ದೊಡ್ಡಬಳ್ಳಾಪುರ:ಕಳೆದೊಂದು ವಾರದಿಂದ ತಾಲೂಕಿನ ರಾಜಘಟ್ಟ ಗ್ರಾಮದಲ್ಲಿ ಕಳವು ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಮನೆಗಳ್ಳತನ, ಕುರಿ ಮೇಕೆ ಕಳವು, ಬೈಕ್ ಕಳವು, ಆಟವಾಡುತ್ತಿದ್ದ ಮಕ್ಕಳ ಚಿನ್ನಾಭರಣ ಕಳವು, ಕೋಳಿ ಕಳವು, ಸಾಲು ಸಾಲಾಗಿ ಕಳ್ಳತನ ನಡೆಯುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಇದೀಗ ಗ್ರಾಮದ ರಕ್ಷಣೆಗೆ ಮುಂದಾಗಿರುವ ಯುವಕರ ಗುಂಪು ಕೈಯಲ್ಲಿ ದೊಣ್ಣೆ ಹಿಡಿದು ಕಾವಲು ಕಾಯುತ್ತಿದ್ದಾರೆ.
ದೊಡ್ಡಬಳ್ಳಾಪುರ ನಗರದಿಂದ 9 ಕಿ.ಮೀ ದೂರದಲ್ಲಿರುವ ರಾಜಘಟ್ಟ ಗ್ರಾಮ ಕಳ್ಳತನ ಪ್ರಕರಣಗಳಿಗೆ ಸಾಕ್ಷಿಯಾಗಿದ್ದು, ಸರಣಿ ಕಳ್ಳತನ ಪ್ರಕರಣಗಳಿಂದ ಜನ ಹೊರ ಬರುವುದಕ್ಕೂ ಹೆದರುವಂತಾಗಿದೆ. ಗಾರೆ ಕೆಲಸ ಮಾಡುವ ರಾಜಣ್ಣ ಸೋಮವಾರ ರಾತ್ರಿ ತಮ್ಮ ಮನೆಗೆ ಬೀಗ ಹಾಕಿ ತಮ್ಮನ ಮನೆಯಲ್ಲಿ ಮಲಗಿದ್ದರು. ಈ ವೇಳೆ ಮನೆಯ ಬಾಗಿಲನ್ನು ಗಡಾರಿಯಿಂದ ಮೀಟಿರುವ ಕಳ್ಳರು ಬೀರುವಿನಲ್ಲಿದ್ದ ಒಡವೆಗಳನ್ನು ಕದ್ದೊಯ್ದಿದ್ದಾರೆ. ಇದೇ ರೀತಿ ಅನಿಲ್ ಎಂಬುವರ ಮನೆಯಲ್ಲೂ ಕಳ್ಳತನ ನಡೆದಿದೆ. ಮನೆಗೆ ಬೀಗ ಹಾಕಿದ ಅನಿಲ್ ಕುಟುಂಬ ಸಂಬಂಧಿಕರ ಮನೆಗೆ ಹೋಗಿದ್ದರು. ಈ ವೇಳೆ ಮನೆಯ ಬಾಗಿಲು ಒಡೆದು ಒಳನುಗ್ಗಿದ್ದ ಕಳ್ಳರು ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾರೆ.