ಕಾರವಾರ: ನಾಡಬಾಂಬ್ ಸ್ಫೋಟಗೊಂಡು ಕುರಿ ಕಾಯುತ್ತಿದ್ದ ವ್ಯಕ್ತಿಯೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮುಂಡಗೋಡ ತಾಲೂಕಿನ ಬಾಚಣಕಿ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿತು. ಬಾಚಣಕಿಯ ಬರಮಪ್ಪ ವಡ್ಡರ್ ಗಾಯಗೊಂಡ ರೈತ.
ಬರಮಪ್ಪ ವಡ್ಡರ್ ತನ್ನ ಕುರಿಗಳನ್ನು ಮೇಯಿಸಲು ಊರ ಪಕ್ಕದಲ್ಲಿರುವ ಕೆರೆಯ ಹತ್ತಿರ ಹೋಗಿದ್ದರು. ಅಲ್ಲಿ ಬಹಿರ್ದೆಸೆಗೆ ತೆರಳಿದ್ದಾಗ ಪಕ್ಕದಲ್ಲೇ ಹೊಳಪಿದ್ದ ವಸ್ತುವೊಂದನ್ನು ಕಂಡು, ಅದನ್ನು ಕೈಯಲ್ಲಿ ಹಿಡಿದು ಹಿಚುಕಿದ್ದಾರೆ. ತಕ್ಷಣ ಅದು ಸ್ಫೋಟಗೊಂಡಿದೆ. ಪರಿಣಾಮ ರೈತನ ಎಡಗೈಯ ಎರಡು ಬೆರಳುಗಳು ತುಂಡಾಗಿವೆ. ಮುಂಡಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.
ಸ್ಫೋಟಗೊಂಡಿರುವುದು ನಾಡಬಾಂಬ್ ಎಂದು ಅಂದಾಜಿಸಲಾಗಿದೆ. ಊರ ಪಕ್ಕದಲ್ಲೇ ಜನರು ಓಡಾಡುವ, ಸಾಕಪ್ರಾಣಿಗಳು ನೀರು ಕುಡಿಯಲು ಆಶ್ರಯಿಸಿರುವ ಕೆರೆಯ ಪಕ್ಕದಲ್ಲಿ ದೊರಕಿರುವ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಅಸಲಿ, ಬಾಚಣಕಿ, ವಡಗಟ್ಟಾ ಭಾಗ ಸೇರಿದಂತೆ ತಾಲೂಕಿನ ಹಲವೆಡೆ ಕಾಡು ಪ್ರಾಣಿಗಳನ್ನು ನಿರಂತರವಾಗಿ ಬೇಟೆಯಾಡಲಾಗುತ್ತಿದೆ. ವಿಪರ್ಯಾಸವೆಂದರೆ ಕೆಲವು ಅರಣ್ಯ ಸಿಬ್ಬಂದಿಯೇ ಇಂತಹ ಕೃತ್ಯಗಳಿಗೆ ಪರೋಕ್ಷವಾಗಿ ಸಾಥ್ ನೀಡುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ:ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ: 50ಕ್ಕೂ ಹೆಚ್ಚು ಮನೆಗಳು ಭಸ್ಮ, ಏಳು ಜನ ಸಾವು, 60ಕ್ಕೂ ಹೆಚ್ಚು ಜನರಿಗೆ ಗಾಯ