ಬೆಂಗಳೂರು:ಹಲವು ಹಣಕಾಸು ಲೆಕ್ಕಾಚಾರದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 2024-25 ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಇಂದು ಮಂಡನೆಯಾಗುತ್ತಿರುವುದು ಅವರ 15ನೇ ಬಜೆಟ್ ಆಗಿದೆ. ತಮ್ಮ ಬಜೆಟ್ನಲ್ಲಿ ಕೃಷಿಗೆ ಸಂಬಂಧಿಸಿದಂತೆ ಕೆಲವೊಂದು ಮಹತ್ತರ ನಿರ್ಧಾರ ಪ್ರಕಟಿಸಿದ್ದಾರೆ.
ಕೃಷಿ ಕ್ಷೇತ್ರವನ್ನು ಸುಸ್ಥಿತರ ಮತ್ತ ಲಾಭದಾಯಕವನ್ನಾಗಿ ಮಾಡಲು ಕರ್ನಾಟಕ ರೈತ ಸಂವೃದ್ಧಿ ಯೋಜನೆ ಜಾರಿ ಮಾಡಲಾಗುವುದಾಗಿ ಸಿಎಂ ಪ್ರಕಟಿಸಿದ್ದಾರೆ. ಕೃಷಿ ಮತ್ತು ಪೂರಕ ಚಟುವಟಿಕೆಗಳ ನೀತಿ ಮತ್ತು ಯೋಜನೆಗಳ ಸಂಯೋಜನೆ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕೆ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಸಹಕಾರ, ಪಶುಸಂಗೋಪನೆ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ 'ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚನೆ' ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು. ಈ ಮೂಲಕ ರಾಜ್ಯದ ಕೃಷಿ ಸಂಬಂಧಿತ ಎಲ್ಲ ಇಲಾಖೆಗಳನ್ನು ಮೇಲ್ವಿಚಾರಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಈ ಮೂಲಕ ಕೃಷಿ ಸಂಬಂಧಿತ ಎಲ್ಲ ಇಲಾಖೆಯ ಸಚಿವರನ್ನು ನಿಯಂತ್ರಣದಲ್ಲಿಡಲು ಅವರು ಮುಂದಾಗಿದ್ದಾರೆ.
- ಕೃಷಿ ಭಾಗ್ಯ ಯೋಜನೆ ಮರು ಜಾರಿಗೆ 200 ಕೋಟಿ ರೂ. ಅನುದಾನ
- ನಶಿಸುತ್ತಿರುವ ಸ್ಥಳೀಯ ತಳಿಗಳ ಸಂರಕ್ಷಣೆಗೆ ಸಮುದಾಯ ಬೀಜ ಬ್ಯಾಂಕ್ ಸ್ಥಾಪನೆ
- ನಮ್ಮ ಮಿಲ್ಲೇಟ್ ಎಂಬ ಹೊಸ ಕಾರ್ಯಕ್ರಮ ಜಾರಿ
- ಕೀಟ, ರೋಗ ಮತ್ತು ಪೋಷಕಾಂಶಗಳ ನಿರ್ವಹಣೆಗೆ ರಾಯಚೂರು ಕೃಷಿ ವಿವಿಯಿಂದ ಇ - ಸ್ಯಾಪ್ ತಂತ್ರಾಂಶ ಪರಿಚಯ
- ಆಹಾರ ಸಂಸ್ಕರಣಾ ಆಯುಕ್ತಾಲಯ ರಚನೆ, ಕೃಷಿ, ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ಉತ್ತೇಜಿಸಲು ಕೆಪೆಕ್ ಬಲಪಡಿಸಲು 80 ಕೋಟಿ ಅನುದಾನ
- ವಿಮಾನ ನಿಲ್ದಾಣಗಳ ಬಳಿಯಲ್ಲಿ ಆಹಾರ ಪಾರ್ಕ್ ಸ್ಥಾಪನೆ, ರೈತ ಉತ್ಪಾದಕ ಸಂಸ್ಥೆಗಳನ್ನು ಸದೃಢಪಡಿಸಿ ಸಂಬಂಧಪಟ್ಟ ತರಬೇತಿ ನೀಡಲು ಸ್ಟಾರ್ಟ್ ಅಪ್ ಪ್ರಾರಂಭ
- ಮಂಡ್ಯ ಜಿಲ್ಲೆಯ ವಿ.ಸಿ ಫಾರಂನಲ್ಲಿ ಕೃಷಿ ವಿವಿ ಸ್ಥಾಪನೆ ಮಾಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿನ ತಮ್ಮ ದಾಖಲೆಯ ಬಜೆಟ್ನಲ್ಲಿ ಪ್ರಸ್ತಾಪಿಸಿದ್ದಾರೆ.