ಶಿವಮೊಗ್ಗ ಕೆಡಿಪಿ ಸಭೆಯಲ್ಲಿ ಶಾಸಕ ಚನ್ನಬಸಪ್ಪ, ಎಂಎಲ್ಸಿ ಬಿಲ್ಕಿಸ್ ಬಾನು ಮಾತಿನ ಜಟಾಪಟಿ. (ETV Bharat) ಶಿವಮೊಗ್ಗ: ಜಿಲ್ಲಾ ಪಂಚಾಯಿತಿಯಲ್ಲಿ ಇಂದು ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ಗೋಹತ್ಯೆ ವಿಚಾರವಾಗಿ ಬಿಜೆಪಿ ಶಾಸಕ ಚನ್ನಬಸಪ್ಪ ಹಾಗೂ ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯೆ ಬಿಲ್ಕಿಸ್ ಬಾನು ನಡುವೆ ತೀವ್ರ ಮಾತಿನ ಜಟಾಪಟಿ ನಡೆಯಿತು. ಈ ವೇಳೆ, ಸಿಟ್ಟಿನಲ್ಲಿ ಚನ್ನಬಸಪ್ಪ ತಮ್ಮ ಮೊಬೈಲ್ ನೆಲಕ್ಕೆ ಎಸೆದ ಘಟನೆಯೂ ಜರುಗಿತು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ಪಶು ಸಂಗೋಪನಾ ಇಲಾಖೆಯ ವಿಚಾರ ಬಂದಾಗ ಶಿವಮೊಗ್ಗದಲ್ಲಿ ಅಕ್ರಮವಾಗಿ ಗೋಹತ್ಯೆ ನಡೆಸಲಾಗುತ್ತಿದೆ. ಇದನ್ನು ಸರ್ಕಾರ ಯಾಕೆ ತಡೆಯುತ್ತಿಲ್ಲ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಇದೆಯೇ, ಇಲ್ಲವೇ ಎಂಬುದರ ಬಗ್ಗೆ ತಿಳಿಸಿ ಎಂದು ಬಿಜೆಪಿ ಶಾಸಕ ಚನ್ನಬಸಪ್ಪ ಆಗ್ರಹಿಸಿದರು.
ಅಲ್ಲದೇ, ಶಿವಮೊಗ್ಗದಲ್ಲಿ ಹಾಗೂ ಶಿಕಾರಿಪುರದ ಶಿರಾಳಕೊಪ್ಪದಲ್ಲಿ ಅವ್ಯಾಹತವಾಗಿ ಅಕ್ರಮವಾಗಿ ಹಸುಗಳನ್ನು ಕಡಿಯಲಾಗುತ್ತಿದೆ ಎಂದು ಚನ್ನಬಸಪ್ಪ ಆರೋಪಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಎಂಎಲ್ಸಿ ಬಿಲ್ಕಿಸ್ ಬಾನು, ಈ ಬಾರಿ ಬಕ್ರೀದ್ ಹಬ್ಬದಲ್ಲಿ ಯಾವುದೇ ಗೋವುಗಳನ್ನು ಕಡಿಯಲಾಗಿಲ್ಲ. ನಮ್ಮ ಈ ಹಬ್ಬದಲ್ಲಿ ಗೋವುಗಳನ್ನು ಬಲಿ ನೀಡಲ್ಲ ಎಂದರು.
ಚನ್ನಬಸಪ್ಪ ರಾಜೀನಾಮೆ ಸವಾಲು: ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಚನ್ನಬಸಪ್ಪ, ಗೋವುಗಳನ್ನು ಕಡಿದಿರುವ ಕುರಿತು ನಾನು ಸಾಕ್ಷಿ ನೀಡುತ್ತೇನೆ ಎಂದು ತಮ್ಮ ಮೊಬೈಲ್ಅನ್ನು ಹಿಡಿದುಕೊಂಡು ತೋರಿಸಿದರು. ಇದಕ್ಕೆ ಮತ್ತೆ ಬಿಲ್ಕಿಸ್ ಬಾನು ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆಯೇ ಶಾಸಕರು ತಮ್ಮ ಕೈಯಲ್ಲಿದ್ದ ಮೊಬೈಲ್ ನೆಲಕ್ಕೆ ಎಸೆದರು. ಒಂದು ವೇಳೆ ಗೋಹತ್ಯೆ ನಡೆದಿಲ್ಲ ಎಂದಾದರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಸವಾಲೆಸೆದರು.
ಆಗ ಕಾನೂನು ಸರಿಯಾಗಿ ಜಾರಿ ಮಾಡಬೇಕೆಂದು ಧ್ವನಿಗೂಡಿಸಿದ ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ, ಗೋ ಸಾಗಾಟ ಮಾಡುವುದನ್ನು ತಡೆಯಲು ಹೋದವರ ಮೇಲೆ ಕೇಸ್ ದಾಖಲಿಸಲಾಗುತ್ತದೆ. ಇದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಗೋಹತ್ಯೆ ನಿಷೇಧ ಕಾಯ್ದೆ ಇದ್ದರೆ, ಗೋವುಗಳ ರಕ್ಷಣೆ ಮಾಡಬೇಕು ಇಲ್ಲವಾದಲ್ಲಿ ಗೋಹತ್ಯೆ ಕಾಯ್ದೆ ತೆಗೆದುಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಮೋಟೊ ಕೇಸ್ ದಾಖಲು- ಎಸ್ಪಿ:ನಂತರಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಪ್ರತಿಕ್ರಿಯಿಸಿ, ಗೋ ಸಾಗಾಟದ ಕುರಿತು ಕಳೆದ ಮೂರು ವರ್ಷದಲ್ಲಿ ದಾಖಲಾದ ಪ್ರಕರಣಗಳ ಕುರಿತು ಮಾಹಿತಿ ನೀಡಿದರು. 2022ರಲ್ಲಿ 28 ಪ್ರಕರಣ, 2023ರಲ್ಲಿ 62 ಪ್ರಕರಣ, 2024ರಲ್ಲಿ ಇದುವರೆಗೆ 44 ಪ್ರಕರಣ ದಾಖಲಾಗಿದೆ. ಇದರಲ್ಲಿ ಪೊಲೀಸ್ ಇಲಾಖೆಯೇ ಸುಮೋಟೊ ಕೇಸುಗಳನ್ನು ದಾಖಲಿಸಿಕೊಂಡಿದೆ ಎಂದು ತಿಳಿಸಿದರು.
ಧರ್ಮ ಬೇಧ ಮಾಡಬಾರದು- ಮಧು ಬಂಗಾರಪ್ಪ:ಸಚಿವ ಮಧು ಬಂಗಾರಪ್ಪ ಮಾತನಾಡಿ, ಗೋವು ಸಾಗಾಟದಲ್ಲಿ ನಾವಂತೂ ಮಧ್ಯಪ್ರವೇಶ ಮಾಡುವುದಿಲ್ಲ. ನಮ್ಮ ಕಡೆಯಿಂದ ಯಾವುದೇ ತಪ್ಪು ಆಗಬಾರದು. ನಿಮಗೆ ಅಧಿಕಾರಿಗಳು ಸ್ಪಂದಿಸಿದ್ದಾರೆ. ಅವರು ನಮ್ಮ ಸರ್ಕಾರದ ಅಧಿಕಾರಿಗಳಲ್ಲ, ಅವರು ನಿಮ್ಮ ಅಧಿಕಾರಿಗಳು, ಸ್ಪಂದಿಸುತ್ತಾರೆ. ಗೋಹತ್ಯೆ ನಿಷೇಧ ಜಾರಿ ಮಾಡದೆ ಹೋದರೆ, ಸಮಾಜದಲ್ಲಿ ಶಾಂತಿ ಹದಗೆಡುತ್ತಿದೆ. ಈ ಬಗ್ಗೆ ಧರ್ಮ ಬೇಧ ಮಾಡದೆ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ಆನೆ ದಾಳಿ, ಪರಿಹಾರಕ್ಕೆ ಶಾಸಕರ ಆಗ್ರಹ:ಹೊಸನಗರ ತಾಲೂಕಿನ ಅರಸಾಳುವಿನ ಬಸಾಪುರ ಗ್ರಾಮದಲ್ಲಿ ಆನೆ ದಾಳಿಯಿಂದ ಮೃತರಾದ ಕೂಲಿಕಾರನಿಗೆ ಅರಣ್ಯ ಇಲಾಖೆಯಿಂದ ಇನ್ನೂ ಯಾವುದೇ ಪರಿಹಾರ ಒದಗಿಸದ ಬಗ್ಗೆ ಆರಗ ಜ್ಞಾನೇಂದ್ರ, ಡಿ.ಎಸ್. ಅರುಣ್ ಪ್ರಸ್ತಾಪಿಸಿ, ಕೇರಳದ ವಯನಾಡು ಆನೆಗೆ ದಾಳಿಗೆ ನಮ್ಮ ಸರ್ಕಾರ ಪರಿಹಾರ ನೀಡಿತ್ತು. ಆದರೆ, ನಮ್ಮದೇ ಕೂಲಿ ಕಾರ್ಮಿಕನಿಗೆ ಪರಿಹಾರವಿಲ್ಲ ಎಂದು ಆಕ್ರೋಶ ಹೊರಹಾಕಿದರು. ಸಭೆಯಲ್ಲಿ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್, ಡಿಸಿ, ಜಿ.ಪಂ ಸಿಇಒ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ:₹25 ಮರಳಿ ನೀಡದ ಬಿಎಂಟಿಸಿ ಕಂಡಕ್ಟರ್: ಪ್ರಯಾಣಿಕ ಹಣ ಪಡೆದುಕೊಂಡಿದ್ದು ಹೇಗೆ ಕೇಳಿ