ಕರ್ನಾಟಕ

karnataka

ETV Bharat / state

ಪ್ಯಾರಾ ಥ್ರೋಬಾಲ್ ಚಾಂಪಿಯನ್ ಶಿಪ್​ಗೆ ಬೆಳಗಾವಿಯ ಏಳು ಆಟಗಾರರು ಆಯ್ಕೆ: ಶ್ರೀಲಂಕಾಗೆ ಹೋಗಲು ಆರ್ಥಿಕ ಸಂಕಷ್ಟ - Para Throwball Championship - PARA THROWBALL CHAMPIONSHIP

ಪ್ಯಾರಾ ಥ್ರೋಬಾಲ್ ಚಾಂಪಿಯನ್ ಶಿಪ್​ಗೆ ಏಳು ಆಟಗಾರರು ಆಯ್ಕೆಯಾಗಿದ್ದು, ಶ್ರೀಲಂಕಾಗೆ ಹೋಗಲು ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಆಯ್ಕೆಯಾದ ಆಟಗಾರರಿಗೆ ದಾನಿಗಳ ಸಹಾಯಹಸ್ತ ಬೇಕಾಗಿದೆ.

FINANCIAL DIFFICULTIES  SEVEN PLAYERS SELECTED  SRI LANKA  BELAGAVI
ಪ್ಯಾರಾ ಥ್ರೋಬಾಲ್ ಚಾಂಪಿಯನ್ ಶಿಪ್​ಗೆ ಏಳು ಆಟಗಾರರು ಆಯ್ಕೆ (ETV Bharat)

By ETV Bharat Karnataka Team

Published : Jun 22, 2024, 5:20 PM IST

Updated : Jun 22, 2024, 6:25 PM IST

ಪ್ಯಾರಾ ಥ್ರೋಬಾಲ್ ಚಾಂಪಿಯನ್ ಶಿಪ್​ಗೆ ಶ್ರೀಲಂಕಾ ತೆರಳಲು ಆಟಗಾರರಿಗೆ ಬೇಕಿದೆ ಆರ್ಥಿಕ ನೆರವು (ETV Bharat)

ಬೆಳಗಾವಿ: ಶ್ರೀಲಂಕಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಸಿಟ್ಟಿಂಗ್ ಪ್ಯಾರಾ ಥ್ರೋಬಾಲ್ ಚಾಂಪಿಯನ್ ಶಿಪ್​ಗೆ ಬೆಳಗಾವಿ ಜಿಲ್ಲೆಯ ಏಳು ಆಟಗಾರರು ಆಯ್ಕೆಯಾಗಿದ್ದಾರೆ. ಪದಕ ಗೆಲ್ಲುವ ಉತ್ಸಾಹದಲ್ಲಿರುವ ಈ ಆಟಗಾರರಿಗೆ ಈಗ ಆರ್ಥಿಕ ಸಮಸ್ಯೆ ಎದುರಾಗಿದೆ. ದಾನಿಗಳ ನೆರವಿನ ಹಸ್ತದ ನಿರೀಕ್ಷೆಯಲ್ಲಿದ್ದಾರೆ.

ಹೌದು, ಶ್ರೀಲಂಕಾದ ಕೊಲಂಬೊದಲ್ಲಿ ಇದೇ ಜುಲೈ 8 ರಿಂದ 10ರ ವರೆಗೆ ಎರಡು ದಿನಗಳ ಕಾಲ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಸಿಟ್ಟಿಂಗ್ ಪ್ಯಾರಾ ಥ್ರೋಬಾಲ್ ಚಾಂಪಿಯನ್ ಶಿಪ್ ಆಯೋಜಿಸಲಾಗಿದೆ. ಪುರುಷರ ತಂಡದಲ್ಲಿ ಬೆಳಗಾವಿ ಜಿಲ್ಲೆಯ ಮಹಾಂತೇಶ ಹೊಂಗಲ, ಸೂರಜ್ ಧಾಮನೇಕರ್, ಸುರೇಶ ಕುಂಬಾರ, ಈರಣ್ಣ ಹೊಂಡಪ್ಪನವರ, ಮನಸೂರ್ ಮುಲ್ಲಾ ಆಯ್ಕೆಯಾದರೆ, ಮಹಿಳೆಯರ ತಂಡದಲ್ಲಿ ಮನಿಷಾ ಪಾಟೀಲ, ಭಾಗ್ಯಶ್ರೀ ಮಳಲಿ ಸ್ಥಾನ ಪಡೆಯುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.

ಪ್ಯಾರಾ ಥ್ರೋಬಾಲ್ ಚಾಂಪಿಯನ್ ಶಿಪ್​ಗೆ ಏಳು ಆಟಗಾರರು ಆಯ್ಕೆ (ETV Bharat)

ಪ್ರತಿಭೆಗಳಿಗೆ ಆರ್ಥಿಕ ಸಂಕಷ್ಟ; 2023ರಲ್ಲಿ ಛತ್ತಿಸಗಡದಲ್ಲಿ ನಡೆದ 7ನೇ ರಾಷ್ಟ್ರೀಯ ಮಟ್ಟದ ವ್ಹೀಲ್ ಚೇರ್ ಬಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್​ನಲ್ಲಿ ಬೆಳ್ಳಿ ಪದಕ ವಿಜೇತ ತಂಡದಲ್ಲಿ ಇವರೆಲ್ಲಾ ಆಡಿದ್ದರು. ಪುಣೆಯಲ್ಲಿ 2023ರ ಸೆಪ್ಟೆಂಬರ್​ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ರಗ್ಬಿ ಚಾಂಪಿಯನ್ ಶಿಪ್​ನಲ್ಲಿ ಬೆಳ್ಳಿ ಪದಕ, 2024 ಜನವರಿಯಲ್ಲಿ ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಪರ್ಪಪ್ ಫೆಸ್ಟ್​​ನಲ್ಲಿ ವ್ಹೀಲ್ ಚೇರ್ ಬಾಸ್ಕೆಟ್ ಬಾಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು. ಈಗ ಶ್ರೀಲಂಕಾದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಥ್ರೋಬಾಲ್ ಚಾಂಪಿಯನ್ ಶಿಪ್​ನಲ್ಲೂ ಚಾಂಪಿಯನ್ ಆಗುವ ಹುಮ್ಮಸ್ಸಿನಲ್ಲಿದ್ದಾರೆ. ಆದರೆ, ಶ್ರೀಲಂಕಾಗೆ ತೆರಳಲು ಇವರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ದಾನಿಗಳು ನೆರವು ನಮಗೆ ಬೇಕಿದೆ ಎಂದು ಕೇಳಿಕೊಂಡಿದ್ದಾರೆ.

ನಮಗೂ ಸಾಧಿಸುವ ಛಲ ಇದೆ; ತಂಡದ ಕ್ಯಾಪ್ಟನ್ ಮಹಾಂತೇಶ ಹೊಂಗಲ ಈಟಿವಿ ಭಾರತ ಜೊತೆಗೆ ಮಾತನಾಡಿ, ಎಲ್ಲ ಆಟಗಾರರು ನಾವು ಬಡತನದ ಪರಿಸ್ಥಿತಿಯಲ್ಲಿದ್ದೇವೆ. ಸಾಮಾನ್ಯ ಆಟಗಾರರಿಗೆ ಸರ್ಕಾರ ಸಾಕಷ್ಟು ಸಹಕಾರ ನೀಡುತ್ತದೆ. ಕ್ರಿಕೆಟ್ ಆಟಗಾರರಿಗೆ ಕೋಟ್ಯಂತರ ರೂ. ವ್ಯಯಿಸುತ್ತಾರೆ‌‌. ವಿಕಲಚೇತನರು ಎಂದರೆ ಯಾಕೋ ಬೇರೆ ರೀತಿ ನೋಡಲಾಗುತ್ತಿದೆ. ನಮ್ಮಲ್ಲೂ ಸಾಧನೆ ಮಾಡುವ ಹಂಬಲ, ದೇಶಕ್ಕೆ ಕೀರ್ತಿ ತರುವ ಛಲವಿದೆ. ದಯವಿಟ್ಟು ನಮಗೆ ಸಹಾಯ ಮಾಡುವಂತೆ ಕೇಳಿಕೊಂಡರು.

ಪ್ಯಾರಾ ಥ್ರೋಬಾಲ್ ಚಾಂಪಿಯನ್ ಶಿಪ್​ಗೆ ಏಳು ಆಟಗಾರರು ಆಯ್ಕೆ (ETV Bharat)

ಸೂರಜ್ ಧಾಮನೇಕರ್ ಮಾತನಾಡಿ, ವಿಕಲಚೇತನರ ಬಗ್ಗೆ ಯಾವುದೇ ಕಾರಣಕ್ಕೂ ಅನುಕಂಪ ಬೇಡ. ಗೌರವ ಮತ್ತು ಅವಕಾಶ ಕೊಟ್ಟರೆ ದೇಶ ಮತ್ತು ರಾಜ್ಯಕ್ಕೆ ಕೀರ್ತಿ ತರುವ ಛಲ ನಮ್ಮಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮಾಜಸೇವಕ ಸುರೇಶ ಯಾದವ್​ ಮಾತನಾಡಿ, ಬೆಳಗಾವಿ ಏಳು ಆಟಗಾರರು ಭಾರತ ತಂಡಕ್ಕೆ ಆಯ್ಕೆ ಆಗಿದ್ದು, ನಮಗೆಲ್ಲಾ ಹೆಮ್ಮೆ ಮತ್ತು ಸಂತಸದ ಸಂಗತಿ. ಆದರೆ, ಇವರು ಶ್ರೀಲಂಕಾಗೆ ಹೋಗಲು ಐದಾರು ಲಕ್ಷ ರೂಪಾಯಿ ಖರ್ಚಾಗುತ್ತದೆ. ಹಾಗಾಗಿ, ರಾಜಕಾರಣಿಗಳು, ಉದ್ಯಮಿಗಳು, ಸಂಘ ಸಂಸ್ಥೆಗಳು ಆರ್ಥಿಕ ನೆರವು ನೀಡಿದರೆ, ಇವ್ರು ಚಾಂಪಿಯನ್ ಆಗಿ, ಬೆಳಗಾವಿ ಕೀರ್ತಿ ಹೆಚ್ಚಿಸುವುದರಲ್ಲಿ ಸಂಶಯವೇ ಇಲ್ಲ ಎಂದು ಅಭಿಪ್ರಾಯಪಟ್ಟರು.

ಶ್ರೀಲಂಕಾ ಸಹಯೋಗದಲ್ಲಿ ಆಯೋಜಿಸಿರುವ ಈ ಚಾಂಪಿಯನ್ ಶಿಪ್​​ನಲ್ಲಿ ಭಾರತ, ಶ್ರೀಲಂಕಾ, ಥಾಯ್ಲೆಂಡ್, ನೇಪಾಳ ಸೇರಿ ಇನ್ನಿತರ ದೇಶಗಳ ತಂಡಗಳು ಭಾಗವಹಿಸಲಿವೆ.

ಓದಿ:ಕೋರ್ಟ್ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್: ಆರೋಪಿ ದರ್ಶನ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ - Renukaswamy Murder Case

Last Updated : Jun 22, 2024, 6:25 PM IST

ABOUT THE AUTHOR

...view details