ಕರ್ನಾಟಕ

karnataka

ETV Bharat / state

ಅಧಿಕಾರಿ ಆತ್ಮಹತ್ಯೆ ಪ್ರಕರಣ: ಸಿಎಂ, ಸಚಿವ ನಾಗೇಂದ್ರ ರಾಜೀನಾಮೆಗೆ ಕಾರಜೋಳ ಆಗ್ರಹ - Shivamogga officer suicide case - SHIVAMOGGA OFFICER SUICIDE CASE

ಶಿವಮೊಗ್ಗ ಅಧಿಕಾರಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಎಂ ಮತ್ತು ಸಚಿವ ನಾಗೇಂದ್ರ ರಾಜೀನಾಮೆ ನೀಡಬೇಕು ಎಂದು ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.

CM AND MINISTER NAGENDRA  RESIGN  GOVINDA KARAJOLA  SHIVAMOGGA
ಶಿವಮೊಗ್ಗ ಅಧಿಕಾರಿ ಆತ್ಮಹತ್ಯೆ ಪ್ರಕರಣ (ಕೃಪೆ: ETV Bharat Karnataka)

By ETV Bharat Karnataka Team

Published : May 29, 2024, 6:05 PM IST

ಬೆಂಗಳೂರು: ಶಿವಮೊಗ್ಗದಲ್ಲಿ ಅಧಿಕಾರಿ ಆತ್ಮಹತ್ಯೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಸಚಿವ ನಾಗೇಂದ್ರ ಕೂಡಲೇ ರಾಜೀನಾಮೆ ನೀಡಬೇಕು. ಪ್ರಕರಣವನ್ನು ಕೇಂದ್ರ ಮಟ್ಟದ ಸ್ವಾಯತ್ತ ಸಂಸ್ಥೆಯ ತನಿಖೆಗೆ ವಹಿಸಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಕೇಳಿ ಬಂದ ಹಿನ್ನೆಲೆ ಅಂದು ಸಚಿವರಾಗಿದ್ದ ಕೆ ಎಸ್ ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ ರಾಜೀನಾಮೆಯನ್ನೂ ಪಡೆದುಕೊಂಡಿರಿ. ಸಿದ್ದರಾಮಯ್ಯನವರೇ ಈಗ ನಿಮಗೆ ನೈತಿಕತೆ ಇದ್ದರೆ ಅರೆಕ್ಷಣವೂ ತಡಮಾಡದೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

ಸರ್ಕಾರವೇ ವಾಲ್ಮೀಕಿ ಪರಿಶಿಷ್ಟ ವರ್ಗಗಳ ನಿಗಮದ ಅಕ್ರಮದಲ್ಲಿ ಭಾಗವಹಿಸಿದೆ. ಸರ್ಕಾರ ಇಲಾಖೆಗಳಲ್ಲಿ, ನಿಗಮಗಳಲ್ಲಿ ಹಗಲು ದರೋಡೆ ಮಾಡುತ್ತಿದೆ. ಪ್ರಕರಣದಲ್ಲಿ ಸಂಬಂಧಪಟ್ಟ ಇಲಾಖೆಯ ಮಂತ್ರಿ ಶಾಮೀಲು ಅನುಮಾನ ಇದೆ. ಆದರೂ ಮಂತ್ರಿ ಹೊರತುಪಡಿಸಿ ಎಫ್ಐಆರ್ ಹಾಕಲಾಗಿದೆ. ಇಲಾಖೆ ಮಂತ್ರಿ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು. ಸಿಐಡಿ ತನಿಖೆಯಿಂದ ಸತ್ಯ ಹೊರಗೆ ಬರಲ್ಲ. ಕೇಂದ್ರದ ಮಟ್ಟದ ಸ್ವಾಯತ್ತ ಸಂಸ್ಥೆಗಳಿಂದ ತನಿಖೆ ಮಾಡಿಸಿ. ಇದು ದೊಡ್ಡ ಹಗರಣ. ಖಜಾನೆಯನ್ನೇ ಲೂಟಿ ಮಾಡಿರುವ ಹಗರಣವಾಗಿದೆ. ಈ ಪ್ರಕರಣ ಮುಚ್ಚಿ ಹಾಕುವ ಸಂಚು ನಡೆದಿದೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಯಲು ಸಿಎಂ ಮತ್ತು ಸಚಿವರು ರಾಜೀನಾಮೆ ಕೊಡಬೇಕು ಎಂದು ಕಾರಜೋಳ ಆಗ್ರಹಿಸಿದರು.

ನಾಗೇಂದ್ರ ತಾವು ಉಳಿದುಕೊಳ್ಳಲು ಏನು ಬೇಕಾದರೂ ಹೇಳಬಹುದು. ಅವರು ಇಲಾಖೆಯ ಸಚಿವರು. ನಿಯಮಾವಳಿ ಪ್ರಕಾರ ನಡೆದುಕೊಳ್ಳಬೇಕು. ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿ ಉಗ್ರ ಹೋರಾಟ ಮಾಡಲಿದೆ. ಪ್ರತಿಪಕ್ಷ ನಾಯಕರು, ರಾಜ್ಯಾಧ್ಯಕ್ಷರು ಹೋರಾಟದ ರೂಪುರೇಷೆ ನಿರ್ಧರಿಸಲಿದ್ದಾರೆ ಎಂದರು.

ಮಾಜಿ ಡಿಸಿಎಂ ಡಾ.ಅಶ್ವತ್ಥ ನಾರಾಯಣ್ ಮಾತನಾಡಿ, ಶಿವಮೊಗ್ಗ ಅಧಿಕಾರಿ ಆತ್ಮಹತ್ಯೆ ಘಟನೆ ಸಂಬಂಧ ಮೊನ್ನೆಯೇ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದೇವೆ. ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ‌, ಮಾಜಿ ಸಿಎಂ ಡಿವಿ ಸದಾನಂದಗೌಡ ಎಲ್ಲರೂ ಸಹ ಮಾತನಾಡಿದ್ದಾರೆ. ನಾಳೆ ನಮ್ಮ ರಾಜ್ಯಾಧ್ಯಕ್ಷರು, ಮೃತಪಟ್ಟ ಚಂದ್ರಶೇಖರನ್​ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳುತ್ತಾರೆ. ಇನ್ನೂ ಕೇಸ್ ದಾಖಲೆ ಮಾಡದೇ ಯಾರನ್ನೂ ಬಂಧಿಸಿಲ್ಲ. ಎಫ್ಐಆರ್ ಸಹ ಫೈಲ್ ಮಾಡಿಲ್ಲ. ಇದು ನೇರವಾಗಿ ಸಿದ್ದರಾಮಯ್ಯ ಮೇಲೆ ಆರೋಪ ಬರಲಿದೆ. ಒಂದು ಖಾತೆಯನ್ನು ಓಪನ್ ಮಾಡಲು ಎಫ್​ಡಿ (ಹಣಕಾಸು ಇಲಾಖೆ)ಯಿಂದ ಪರ್ಮಿಷನ್ ​ಬೇಕು. ಆದರೆ ಹೇಗೆ ಖಾತೆ ಓಪನ್ ಮಾಡಿದ್ದಾರೆ ಅಂತ ಸಿದ್ದರಾಮಯ್ಯ ಹೇಳಬೇಕು. ಸುರ್ಜೇವಾಲಾ ಎಲ್ಲಿದಾರೆ ಈಗ..? ಮಾತಾಡ್ತಿಲ್ಲ. ಇದಕ್ಕೆ ನೇರವಾಗಿ ಸಿದ್ದರಾಮಯ್ಯ ಜವಾಬ್ದಾರಿ. ಎಫ್ಐಆರ್ ಫೈಲ್ ಮಾಡದೇ ಸಿಐಡಿಗೆ ಕೊಟ್ಟರೆ ಏನ್ ಲಾಭ..?. ಈ ವಿಚಾರದಲ್ಲಿ ಬಿಜೆಪಿ ಉಗ್ರ ಹೋರಾಟ ಮಾಡಲಿದೆ ಎಂದು ಹೇಳಿದರು.

ನಾಗೇಂದ್ರ ಅವರು ದಲಿತರಿಗೆ ಮೋಸ ಮಾಡಿದ್ದಾರೆ. ಇವರು ಸ್ವತಃ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಎಲ್ಲಿದ್ದಾರೆ..? ಹುಡುಕಿಕೊಡಬೇಕು. ಪಾಪ ಅವರು ದೆಹಲಿಯಲ್ಲಿ ಕುಳಿತಿದ್ದಾರೆ. ಪರಿಷತ್ ಟಿಕೆಟ್ ಲಾಬಿ ಮಾಡಲು ದೆಹಲಿಯಲ್ಲಿ ಕುಳಿತಿದ್ದಾರೆ. ಪಾಪ ಸಿಎಂ ಹಾಗೂ ಡಿಸಿಎಂ ದೆಹಲಿಯಲ್ಲಿ ಇದ್ದಾರೆ. ಈ ಹೋರಾಟವನ್ನು ಬಹಳ ಪ್ರಬಲವಾಗಿ ತೆಗೆದುಕೊಳ್ಳುತ್ತೇವೆ. ಸಿದ್ದರಾಮಯ್ಯ ಅವರೇ ಈ ವಿಚಾರದಲ್ಲಿ ರಾಜೀನಾಮೆ ಕೊಡಬೇಕು. ಹಣ ವರ್ಗಾವಣೆ ಬಗ್ಗೆ ಅಧಿಕಾರಿಗಳ ಕಾಲ್ ರೆಕಾರ್ಡ್ ತೆಗಿಬೇಕು ಎಂದು ಆಗ್ರಹಿಸಿದರು.

ಪ್ರಜ್ವಲ್ ರೇವಣ್ಣ ದೇಶಕ್ಕೆ ವಾಪಸ್ಸಾಗೋ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅಶ್ವತ್ಥನಾರಾಯಣ, ಇದು ಅಮಿತ್ ಶಾ ಡೈರೆಕ್ಷನ್​ನಿಂದ ನಡೀತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಪ್ರಿಯಾಂಕ್ ಅವರೊಬ್ಬ ವಿಶೇಷ ವ್ಯಕ್ತಿ. ಅವರ ಬಗ್ಗೆ ಮಾತನಾಡೋದು ಸರಿಯಲ್ಲ. ನಾಲಿಗೆ ಇದೆಯಂತ ಮನಬಂದಂತೆ ಮಾತನಾಡುತ್ತಾರೆ. ಇದಕ್ಕೆ ತಕ್ಕ ಪ್ರತಿಫಲವನ್ನೂ ಅವರು ಅನುಭವಿಸಿದ್ದಾರೆ. ಅವರು ಬಾಯಿಗೆ ಬೀಗ ಹಾಕಿಕೊಂಡರೆ ಉತ್ತಮ. ಅವರ ಬಗ್ಗೆ ಮಾತಾಡದಿರೋದೇ ಉತ್ತಮ. ಜೂನ್ 4 ರಂದು ಇದಕ್ಕೆ ಸರಿಯಾದ ಉತ್ತರ ಸಿಗಲಿದೆ ಎಂದು ತಿರುಗೇಟು ನೀಡಿದರು.

ಓದಿ:ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಅರ್ಜಿ; ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದ ಕೋರ್ಟ್​ - Prajwal seeks for anticipatory bail

ABOUT THE AUTHOR

...view details