ಹುಬ್ಬಳ್ಳಿ: ಉಣಕಲ್‌ನ ಅಚ್ಚವ್ವನ ಕಾಲೋನಿಯಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟ ಅಯ್ಯಪ್ಪ ಮಾಲಾಧಾರಿಗಳ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಘೋಷಣೆ ಮಾಡಿದರು.
ಕಿಮ್ಸ್ ಆಸ್ಪತ್ರೆಯ ಶವಗಾರಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಸಿಲಿಂಡರ್ ಸ್ಫೋಟದಲ್ಲಿ ನಿಂಗಪ್ಪ ಬೇಪಾರಿ (58) ಮತ್ತು ಸಂಜಯ ಸವದತ್ತಿ (20) ಎಂಬ ಇಬ್ಬರು ಅಯ್ಯಪ್ಪ ಮಾಲಾಧಿಗಾರಿಗಳು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ನೋವಿನ ಸಂಗತಿ. ರಾಜ್ಯ ಸರ್ಕಾರದಿಂದ ಹಿಡಿದು, ಜಿಲ್ಲಾಡಳಿತ, ವೈದ್ಯರ ತಂಡ ಮಾಲಾಧಾರಿಗಳನ್ನು ಬದುಕಿಸುವು ಎಲ್ಲ ಪ್ರಯತ್ನ ಮಾಡಿತಾದರೂ ಉಳಿಸಿಕೊಳ್ಳಲಾಗಲ್ಲಿಲ್ಲ. ನಾಲ್ವರು ತಜ್ಞ ವೈದ್ಯರನ್ನ ಕರೆಯಿಸಿ ಬದುಕಿಸಲು ಸಕಲ ಪ್ರಯತ್ನ ಮಾಡಲಾಗಿತ್ತು. ಆದರೆ, ಇದನ್ನ ಮೀರಿ ಸುಟ್ಟ ಪ್ರಮಾಣ ಹೆಚ್ಚಾಗಿದ್ದರಿಂದ ಉಳಿಸಿಕೊಳ್ಳಲಾಗಲ್ಲಿಲ್ಲ. ಅವರ ಕುಟುಂಬಕ್ಕೆ ಸಾಂತ್ವನ ಹೇಳುವ ಜೊತೆಗೆ ನಷ್ಟ ಎದುರಿಸುವ ಶಕ್ತಿ ಆ ಕುಟುಂಬಕ್ಕೆ ನೀಡಲಿ ಎಂದರು.
ಮುಖ್ಯಮಂತ್ರಿಗಳು ಸಹ ಆ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಮೃತಪಟ್ಟ ಕುಟುಂಬಕ್ಕೆ ಮುಖ್ಯಮಂತ್ರಿ ನಿರ್ದೇಶನದ ಮೇರೆಗೆ ಸರ್ಕಾರದಿಂದ 5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಲಾಗಿದೆ. ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ಒಂಬತ್ತು ಅಯ್ಯಪ್ಪ ಮಾಲಾಧಾರಿಗಳ ಪೈಕಿ ಇಬ್ಬರು ಚಿಕಿತ್ಸೆ ಫಲಿಸದೇ ಇಂದು ಬೆಳಗಿನ ಜಾವ ಮೃತಪಟ್ಟಿದ್ದು, ಇನ್ನುಳಿದವರಿಗೆ ಚಿಕಿತ್ಸೆ ಮುಂದುವರೆದಿದೆ. ಓರ್ವ ಬಾಲಕನ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಉಳಿದವರ ಕುಟುಂಬದ ಜೊತೆ ಸಮಾಲೋಚನೆ ಮಾಡಿ ಇನ್ನು ಹೆಚ್ಚಿನ ಚಿಕಿತ್ಸೆ ನೀಡುತ್ತದೆ. ಉನ್ನತ ಚಿಕಿತ್ಸೆಗಾಗಿ ತಜ್ಞ ವೈದ್ಯರನ್ನು ಕರೆಸಲಾಗಿದೆ ಎಂದು ಸಚಿವ ಲಾಡ್ ಹೇಳಿದರು.