ಮಾಜಿ ಸಚಿವ ಸಿ.ಟಿ.ರವಿ ಪ್ರತಿಕ್ರಿಯೆ ಬೆಂಗಳೂರು:''ಪಾಕಿಸ್ತಾನ ಪರ ಘೋಷಣೆ ಕೂಗಲು ಎಲ್ಲಿಂದ ಪ್ರಚೋದನೆ ಸಿಕ್ಕಿತು ಎಂಬುದು ತನಿಖೆಯಾಗಬೇಕು. ಇಂಥ ಚಟುವಟಿಕೆಗಳನ್ನು ಬೇರುಸಹಿತ ಕಿತ್ತು ಹಾಕಿದಿದ್ದರೆ, ಸರಣಿ ಸ್ಫೋಟಗಳೂ ಪ್ರಾರಂಭವಾಗಬಹುದು. ದೇಶದ್ರೋಹಿಗಳು ರಕ್ತ ಬೀಜಾಸುರನಂತೆ ಬೆಳೆಯುವ ಸಾಧ್ಯತೆಗಳಿವೆ. ಹಾಗಾಗಿ ಸಮಗ್ರ ತನಿಖೆಗೆ ಆದೇಶಿಸಬೇಕು'' ಎಂದು ಮಾಜಿ ಸಚಿವ ಸಿ.ಟಿ.ರವಿ ಆಗ್ರಹಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸೋಮವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ''ಪಾಕ್ ಪರ ಘೋಷಣೆ ಆರೋಪದಡಿ ಮೂವರ ಬಂಧನವಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ತನಿಖಾಧಿಕಾರಿಯಂತೆ ಹೇಳಿಕೆ ಕೊಟ್ಟಿದ್ದರು. ಖಾಸಗಿ ಎಫ್‌ಎಸ್ಎಲ್ ವರದಿ ಮಾಧ್ಯಮದಲ್ಲಿ ಪ್ರಸಾರವಾದ ಬಳಿಕ ಕ್ಲೀನ್‌ಚಿಟ್ ಕೊಡಲು ಸಾಧ್ಯವಾಗಲಿಲ್ಲ ಅಂತಾ ಅನ್ನಿಸುತ್ತದೆ. ಹಾಗಾಗಿ ಸಮಗ್ರ ತನಿಖೆಗೆ ಪೊಲೀಸರನ್ನು ಒತ್ತಾಯಿಸುತ್ತೇನೆ. ಕಾಂಗ್ರೆಸ್ ಗೆಲುವನ್ನು ಪಾಕಿಸ್ತಾನದ ಜೊತೆ ಯಾಕೆ ಸಮೀಕರಿಸಿದರು? ಇದರ ಹಿಂದಿರುವ ಸಂಘಟನೆ ಯಾವುದು? ಕೂಗಲು ಪ್ರಚೋದನೆ ಎಲ್ಲಿಂದ ಬಂತು? ಭಯೋತ್ಪಾದನೆಗೆ ಬೀಜಾಂಕುರ ಆಗುವುದೇ ಮಾನಸಿಕತೆಯಿಂದ. ಈ ರೀತಿಯ ಮಾನಸಿಕ ಒಲವು ವ್ಯಕ್ತಪಡಿಸುತ್ತಾ ಭಯೋತ್ಪಾದಕರಾಗಿ ಬದಲಾಗುತ್ತಾರೆ'' ಎಂದರು.
ಸಚಿವರ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು-ರವಿಕುಮಾರ್:''ದೇಶದ್ರೋಹಿಗಳನ್ನು ಸಮರ್ಥಿವುದೂ ದೇಶದ್ರೋಹವೇ ಆದ ಕಾರಣ ಕೂಗಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ ಅವರನ್ನು ಬೆಂಬಲಿಸಿ ಸಮರ್ಥಿಸಿ ಸಂಚಿನ ಭಾಗವೇ ಆಗಿರುವ ಸಚಿವರ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು. ಆ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ದೇಶವಿರೋಧಿ, ಸಂವಿಧಾನ ವಿರೋಧಿ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಬೇಕು" ಎಂದು ವಿಧಾನ ಪರಿಷತ್ ಪ್ರತಿಪಕ್ಷ ಸಚೇತನ ರವಿಕುಮಾರ್ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ''ದೇಶವನ್ನು ರಾಜ್ಯವನ್ನು ರಕ್ಷಿಸಬೇಕಾದ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ವಿಧಾನಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಲು ಅವಕಾಶ ಕೊಡುತ್ತದೆ. ಕೂಗಿದವರನ್ನು ಕೂಡಲೇ ಬಂಧಿಸುವ ಬದಲು ಕೂಡಲೇ ಸುರಕ್ಷಿತವಾಗಿ ಹೊರಹೋಗಲು ಅವಕಾಶಕೊಡುತ್ತದೆ. ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಪ್ರಶ್ನೆ ಮಾಡಿದ ಪತ್ರಕರ್ತರ ಮೇಲೆ ಏಕವಚನದಿಂದ ದರ್ಪ ತೋರಿಸಿ ಗೂಂಡಾ ರೀತಿ ವರ್ತಿಸುತ್ತಾರೆ. ಪ್ರತಿಪಕ್ಷಗಳು ವಿರೋಧಿಸಿದರೆ, ಸರ್ಕಾರದ ಸಚಿವರಾದ ಪ್ರಿಯಾಂಕ ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದವರನ್ನು ರಕ್ಷಿಸುತ್ತಾರೆ, ಬೆಂಬಲಿಸುತ್ತಾರೆ, ಕೂಗೇ ಇಲ್ಲ ಎಂದು ವಾದಿಸುತ್ತಾರೆ ಇದೂ ಕೂಡಾ ದೇಶದ್ರೋಹವೇ ಆಗಿದೆ'' ಎಂದು ಆರೋಪಿಸಿದರು.
ಇದನ್ನೂ ಓದಿ:ಲೋಕಸಭೆ: ಸಂಭವನೀಯ ಅಭ್ಯರ್ಥಿಗಳ ಕುರಿತು ಸುರ್ಜೇವಾಲ ಜೊತೆ ಸಿಎಂ, ಡಿಸಿಎಂ ಸಭೆ