ಕರ್ನಾಟಕ

karnataka

ETV Bharat / state

ಸರ್ಕಾರಿ, ಅನುದಾನಿತ ಶಾಲೆಗಳ ಹುದ್ದೆ ಭರ್ತಿಗೆ ಒಂದೇ ಮಾನದಂಡ: ಮಧು ಬಂಗಾರಪ್ಪ - Single criteria

ಸರ್ಕಾರಿ ಹಾಗೂ ಅನುದಾನಿತ ಎರಡೂ ಶಾಲೆಗಳ ಹುದ್ದೆಗಳ ಭರ್ತಿಗೆ ಒಂದೇ ಮಾನದಂಡವನ್ನು ಬಳಸುವ ಕುರಿತು ಪ್ರಕ್ರಿಯೆ ನಡೆಯುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

Education Minister Madhu Bangarappa
ಶಿಕ್ಷಣ ಸಚಿವ ಮಧು ಬಂಗಾರಪ್ಪ

By ETV Bharat Karnataka Team

Published : Feb 19, 2024, 2:15 PM IST

ಬೆಂಗಳೂರು: ಸರ್ಕಾರಿ ಹಾಗೂ ಖಾಸಗಿ ಅನುದಾನಿ ಶಾಲೆಗಳ ಖಾಲಿ ಹುದ್ದೆ ಭರ್ತಿ ಕುರಿತು ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುತ್ತದೆ. ಹುದ್ದೆ ಭರ್ತಿ ವಿಚಾರದಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಒಂದೇ ಮಾನದಂಡ ಅನುಸರಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯರಾದ ಮರಿತಿಬ್ಬೇಗೌಡ ಹಾಗೂ ಸಂಕನೂರ್ ಅನುದಾನಿತ ಶಾಲೆಗಳಲ್ಲಿ ನಿವೃತ್ತಿ, ರಾಜೀನಾಮೆ ಹಾಗೂ ಇನ್ನಿತರ ಕಾರಣದಿಂದ 2016ರಿಂದ ಇಲ್ಲಿಯವರೆಗೂ ಎಷ್ಟು ಖಾಲಿ ಹುದ್ದೆ ಇದೆ. ಹುದ್ದೆ ಭರ್ತಿಗೆ ಯಾವ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊರತೆಯಾಗಿದೆ? ಎನ್ನುವ ಪ್ರಶ್ನೆಗೆ ಸಚಿವ ಮಧು ಬಂಗಾರಪ್ಪ ಉತ್ತರಿಸಿದರು.

"ಸರ್ಕಾರಿ ಶಾಲೆ ಜೊತೆಗೆ, ಅನುದಾನಿತ ಶಾಲೆಯನ್ನೂ ಪರಿಗಣಿಸುತ್ತೇವೆ‌. ಹಣಕಾಸು ಇಲಾಖೆ ಮೂಲಕ ಅನುಮತಿ ಪಡೆಯುತ್ತೇವೆ‌. ಸರ್ಕಾರಿ ಹಾಗೂ ಅನುದಾನಿತ ಶಾಲೆ ಎರಡಕ್ಕೂ ಒಂದೇ ಮಾನದಂಡ. ಈ ಬಗ್ಗೆ ಎಂಟು ತಿಂಗಳಿಂದ ಪ್ರಕ್ರಿಯೆ ನಡೆಯುತ್ತಿದೆ. ಸಿಎಂ ಜೊತೆ ಚರ್ಚಿಸಿ ಶೀಘ್ರವೇ ನೇಮಕಾತಿ ಮಾಡುತ್ತೇವೆ. ಕೋರ್ಟ್ ಕೇಸ್ ಬಗ್ಗೆ ಕೂಡ ಹೆಚ್ಚು ಗಮನ ಕೊಡುತ್ತೇವೆ. ಅನುದಾನಿತ ಶಾಲೆಯಲ್ಲಿ ಸಂಪನ್ಮೂಲ ಇಲ್ಲದಿರುವುದರಿಂದ ವೇತನದ ಬಗ್ಗೆಯೂ ಗಮನ ಹರಿಸುತ್ತೇವೆ. ಸಂಜೀವಿನಿ ಮೂಲಕ ಇನ್ಶೂರೆನ್ಸ್ ಮಾಡುವ ಬಗ್ಗೆಯೂ ಕ್ರಮ ಕೈಗೊಳ್ಳುತ್ತೇವೆ‌" ಎಂದು ಹೇಳಿದರು.

"ನೇಮಕಾತಿ ಪ್ರಕ್ರಿಯೆ ಸ್ಪೀಡಪ್ ಮಾಡಲು ನಾನು ಬದ್ಧನಿದ್ದೇನೆ. ಶೀಘ್ರವೇ ಭರ್ತಿ ಮಾಡುವ ಕೆಲಸ ಆಗಲಿದೆ. ಮಕ್ಕಳಿಗೆ ಶಿಕ್ಷಣ ಕೊಡುವ ಕೆಲಸಕ್ಕೆ ಬದ್ಧವಾಗಿದ್ದೇವೆ. ಕೋರ್ಟ್ ಆದೇಶದ ಮೂಲಕವೇ ನೇಮಕ ಆಗಬೇಕು. ಅದಕ್ಕೆ ನಾವು ಮಧ್ಯಪ್ರವೇಶ ಮಾಡೋದಿಲ್ಲ. ವೇತನದಲ್ಲಿ ಕಡಿತ ಮಾಡಿ ಇನ್ಶೂರೆನ್ಸ್‌ ಮಾಡುವ ಪ್ರಕ್ರಿಯೆ ಬಗ್ಗೆ ಸಿಎಂ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ" ಎಂದರು.

ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಕ್ರಮ: "ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ಕುರಿತು ನ್ಯಾಯಾಲಯದಲ್ಲಿರುವ ತಡೆಯಾಜ್ಞೆ ತೆರವುಗೊಳಿಸಿ ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ" ಉನ್ನತ ಶಿಕ್ಷಣ ಸಚಿವ ಸುಧಾಕರ್ ಎಂದು ತಿಳಿಸಿದರು.

ವಿಧಾನ ಪರಿಷತ್ ಕಲಾಪದಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ಕುರಿತು ಸದಸ್ಯ ಚಿದಾನಂದ್ ಎಮ್ ಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವ ಸುಧಾಕರ್ "ಲೋಕಸಭಾ ಚುನಾವಣೆ ಕಾರಣ ಕೊಟ್ಟು ನೇಮಕಾತಿ ಪ್ರಕ್ರಿಯೆ ಮಾಡ್ತಾ ಇಲ್ಲ. ಇದೊಂದು ಗಗನಕುಸುಮವಾಗುತ್ತದೆಯೋ ಅನ್ನಿಸುತ್ತಿದೆ ಎನ್ನುವ ಆತಂಕವನ್ನು ಸದಸ್ಯರು ವ್ಯಕ್ತಪಡಿಸಿದ್ದಾರೆ. ಆದರೆ ನಮಗೂ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಆಗುತ್ತದೆ ಅನ್ನೋ ಆತಂಕ ಇದೆ. ಇದರ ಜೊತೆಗೆ ಈ ಪ್ರಕ್ರಿಯೆಗೆ 20 ದಿನವಾದರೂ ಬೇಕಾಗುತ್ತದೆ. ನಾವು ಅಷ್ಟರಲ್ಲಿ ಪ್ರಕ್ರಿಯೆ ಆರಂಭ ಮಾಡಿದರೆ ಮತ್ತೆ ತಡೆ ಹಿಡಿಯಬೇಕು. ಇದರ ಜೊತೆಗೆ ನಮಗೆ ಸೂಚನೆಯೇ ಇಲ್ಲದೇ ನಾವು ಹೊರಡಿಸಿರುವ ಅಭ್ಯರ್ಥಿಗಳ ಲಿಸ್ಟ್​ಗೆ ಸ್ಟೇ ನೀಡಲಾಗಿದೆ. ಇದು ಇತ್ತೀಚೆಗೆ ಆದಂತಹ ಬೆಳವಣಿಗೆ. ಆದಷ್ಟು ಬೇಗ ಸ್ಟೇ ತೆರವು ಮಾಡಿಸಿ ನೇಮಕಾತಿ ಪ್ರಕ್ರಿಯೆ ಚುರುಕುಗೊಳಿಸುತ್ತೇವೆ" ಎಂದು ಭರವಸೆ ನೀಡಿದರು‌.

ಗೌರವ ಡಾಕ್ಟರೇಟ್ ನೀಡಲು ಸರ್ಕಾರಿ, ಖಾಸಗಿ ವಿವಿಗಳಿಗೆ ಏಕರೂಪ ನಿಯಮ: "ಸ್ಟೇಟ್ ಹೈಯರ್ ಎಜುಕೇಷನ್ ಕೌನ್ಸಿಲ್ ಮೂಲಕ ಗೌರವ ಡಾಕ್ಟರೇಟ್ ಕೊಡುವ ಬಗ್ಗೆ ನಿಯಮ ರೂಪಿಸುತ್ತೇವೆ. ಖಾಸಗಿ ಸೇರಿದಂತೆ ಎಲ್ಲ ವಿವಿಗೆ ಏಕರೂಪ ನಿಯಮ ಜಾರಿಗೆ ತರುತ್ತೇವೆ" ಎಂದು ತಿಳಿಸಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಮಂಜುನಾಥ್ ಬಂಡಾರಿ ಪ್ರಶ್ನೆಗೆ ಉತ್ತರಿಸಿದ ಸಚಿವ ಸುಧಾಕರ್, "ಸದಸ್ಯರು ಮಾರ್ಕ್ಸ್ ಬದಲು ಗ್ರೇಡಿಂಗ್ ಕೊಡುವ ಪದ್ಧತಿ ವಿಚಾರದ ಪ್ರಸ್ತಾಪ ಮಾಡಿದ್ದಾರೆ. 30 ಖಾಸಗಿ ವಿವಿಗಳು ರಾಜ್ಯದಲ್ಲಿವೆ. ಖಾಸಗಿ ವಿವಿಗಳ ಸಂಖ್ಯೆ ಹೆಚ್ಚಾಗುತ್ತಿವೆ. ಸರ್ಕಾರಿ ವಿವಿಗಳು ಆರ್ಥಿಕ‌ ಸಂಕಷ್ಟದಲ್ಲಿವೆ. ಖಾಸಗಿ ವಿವಿಯವರು ಅವರೇ ಪರೀಕ್ಷೆ ನಡೆಸುತ್ತಾರೆ. ಹಾಗಾಗಿ ಮಾರ್ಕ್ಸ್ ಬದಲು ಗ್ರೇಡಿಂಗ್ ಕೊಡುವ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ" ಎಂದರು‌.

"ಗೌರವ ಡಾಕ್ಟರೇಟ್ ಕೊಡುವುದಕ್ಕೂ ನಿಯಮ ಇದೆ. ಗೌರವ ಡಾಕ್ಟರೇಟ್ ಪಡೆದವರು ಹೆಸರಿನ ಮೊದಲು ಡಾ. ಎಂದು ಹಾಕಿಕೊಳ್ಳುವಂತಿಲ್ಲ. ಈ ಬಗ್ಗೆ ಸುಪ್ರಿಂ ಕೋರ್ಟ್​ ಆದೇಶವೇ ಇದೆ. ಸ್ಟೇಟ್ ಹೈಯರ್ ಎಜುಕೇಷನ್ ಕೌನ್ಸಿಲ್ ಮೂಲಕ ಗೌರವ ಡಾಕ್ಟರೇಟ್ ಕೊಡುವ ಬಗ್ಗೆ ನಿಯಮ ರೂಪಿಸುತ್ತೇವೆ. ಖಾಸಗಿ ಸೇರಿದಂತೆ ಎಲ್ಲ ವಿವಿಗೆ ಏಕರೂಪ ನಿಯಮ ಜಾರಿಗೆ ತರುತ್ತೇವೆ" ಎಂದರು.

ಇದನ್ನೂ ಓದಿ:ರಾಜಕಾರಣಿಗಳು ಇನ್ನೊಬ್ಬರಿಗೆ ಮಾದರಿಯಾಗಿರಬೇಕು: ಬಸವರಾಜ ಹೊರಟ್ಟಿ

ABOUT THE AUTHOR

...view details