ಕರ್ನಾಟಕ

karnataka

ETV Bharat / state

ಹೊಸ ನಕ್ಷೆ ಮಂಜೂರಾತಿಗೆ ಬಿಬಿಎಂಪಿಯಿಂದ 17 ಲಕ್ಷ ರೂ ಶುಲ್ಕ: ಹಿರಿಯ ವಕೀಲರಿಂದ ಹೈಕೋರ್ಟ್ ಮೊರೆ, ಸರ್ಕಾರಕ್ಕೆ ನೋಟಿಸ್

17 ಲಕ್ಷ ರೂ ಪಾವತಿಸುವಂತೆ ಸೂಚಿಸಿ ಬಿಬಿಎಂಪಿ ನೀಡಿದ್ದ ಡಿಮ್ಯಾಂಡ್ ನೋಟಿಸ್​ ರದ್ದು ಪಡಿಸುವಂತೆ ಕೋರಿ ಹಿರಿಯ ವಕೀಲ ಪ್ರಭುಲಿಂಗ ಕೆ. ನಾವದಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಹೈಕೋರ್ಟ್, ಬಿಬಿಎಂಪಿ
ಹೈಕೋರ್ಟ್, ಬಿಬಿಎಂಪಿ (ETV Bharat)

By ETV Bharat Karnataka Team

Published : Dec 3, 2024, 7:03 AM IST

ಬೆಂಗಳೂರು: ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಹೊಸದಾಗಿ ನಕ್ಷೆ ಮಂಜೂರು ಮಾಡಲು ನೆಲ ಬಾಡಿಗೆ ಶುಲ್ಕ ಸೇರಿದಂತೆ ವಿವಿಧ ಶುಲ್ಕ ಒಳಗೊಂಡಂತೆ ಒಟ್ಟು 17 ಲಕ್ಷ ರೂ. ಪಾವತಿಸಲು ಸೂಚಿಸಿ ಬಿಬಿಎಂಪಿ ತಮಗೆ ನೀಡಿರುವ ಡಿಮ್ಯಾಂಡ್ ನೋಟಿಸ್ ಪ್ರಶ್ನಿಸಿ ಹಿರಿಯ ವಕೀಲ ಪ್ರಭುಲಿಂಗ ಕೆ. ನಾವದಗಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಮಾಜಿ ಅಡ್ವೋಕೇಟ್ ಜನರಲ್ ಆದ ಪ್ರಭುಲಿಂಗ ಕೆ.ನಾವದಗಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರ ನ್ಯಾಯಪೀಠ ಈ ಆದೇಶ ಮಾಡಿದೆ. ಅಲ್ಲದೆ, ಅರ್ಜಿದಾರರಿಗೆ ಡಿಮ್ಯಾಂಡ್ ನೋಟಿಸ್‌ನಲ್ಲಿ ತಿಳಿಸಿರುವ ಕೆಲ ತೆರಿಗೆ - ಶುಲ್ಕಗಳ ಪಾವತಿಗೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಮಾಡಿದೆ.

ಅರ್ಜಿದಾರರು ಆರ್.ಟಿ. ನಗರದ ಮಠದಹಳ್ಳಿಯಲ್ಲಿ ನಿವೇಶನವೊಂದನ್ನು ಹೊಂದಿದ್ದಾರೆ. ಅದರಲ್ಲಿ ಬಹುಮಹಡಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಲು ಅವರು ಉದ್ದೇಶಿಸಿದ್ದಾರೆ. ಅದರಂತೆ ನಕ್ಷೆ ಮಂಜೂರಾತಿಗೆ ಕೋರಿ ಬಿಬಿಎಂಪಿಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ನಕ್ಷೆ ಮಂಜೂರಾತಿ ನೀಡಲು 17,72,000 ರೂ. ಪಾವತಿ ಮಾಡುವಂತೆ ಸೂಚಿಸಿ ಬಿಬಿಎಂಪಿಯು 2024ರ ಸೆ.11ರಂದು ಅರ್ಜಿದಾರರಿಗೆ ಡಿಮ್ಯಾಂಡ್ ನೋಟಿಸ್ ನೀಡಿದೆ.

ಅದನ್ನು ಪ್ರಶ್ನಿಸಿರುವ ಅರ್ಜಿದಾರರು, ಬಿಬಿಎಂಪಿ ಪಾವತಿಸಲು ಸೂಚಿಸಿರುವ ಮೊತ್ತದಲ್ಲಿ ಅಭಿವೃದ್ಧಿ ಶುಲ್ಕ, ನೆಲ ಬಾಡಿಗೆ, ಪರಿಶೀಲನಾ ಶುಲ್ಕ, ನೀರು ಪೂರೈಕೆ ಸೆಸ್, ಎಂಆರ್‌ಟಿಎಸ್, ವರ್ತುಲ ರಸ್ತೆ, ಕೊಳಚೆ ಅಭಿವೃದ್ಧ ಸೇರಿದಂತೆ ಇನ್ನಿತರ ತೆರಿಗೆ (ಶುಲ್ಕ ) ಒಳಗೊಂಡಿದೆ. ಆದರೆ, ಕರ್ನಾಟಕ ಪಟ್ಟಣ ಮತ್ತು ನಗರ ಯೋಜನಾ ಕಾಯ್ದೆ (ಕೆಟಿಸಿಪಿ) ಮತ್ತು ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ (ಕೆಎಂಸಿ) ಕಾಯ್ದೆಯಡಿ ತಿದ್ದುಪಡಿ ತಂದು ದೊಡ್ಡ ಮೊತ್ತದ ತೆರಿಗೆ ವಿಧಿಸಲಾಗಿದೆ. ಆದರೆ, ಈ ರೀತಿಯ ತೆರಿಗೆ ವಿಧಿಸುವುದು ಅಸಾಂವಿಧಾನಿಕ ಎಂದು ಹೈಕೋರ್ಟ್ ಈ ಹಿಂದೆಯೇ ಆದೇಶಿಸಿದೆ ಎಂದು ಆಕ್ಷೇಪಿಸಿದ್ದಾರೆ.

ಅಲ್ಲದೆ, ನಕ್ಷೆ ಮಂಜೂರಾತಿ ಮಾಡಲು ನೆಲಬಾಡಿಗೆ ಶುಲ್ಕ ಸೇರಿದಂತೆ ವಿವಿಧ ರೀತಿಯ ತೆರಿಗೆ ಪಾವತಿಸಲು ಕೆಟಿಸಿಪಿ ಕಾಯ್ದೆ ಸೆಕ್ಷನ್ 18-ಎ, ಕರ್ನಾಟಕ ಯೋಜನಾ ಪ್ರಾಧಿಕಾರ ಅಧಿನಿಯಮಗಳ ನಿಯಮ 37-ಸಿ, ಕರ್ನಾಟಕ ಮುನ್ಸಿಪಲ್ ಕಾಪೋರೇಷನ್ ಮತ್ತು ಇತರೆ ಕೆಲ ಕಾನೂನುಗಳು (ತಿದ್ದುಪಡಿ) ಕಾಯ್ದೆ-2021ರ ಅಧಿನಿಯಮಗಳ ಅಡಿ ಅನಧಿಕೃತವಾಗಿ ತೆರಿಗೆಗಳನ್ನು ವಿಧಿಸಲಾಗುತ್ತಿದೆ. ಆದ್ದರಿಂದ ತಮಗೆ ನೀಡಿರುವ ಡಿಮ್ಯಾಂಡ್ ನೋಟಿಸ್ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ತಿಳಿಸಿದ್ದರು.

ಇದನ್ನೂ ಓದಿ: ಸುರಕ್ಷತಾ ಷರತ್ತುಗಳ ಪಾಲನೆಗೆ ಖಾಸಗಿ ಶಾಲೆಗಳಿಗೆ ಮುಂದಿನ ಶೈಕ್ಷಣಿಕ ವರ್ಷದವರೆಗೂ ಅವಕಾಶ

ABOUT THE AUTHOR

...view details