ಮೈಸೂರು:"ಸರ್ವೆ ನಂಬರ್ 464ರ 3 ಎಕರೆ 16 ಗುಂಟೆ ವಿವಾದಿತ ಜಮೀನಿನಲ್ಲಿ ನಿವೇಶನ, ಒಳಚರಂಡಿ ಮತ್ತು ಉದ್ಯಾನವನ ನಿರ್ಮಿಸಿರಲಿಲ್ಲ. ಅದೊಂದು ಖಾಲಿ ಜಾಗವೆಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ಮಹಜರು ಸಂದರ್ಭದಲ್ಲಿ ಜಮೀನಿನ ಗಡಿಗಳನ್ನು ಮಾತ್ರ ಗುರುತು ಮಾಡಲಾಗಿತ್ತು. ಅಲ್ಲಿ ಗಿಡ-ಗಂಟಿಗಳು ಬೆಳೆದಿದ್ದರಿಂದ ಉದ್ಯಾನವನ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಆ ಗಿಡ-ಗಂಟಿಗಳನ್ನು ತೆರವು ಮಾಡಿ, ರಸ್ತೆ, ಒಳಚರಂಡಿ ಮತ್ತು ಉದ್ಯಾನವನದ ಫೋಟೋ ಹಾಗು ವಿಡಿಯೋಗಳನ್ನು ತೆಗೆದುಕೊಂಡು, ಅವುಗಳನ್ನು ತನಿಖೆಗೆ ಬಳಸಿಕೊಳ್ಳಬೇಕು ಎಂದು ಮೈಸೂರಿನ ಲೋಕಾಯುಕ್ತರಿಗೆ ಮನವಿ ಮಾಡಿದ್ದೇನೆ" ಎಂದು ದೂರುದಾರ ಸ್ನೇಹಮಯಿ ತಿಳಿಸಿದರು.
ಇಂದು ಮೈಸೂರಿನ ಲೋಕಾಯುಕ್ತ ಕಚೇರಿಗೆ ಆಗಮಿಸಿ ಮನವಿ ಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಹಿಂದೆ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ಪ್ರಸ್ತುತ ರಾಯಚೂರು ಸಂಸದರಾಗಿರುವ ಕುಮಾರ್ ನಾಯ್ಕ್, ದೂರುದಾರರಿಗೆ ಕಾನೂನಿನ ತಿಳುವಳಿಕೆ ಇಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಅವರು ಯಾವ ಕಾನೂನಿನ ಅಡಿಯಲ್ಲಿ ಮಲ್ಲಿಕಾರ್ಜುನ ಸ್ವಾಮಿಗೆ ಈಗಾಗಲೇ ಮಾರಾಟವಾಗಿದ್ದ ಭೂಮಿಯನ್ನು ಮರು ಮಾರಾಟ ಮಾಡಿದರು?. ನಿವೇಶನವಾಗಿದ್ದ ಭೂಮಿಯನ್ನು ಹೇಗೆ ಕೃಷಿ ಭೂಮಿ ಎಂದು ಮಲ್ಲಿಕಾರ್ಜುನ ಸ್ವಾಮಿಗೆ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟರು" ಎಂದು ಪ್ರಶ್ನಿಸಿದರು.
ಕುಮಾರ್ನಾಯ್ಕ್ ಅವರನ್ನು ವಿಚಾರಣೆಗೆ ಒಳಪಡಿಸಿ: "ಅಲ್ಲಿನ 12 ನಿವೇಶನಗಳ ಖರೀದಿದಾರರಿಂದ ಮಾಹಿತಿ ಪಡೆಯಬೇಕು. ಕುಮಾರ್ ನಾಯ್ಕ್ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಜಮೀನಿನ ಅನ್ಯಕ್ರಾಂತ (ಭೂಮಿ ಪರಭಾರೆ) ಮಾಡುವಲ್ಲಿ ಅಪರಾಧ ಮಾಡಿದ್ದಾರೆ. ಆದ್ದರಿಂದ ಕುಮಾರ್ ನಾಯ್ಕ್ ಅವರನ್ನು ಮತ್ತೆ ತನಿಖೆಗೆ ಒಳಪಡಿಸಬೇಕು ಎಂದು ಲೋಕಾಯುಕ್ತರಿಗೆ ಮನವಿ ಮಾಡಿದ್ದೇನೆ" ಎಂದು ತಿಳಿಸಿದರು.