ಬೆಂಗಳೂರು:ದ್ವಿತೀಯ ಪಿಯುಸಿ ಪರೀಕ್ಷೆ-3 ರ ಫಲಿತಾಂಶ ಪ್ರಕಟಗೊಂಡಿದ್ದು, ಶೇ.23.73 ರಷ್ಟು ಫಲಿತಾಂಶ ಬಂದಿದೆ. ಜೂನ್ 24 ರಿಂದ ಜುಲೈ 5 ರವರೆಗೂ ರಾಜ್ಯದಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ-3 ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಪ್ರಕಟಿಸಿದ್ದು, NIC ವೆಬ್‌ಸೈಟ್ https://karresults.nic.in ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ ಎಂದು ತಿಳಿಸಿದೆ.
ಪರೀಕ್ಷೆಗೆ ಹಾಜರಾದ 75,466 ವಿದ್ಯಾರ್ಥಿಗಳ ಪೈಕಿ 17,911 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.23.73 ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ 44,027 ವಿದ್ಯಾರ್ಥಿಗಳ ಪೈಕಿ 9,531 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.21.65 ರಷ್ಟು ಫಲಿತಾಂಶ ಪಡೆದರೆ. 31,439 ವಿದ್ಯಾರ್ಥಿನಿಯರ ಪೈಕಿ 8,380 ಉತ್ತೀರ್ಣರಾಗಿದ್ದು, ಶೇ.26.65 ರಷ್ಟು ಫಲಿತಾಂಶ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಶೇ.21.71, ವಾಣಿಜ್ಯ ವಿಭಾಗದಲ್ಲಿ ಶೇ.23.58, ವಿಜ್ಞಾನ ವಿಭಾಗದಲ್ಲಿ ಶೇ. 27.06 ರಷ್ಟು ಫಲಿತಾಂಶ ಬಂದಿದೆ.
ದ್ವಿತೀಯ ಪಿಯುಸಿ ಮೂರನೇ ಪರೀಕ್ಷೆ ಜೂನ್ 24 ರಿಂದ ಜುಲೈ 5 ರವರೆಗೆ ನಡೆದಿದ್ದು, ಜುಲೈ 9 ರಿಂದ 14 ರವರೆಗೆ 2,293 ಮೌಲ್ಯಮಾಪಕರು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿದ್ದಾರೆ. ಫಲಿತಾಂಶ ಉತ್ತಮಪಡಿಸಿಕೊಳ್ಳಲು ಪರೀಕ್ಷೆ ಬರೆದ ವಿದ್ಯಾರ್ಥಿಗಳ ಮೊದಲ, ಎರಡನೇ ಮತ್ತು ಮೂರನೇ ಪರೀಕ್ಷೆಯ ವಿಷಯವಾರು ಗರಿಷ್ಠ ಅಂಕ ಪರಿಗಣಿಸಿ ಅಂತಿಮ ಫಲಿತಾಂಶವನ್ನು ಪ್ರಕಟಿಸುವುದಾಗಿ ಮಂಡಲಿ ತಿಳಿಸಿದೆ.