ಸಿದ್ದಗಂಗಾ ಮಠದ ಜಾನುವಾರು ಜಾತ್ರೆ ತುಮಕೂರು:ಶ್ರೀಸಿದ್ದಗಂಗಾ ಮಠದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಕೂಡ ಜಾತ್ರಾ ಮಹೋತ್ಸವ ಆಯೋಜಿಸಲಾಗಿದ್ದು, ಇದರ ಭಾಗವಾಗಿ ಜಾನುವಾರು ಜಾತ್ರೆಗೂ ಕೂಡ ಚಾಲನೆ ನೀಡಲಾಗಿದೆ.
ಪ್ರತಿ ವರ್ಷದಂತೆ ಈ ಬಾರಿ ರಾಜ್ಯದ ವಿವಿಧ ಭಾಗಗಳಿಂದ ರೈತರು ಜಾನುವಾರುಗಳನ್ನು ಜಾತ್ರೆಗೆ ತಂದು ಮಾರಾಟ ಮಾಡುತ್ತಿದ್ದು, ಅಲ್ಲದೆ ಖರೀದಿ ಮಾಡುತ್ತಿರುವ ರೈತರ ಸಂಖ್ಯೆಯೂ ಕೂಡ ದ್ವಿಗುಣಗೊಂಡಿದೆ. ಸಿದ್ದಗಂಗಾ ಮಠದ ಆವರಣದಲ್ಲಿ ನಡೆಯುತ್ತಿರುವ ಜಾನುವಾರು ಜಾತ್ರೆಯಲ್ಲಿ ಬಹುತೇಕ ಹಳ್ಳಿಕಾರ್ ತಳಿ ಜಾನುವಾರುಗಳನ್ನೇ ರೈತರು ತಂದಿದ್ದಾರೆ.
ತುಮಕೂರು, ಹಾಸನ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ತಮ್ಮ ಜಾನುವಾರುಗಳೊಂದಿಗೆ ಆಗಮಿಸಿರುವ ರೈತರು ಬಿರು ಬಿಸಿಲಿನಲ್ಲಿಯೂ ಕೂಡ ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಜಾತ್ರೆಗೆ ಆಗಮಿಸಿರುವ ರೈತರು ಹಾಗೂ ಜಾನುವಾರುಗಳಿಗೆ ಪೂರಕವಾದ ಆಹಾರ ಹಾಗೂ ನೀರಿನ ವ್ಯವಸ್ಥೆಯನ್ನು ಸಿದ್ದಗಂಗಾ ಮಠದಿಂದ ಮಾಡಲಾಗಿದೆ.
ಸುಮಾರು 20 ಸಾವಿರ ರಾಸುಗಳನ್ನು ಜಾನುವಾರು ಜಾತ್ರೆಯಲ್ಲಿ ಕಾಣಬಹುದಾಗಿದೆ. ಈ ಜಾನುವಾರು ಜಾತ್ರೆಯಲ್ಲಿ ಹಳ್ಳಿಕಾರ್ ತಳಿಯ ಉತ್ತಮ ಗುಣಮಟ್ಟದ ಜಾನುವಾರುಗಳು 8 ಲಕ್ಷದವವರೆಗೂ ಕೂಡ ಬಿಕರಿಯಾಗುತ್ತಿದೆ. ಹೊಲಗದ್ದೆಗಳಲ್ಲಿ ಉಳುಮೆ ಮಾಡಲು ಹಳ್ಳಿಕಾರ್ ತಳಿಯ ಜಾನುವಾರುಗಳನ್ನು ಅದರಲ್ಲಿ ಮುಖ್ಯವಾಗಿ ಹಾವೇರಿ, ಬಳ್ಳಾರಿ, ದಾವಣಗೆರೆ ಭಾಗದಿಂದ ರೈತರು ಬಂದು ಖರೀದಿ ಮಾಡುತ್ತಿರುವುದು ಸರ್ವೇಸಾಮಾನ್ಯವಾಗಿದೆ.
ಹಳ್ಳಿಕಾರ್ ತಳಿಯ ಜಾನುವಾರುಗಳನ್ನು ಹೊರತುಪಡಿಸಿ ಅತಿ ಕಡಿಮೆ ಪ್ರಮಾಣದಲ್ಲಿ ಮಲ್ನಾಡ್ ಗಿಡ್ಡ ತಳಿಯ ಜಾನುವಾರುಗಳನ್ನು ಕೂಡ ಕೆಲ ರೈತರು ಮಲೆನಾಡು ಭಾಗದಿಂದ ತಂದು ಜಾತ್ರೆಯಲ್ಲಿ ಮಾರಾಟಕ್ಕೆ ಇರಿಸಿದ್ದಾರೆ. ಆದರೆ ಬಯಲು ಸೀಮೆ ಭಾಗದಲ್ಲಿ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವಂತಹ ಹಳ್ಳಿಕಾರ್ ತಳಿಯ ಜಾನುವಾರುಗಳಿಗೆ ಹೆಚ್ಚಿನ ಬೇಡಿಕೆ ಇರುವುದು ಕಂಡು ಬಂದಿದೆ.
ಇದನ್ನೂ ಓದಿ:ದೇವರಬೆಳಕೆರೆ ಮೈಲಾರಲಿಂಗೇಶ್ವರ ಜಾತ್ರೆ: ಸರಪಳಿ ಪವಾಡ ಕಣ್ತುಂಬಿಕೊಂಡ ಭಕ್ತರು