ಶಿವಮೊಗ್ಗ:ಕಳೆದ ಮೂರು ದಿನಗಳ ಹಿಂದೆನಕ್ಸಲರ ತಂಡ ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮರಾಠಿ ಗ್ರಾಮಕ್ಕೆ ಆಗಮಿಸಿತ್ತು ಎಂಬುದು ಸುಳ್ಳು ಸುದ್ದಿ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದ ಮೂವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಏನಿದು ಘಟನೆ?: ಕಳೆದ ಮೂರು ದಿನಗಳ ಹಿಂದೆ ಶಿವಮೊಗ್ಗ-ಉಡುಪಿ ಜಿಲ್ಲೆಯ ಗಡಿಭಾಗದ ಮೂಕಾಂಬಿಕ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಹೊಸಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಮರಾಠಿ ಗ್ರಾಮಕ್ಕೆ ನಾಲ್ವರು ಭೇಟಿ ನೀಡಿದ್ದರು ಎಂಬ ಸುದ್ದಿ ಇಲ್ಲಿನ ಜನರಲ್ಲಿ ಆತಂಕ ಸೃಷ್ಟಿಸಿತ್ತು. ವಿಷಯ ತಿಳಿದ ಕಾರ್ಗಲ್ ಪೊಲೀಸರು ಗ್ರಾಮಕ್ಕೆ ದೌಡಾಯಿಸಿ ತಪಾಸಣೆ ನಡೆಸಿದ್ದರು. ಬಳಿಕ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಸಹ ಭೇಟಿ ನೀಡಿ ವಿಚಾರಣೆ ನಡೆಸಿದ್ದರು. ಇಷ್ಟೇ ಅಲ್ಲದೆ, ಶಿವಮೊಗ್ಗ ಗುಪ್ತಚರ ಇಲಾಖೆಯ ಡಿವೈಎಸ್ಪಿ ಸಂಜೀವ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದಿದ್ದರು. ಇದರ ಜೊತೆಗೆ ಎಎನ್ಎಫ್ ತಂಡ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಆದರೆ ಈ ಭಾಗದಲ್ಲಿ ನಕ್ಸಲರು ಸಂಚರಿಸಿರುವ ಬಗ್ಗೆ ಖಚಿತ ಮಾಹಿತಿಯನ್ನು ಯಾರೂ ನೀಡಿರಲಿಲ್ಲ ಮತ್ತು ನಕ್ಸಲರು ಬಂದು ಹೋದ ಬಗ್ಗೆ ಯಾವುದೇ ಕುರುಹುಗಳು ಪತ್ತೆಯಾಗಿರಲಿಲ್ಲ.