ಕರ್ನಾಟಕ

karnataka

ETV Bharat / state

ಸೇವಾ ನ್ಯೂನತೆ: ಸಂಶೋಧನಾ ಕೇಂದ್ರಕ್ಕೆ ಪರಿಹಾರ ನೀಡಲು ಗ್ರಾಹಕರ ವ್ಯಾಜ್ಯಗಳ ಆಯೋಗ ಆದೇಶ - Consumer Court Order - CONSUMER COURT ORDER

ಸಂಶೋಧನಾ ಕೇಂದ್ರಕ್ಕೆ ಖರೀದಿಸಲಾದ ಉಪಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿ ವಿಚಾರಣೆ ಗ್ರಾಹಕರ ಕೋರ್ಟ್‌ನಲ್ಲಿ ನಡೆಯಿತು.

COMPENSATION TO RESEARCH CENTRE  SERVICE DEFICIENCY  CONSUMER LITIGATION COMMISSION  SHIVAMOGGA
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗ ಆದೇಶ (ETV Bharat)

By ETV Bharat Karnataka Team

Published : Jun 19, 2024, 6:23 PM IST

ಶಿವಮೊಗ್ಗ:ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಜಾನುವಾರುಗಳ ಅಸ್ಪಷ್ಟ ರೋಗಗಳ ಸಂಶೋಧನಾ ಕೇಂದ್ರಕ್ಕೆ ಖರೀದಿಸಲಾದ ಉಪಕರಣಕ್ಕೆ ಸಂಬಂಧಿಸಿದಂತೆ ಎದುರುದಾರ ವಿತರಕ ಸಂಸ್ಥೆಗಳ ವಿರುದ್ಧ ಸೇವಾ ನ್ಯೂನತೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಎದುರುದಾರರಿಗೆ ಉಪಕರಣ ದುರಸ್ತಿಪಡಿಸಿಕೊಡುವಂತೆ ಸೂಚನೆ ನೀಡಿದೆ. ಒಂದು ವೇಳೆ ಉಪಕರಣಗಳನ್ನು ದುರಸ್ತಿಪಡಿಸಿ ಕೊಡದಿದ್ದಲ್ಲಿ ಅದರ ಮೌಲ್ಯ ಮರುಪಾವತಿಸುವಂತೆ ಆದೇಶಿಸಿದೆ.

ಆಸ್ಟ್ರಿಯಾ ದೇಶದ HYCEL HNDEL SGESELLSCHAFT ಸಂಸ್ಥೆಯಿಂದ ತಯಾರಿಸಲ್ಪಟ್ಟ 'ಆಟೋ ಹೆಮಟಾಲಜಿ ಆನಲೈಸರ್' ಉಪಕರಣವನ್ನು ಚೆನ್ನೈನ ಬೀಟಾ ಎಕ್ಯುಪ್ಮೆಂಟ್ಸ್​ & ಎಕ್ಯುಪ್ಮೆಂಟ್ಸ್​ ಕಂಪನಿಯಿಂದ ಟೆಂಡರ್ ಮೂಲಕ ರೂ.6,73,200 ನೀಡಿ ಸಂಶೋಧನಾ ಕೇಂದ್ರ ಖರೀದಿಸಿತ್ತು. 5 ಅಕ್ಟೋಬರ್​ 2018ರಂದು ಈ ಉಪಕರಣವನ್ನು ಚೆನ್ನೈನ ಸಂಸ್ಥೆಯವರು ಜಾನುವಾರುಗಳ ಅಸ್ಪಷ್ಟ ರೋಗಗಳ ಸಂಶೋಧನಾ ಕೇಂದ್ರದ ಪ್ರಯೋಗಾಲಯದಲ್ಲಿ ಅಳವಡಿಸಿದ್ದರು.

ಈ ಉಪಕರಣ ಪ್ರಾರಂಭದಿಂದಲೂ ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಉಪಕರಣ ದೋಷಪೂರಿತವಾಗಿದೆ. ಇದನ್ನು ದುರಸ್ತಿಪಡಿಸಿಕೊಡಲು ಅಥವಾ ಬದಲಿ ಉಪಕರಣವನ್ನು ಒದಗಿಸಬೇಕೆಂದು ಉತ್ಪಾದಕ ಮತ್ತು ವಿತರಕ ಸಂಸ್ಥೆಗಳಿಗೆ ದೂರುದಾರರಾದ ಸಂಶೋಧನಾ ಕೇಂದ್ರದ ಮುಖ್ಯಸ್ಥರು ಕೋರಿದ್ದರು. ಚೆನ್ನೈನ ವಿತರಕ ಸಂಸ್ಥೆ ಲಿಖಿತ ಆಶ್ವಾಸನೆ ನೀಡಿ ಆ ಉಪಕರಣ ವಾಪಸ್ ತೆಗೆದುಕೊಂಡು ಹೋಗಿದ್ದರು. ಆದರೆ ಇದುವರೆಗೆ ಆ ಉಪಕರಣವನ್ನು ದುರಸ್ತಿಪಡಿಸಿ ವಾಪಸ್ ನೀಡದೇ ಅಥವಾ ಬದಲಿ ಉಪಕರಣ ಒಗದಿಸದೇ ಸೇವಾ ನ್ಯೂನತೆ ಎಸಗಿದ್ದಾರೆಂದು ತಿಳಿಸಿ, ಸೂಕ್ತ ಪರಿಹಾರ ಕೋರಿ ಸಂಶೋಧನ ಕೇಂದ್ರದ ಮುಖ್ಯಸ್ಥರು ಆಯೋಗದ ಮುಂದೆ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಉಪಕರಣ ವಿತರಕ ಸಂಸ್ಥೆ ಮತ್ತು ತಯಾರಕ ಸಂಸ್ಥೆಗೆ ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು. ಆಸ್ಟ್ರಿಯಾದ ತಯಾರಕ ಸಂಸ್ಥೆ ವಿಚಾರಣೆಗೆ ಗೈರು ಹಾಜರಾಗಿದ್ದು, ಚೆನ್ನೈನ ವಿತರಕ ಸಂಸ್ಥೆಯವರು ವಿಚಾರಣೆಗೆ ಹಾಜರಾಗಿ ತಮ್ಮಿಂದ ಸೇವಾ ನ್ಯೂನತೆ ಆಗಿಲ್ಲ ಎಂದು ವಾದಿಸಿದ್ದರು.

ಉಭಯ ಪಕ್ಷಕಾರರ ವಾದ-ವಿವಾದಗಳನ್ನು, ದಾಖಲೆಗಳನ್ನು ಆಯೋಗ ಕೂಲಂಕಷವಾಗಿ ಪರಿಶೀಲಿಸಿ ಚೆನ್ನೈನ ವಿತರಕ ಸಂಸ್ಥೆಯು ಉಪಕರಣವನ್ನು ವಾಪಸ್ ತೆಗೆದುಕೊಂಡು ಹೋದ 16 ನವೆಂಬರ್​ 2021 ರಿಂದ ಇದುವರೆಗೆ ದುರಸ್ತಿಪಡಿಸಿ ಹಿಂದಿರುಗಿಸದಿರುವುದು ಅಥವಾ ಬದಲಿ ಉಪಕರಣ ಒದಗಿಸದಿರುವುದನ್ನು ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಆಯೋಗದ ಆದೇಶದ ದಿನಾಂಕದಿಂದ 45 ದಿನಗಳ ಒಳಗಾಗಿ ಉಪಕರಣವನ್ನು ದುರಸ್ತಿಪಡಿಸಿ ಹಿಂದಿರುಗಿಸಬೇಕು. ತಪ್ಪಿದಲ್ಲಿ ಉಪಕರಣ ಖರೀದಿ ಮೌಲ್ಯವನ್ನು ವಾರ್ಷಿಕ ಶೇ.10ರ ಸವಕಳಿ ಸೂತ್ರದಲ್ಲಿ ಪರಿಗಣಿಸಿ 16 ನವೆಂಬರ್​​ 2021ಕ್ಕೆ ಅನ್ವಯವಾಗುವಂತೆ ಉಪಕರಣದ ಮೌಲ್ಯ ಮರುಪಾವತಿಸಬೇಕು.

ಇದೂ ಸಹ ತಪ್ಪಿದಲ್ಲಿ ಉಪಕರಣದ ಮೌಲ್ಯಕ್ಕೆ ಶೇ.10ರ ಬಡ್ಡಿ ಸೇರಿಸಿ ನೀಡಲು ಹಾಗೂ ಎದುರುದಾರ ಸಂಸ್ಥೆಗಳಿಂದ ಸೇವಾ ನ್ಯೂನತೆಯಿಂದಾಗಿ ಜಾನುವಾರುಗಳ ಅಸ್ಪಷ್ಟ ರೋಗಗಳ ಸಂಶೋಧನಾ ಕೇಂದ್ರ ಮತ್ತು ವಿಶ್ವವಿದ್ಯಾಲಯಕ್ಕಾದ ಅನಾನುಕೂಲತೆ ಮತ್ತು ಸಂಕಷ್ಟಗಳಿಗೆ ಪರಿಹಾರವಾಗಿ ರೂ.1,00,000 ಹಾಗೂ ಪ್ರಕರಣದ ವೆಚ್ಚ ರೂ.20,000 ಪಾವತಿಸಬೇಕೆಂದು ಆದೇಶಿಸಿತು.

ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ.ಪಟ್ಟಣಶೆಟ್ಟಿ, ಬಿ.ಡಿ.ಯೋಗಾನಂದ ಭಾಂಡ್ಯ ಇವರಿದ್ದ ಪೀಠ ಅರ್ಜಿ ವಿಚಾರಣೆ ನಡೆಸಿದೆ.

ಇದನ್ನೂ ಓದಿ:ಇನ್ವೆಸ್ಟ್ ಕರ್ನಾಟಕ 2022ಕ್ಕೆ 3ಡಿ ವಿಡಿಯೋ: ಬಾಕಿ ಮೊತ್ತ ಪಾವತಿಸಲು ಸೂಚಿಸಿದ್ದ ಆದೇಶ ರದ್ದು - High Court

ABOUT THE AUTHOR

...view details