರು.