ಗೃಹ ಸಚಿವ ಪರಮೇಶ್ವರ್ (Etv Bharat) ಬೆಂಗಳೂರು: ಹಾಸನ ಪೆನ್ಡ್ರೈವ್ ಪ್ರಕರಣ ಸಂಬಂಧ ಯಾವುದೇ ದ್ವೇಷ ರಾಜಕಾರಣ ಇಲ್ಲ. ಎಸ್ಐಟಿ ಕಾನೂನಿನಂತೆ ಕ್ರಮ ತೆಗೆದುಕೊಂಡಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸದಾಶಿವನಗರ ತಮ್ಮ ನಿವಾಸದಲ್ಲಿಂದು ಮಾತನಾಡಿದ ಅವರು, ಪ್ರಕರಣ ಸಂಬಂಧ ದ್ವೇಷ ರಾಜಕಾರಣ ಮಾಡಲಾಗುತ್ತಿದೆ ಎಂಬ ಹೆಚ್ಡಿಕೆ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ, ಅವರಿಗೆ ಬೇಸರವಾಗಿದೆ. ಹಾಗಾಗಿ ಹಾಗೆ ಹೇಳುತ್ತಾರೆ. ಆದರೆ ಎಸ್ಐಟಿ ಕಾನೂನಿನಂತೆ ಕ್ರಮ ಕೈಗೊಂಡಿದೆ. ಎಸ್ಐಟಿಯವರು ಒಂದು ವೇಳೆ ಕಾನೂನು ವಿರುದ್ಧವಾಗಿ ಹೋದರೆ ಅವರ ಮೇಲೂ ಆಪಾದನೆ ಬರುತ್ತದೆ. ಹಾಗಾಗಿ ಅವರು ಎಲ್ಲಾ ಎಚ್ಚರಿಕೆ ವಹಿಸುತ್ತಿದ್ದಾರೆ. ಕಾನೂನಿನ ಚೌಕಟ್ಟಿನಲ್ಲೇ ಕೆಲಸ ಮಾಡಬೇಕು ಎಂದು ನಾವೂ ಸೂಚನೆ ನೀಡಿದ್ದೇವೆ ಎಂದರು.
ಎಸ್ಐಟಿ ಅವರು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಾರೆ. ಅವರು ಏನು ಮಾಡಲಿದ್ದಾರೆ ಎಂದು ನಾನು ಹೇಳಲು ಆಗಲ್ಲ. ಸಿಡಿ ಬಿಡುಗಡೆ ಯಾರು ಮಾಡಿದ್ದಾರೆ ಎಂಬ ಬಗ್ಗೆ ಎಸ್ಐಟಿಯವರೇ ಪರಿಶೀಲನೆ ನಡೆಸುತ್ತಾರೆ ಎಂದರು. ಕಾರು ಚಾಲಕ ಕಾರ್ತಿಕ್ ಎಲ್ಲಿದ್ದಾರೆ ಎಂಬುದು ಎಸ್ಐಟಿಯವರಿಗೆ ಮಾತ್ರ ಗೊತ್ತಿರುತ್ತೆ ಎಂದು ತಿಳಿಸಿದರು.
ಪ್ರಜ್ವಲ್ ರೇವಣ್ಣ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರಿಗೆ ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ. ಇಂಟರ್ಪೋಲ್ಗೆ ತಿಳಿಸಿ, ಅವರು ಎಲ್ಲಾ ದೇಶಗಳನ್ನು ಸಂಪರ್ಕಿಸಲಿದ್ದಾರೆ. ಬಳಿಕ ಅವರು ಯಾವ ದೇಶದಲ್ಲಿ ಇದ್ದಾರೆ ಎಂಬ ಬಗ್ಗೆ ಮಾಹಿತಿ ಕೊಡಲಿದ್ದಾರೆ. ಅದಾದ ಬಳಿಕ ಅವರನ್ನು ಹೇಗೆ ರಾಜ್ಯಕ್ಕೆ ತೆಗೆದುಕೊಂಡು ಬರಬೇಕು ಎಂಬ ಬಗ್ಗೆ ಎಸ್ಐಟಿ ತೀರ್ಮಾನ ಮಾಡುತ್ತೆ. ಅದಕ್ಕೆ ಏನು ಸಹಕಾರ ಕೊಡಬೇಕೋ ಸರ್ಕಾರ ನೀಡುತ್ತೆ ಎಂದರು.
ಇದನ್ನೂ ಓದಿ:ನ್ಯಾಯಾಧೀಶರ ಮನೆಗೆ ಹೆಚ್.ಡಿ.ರೇವಣ್ಣ ಹಾಜರುಪಡಿಸಲು ಎಸ್ಐಟಿ ಸಿದ್ಧತೆ - H D Revanna