ಕರ್ನಾಟಕ

karnataka

ETV Bharat / state

2ನೇ ಹಂತದ ಲೋಕ ಸಮರ: 14 ಕ್ಷೇತ್ರಗಳ ಪ್ರಮುಖ ಅಭ್ಯರ್ಥಿಗಳ ಮೇಲಿನ ಕ್ರಿಮಿನಲ್ ಮೊಕದ್ದಮೆಗಳ ವಿವರ - lok sabha candidates - LOK SABHA CANDIDATES

ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ನಡೆಯುವ 2ನೇ ಹಂತದ 14 ಕ್ಷೇತ್ರಗಳಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಅಖಾಡದಲ್ಲಿರುವ ಪ್ರಮುಖ ಅಭ್ಯರ್ಥಿಗಳ ಮೇಲಿರುವ ಪ್ರಕರಣಗಳೆಷ್ಟು ಎಂಬ ವರದಿ ಇಲ್ಲಿದೆ.‌

second phase lok sabha election in Karnataka
ರಾಜ್ಯದಲ್ಲಿ 2ನೇ ಹಂತದ ಲೋಕಸಭೆ ಚುನಾವಣೆ (Election Commission)

By ETV Bharat Karnataka Team

Published : May 4, 2024, 8:54 PM IST

ಬೆಂಗಳೂರು:ರಾಜ್ಯದಲ್ಲಿ ಎರಡನೇ ಹಂತದ ಲೋಕ ಸಮರ ಅಖಾಡ ರಂಗೇರಿದೆ. 14 ಲೋಕಸಭೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಮತದಾರರ ಮನವೊಲಿಕೆ ಕಸರತ್ತು ನಡೆಸುತ್ತಿದ್ದಾರೆ. ಪ್ರಮುಖ ಅಭ್ಯರ್ಥಿಗಳು ಅಪರಾಧ ಪ್ರಕರಣಗಳನ್ನು ಹೊಂದಿದ್ದಾರೆ.

ರಾಜ್ಯದಲ್ಲಿ ಏಪ್ರಿಲ್ 26ರಂದು 14 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಮುಗಿದಿದೆ. ಮೇ 7ರಂದು ಉಳಿದ 14 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ (ಎಸ್‌ಸಿ), ಕಲಬುರಗಿ (ಎಸ್‌ಸಿ), ರಾಯಚೂರು (ಎಸ್‌ಟಿ), ಬೀದರ್, ಕೊಪ್ಪಳ, ಬಳ್ಳಾರಿ (ಎಸ್‌ಟಿ), ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗದಲ್ಲಿ ಒಟ್ಟು 227 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಬಾಗಲಕೋಟೆ:ಬಿಜೆಪಿ ಅಭ್ಯರ್ಥಿ ಪರ್ವತಗೌಡ ಚಂದನಗೌಡ ಗದ್ದಿಗೌಡರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಮೇಲೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಇಬ್ಬರು ತಮ್ಮ ವಿರುದ್ಧ ಯಾವುದೇ ಮೊಕದ್ದಮೆ ಹೊಂದಿಲ್ಲ.

ಬೆಳಗಾವಿ:ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಇತ್ತ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಮೇಲೂ ಯಾವುದೇ ಪ್ರಕರಣಗಳಿಲ್ಲ ಎಂದು ತಮ್ಮ ಅಫಿಡವಿಟ್​ನಲ್ಲಿ ತಿಳಿಸಿದ್ದಾರೆ.

ಬಳ್ಳಾರಿ: ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ವಿರುದ್ಧ 5 ಕ್ರಿಮಿನಲ್ ಪ್ರಕರಣಗಳಿವೆ. ತೆರಿಗೆ ವಂಚನೆ ಆರೋಪದಲ್ಲಿ ಐಟಿ ಕಾಯ್ದೆಯಡಿ ಒಂದು ಪ್ರಕರಣ, ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಲೋಕಾಯುಕ್ತ ಪ್ರಕರಣ, ಭೂ ಕಬಳಿಕೆ ಪ್ರಕರಣ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ಇದರಲ್ಲಿ ಪ್ರಮುಖವಾಗಿದೆ. ಇತ್ತ, ಕಾಂಗ್ರೆಸ್ ಅಭ್ಯರ್ಥಿ ಇ. ತುಕಾರಾಂ ಯಾವುದೇ ಪ್ರಕರಣ ಹೊಂದಿಲ್ಲ.

ಬೀದರ್:ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಹಾಗೂ ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ಭಗವಂತ ಖೂಬಾ ಮೇಲೂ ಯಾವುದೇ ಪ್ರಕರಣ ಹೊಂದಿಲ್ಲ.

ವಿಜಯಪುರ:ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಮೇಲೆ ಯಾವುದೇ ಪ್ರಕರಣಗಳು ಇಲ್ಲ. ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ್ ವಿರುದ್ಧ ಮಗಳ ಗಂಡನ ಮನೆಯ ಕುಟುಂಬ ಕಲಹ ಸಂಬಂಧ ಒಂದು ಮೊಕದ್ದಮೆ ದಾಖಲಾಗಿದೆ ಎಂದು ಅಫಿಡವಿಟ್​ನಲ್ಲಿ ಉಲ್ಲೇಖಿಸಿದ್ಧಾರೆ.

ಚಿಕ್ಕೋಡಿ:ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಅಣ್ಣಸಾಹೆಬ್ ಜೊಲ್ಲೆ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಾಗಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿಯ ಮೇಲೂ ಯಾವುದೇ ಮೊಕದ್ದಮೆ ಇಲ್ಲ.

ದಾವಣಗೆರೆ:ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ತಮ್ಮ ಮೇಲೆ ಯಾವುದೇ ಪ್ರಕರಣ ಇಲ್ಲ ಎಂದು ಅಫಿಡವಿಟ್​ನಲ್ಲಿ ತಿಳಿಸಿದ್ದಾರೆ. ಅದೇ ರೀತಿ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ ವಿರುದ್ಧವೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್ ವಿರುದ್ಧವೂ ಯಾವುದೇ ಕ್ರಿಮಿನಲ್ ಪ್ರಕರಣ ಇಲ್ಲ.

ಧಾರವಾಡ:ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಪ್ರಲ್ಹಾದ್ ಜೋಶಿ ವಿರುದ್ಧ ಯಾವುದೇ ಮೊಕದ್ದಮೆ ಇಲ್ಲ. ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ವಿರುದ್ಧ ನಿಯಮ ಉಲ್ಲಂಘಿಸಿ ರ್‍ಯಾಲಿ ನಡೆಸಿದ ಆರೋಪದಡಿ ಪ್ರಕರಣವೊಂದನ್ನು ಹೊಂದಿದ್ದಾರೆ.

ಕಲಬುರಗಿ ಕ್ಷೇತ್ರ:ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಉಮೇಶ್ ಜಾಧವ್ ಮೇಲೆ ಯಾವುದೇ ಮೊಕದ್ದಮೆ ಇಲ್ಲ. ಮಲ್ಲಿಕಾರ್ಜುನ ಖರ್ಗೆ ಅಳಿಯ, ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ವಿರುದ್ಧ ಸಿಸಿಬಿಯಲ್ಲಿ ವಂಚನೆ, ಫೋರ್ಜರಿ ಪ್ರಕರಣದಡಿ ಒಂದು ಮೊಕದ್ದಮೆ ದಾಖಲಾಗಿದೆ. ಈ ಪ್ರಕರಣಕ್ಕೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಪಡೆಯಲಾಗಿದೆ ಎಂದು ತಮ್ಮ ಅಫಿಡವಿಟ್​ನಲ್ಲಿ ತಿಳಿಸಿದ್ದಾರೆ.

ಹಾವೇರಿ:ಬಿಜೆಪಿ ಅಭ್ಯರ್ಥಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಯಾವುದೇ ಪ್ರಕರಣ ಇಲ್ಲ. ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ತಮ್ಮ ವಿರುದ್ಧ ಒಂದು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಕೊಪ್ಪಳ: ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಬಸವರಾಜ್ ಹಿಟ್ನಾಳ್ ವಿರುದ್ಧ ನಿಯಮ ಉಲ್ಲಂಘಿಸಿ ಕಲ್ಲು ಗಣಿಗಾರಿಕೆ ನಡೆಸಿರುವ ಆರೋಪದಲ್ಲಿ 2 ಖಾಸಗಿ ದೂರು ದಾಖಲಾಗಿವೆ. ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ್ ಶರಣಪ್ಪ ತಮ್ಮ ಮೇಲೆ ಯಾವುದೇ ಪ್ರಕರಣ ಇಲ್ಲ ಎಂದು ತಿಳಿಸಿದ್ದಾರೆ.

ರಾಯಚೂರು:ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ರಾಜಾಅಮರೇಶ್ವರ್ ನಾಯಕ್ ವಿರುದ್ಧ ಯಾವುದೇ ಪ್ರಕರಣ ಇಲ್ಲ. ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ್ ನಾಯಕ್ ವಿರುದ್ಧವೂ ಯಾವುದೇ ಮೊಕದ್ದಮೆಗಳಿಲ್ಲ.

ಶಿವಮೊಗ್ಗ:ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಮೇಲೆ ಯಾವುದೇ ಪ್ರಕರಣ ಇಲ್ಲ‌. ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಬಿ.ವೈ. ರಾಘವೇಂದ್ರ 2 ಕೇಸುಗಳಿವೆ. ಇದರಲ್ಲಿ ಮನಿ ಲಾಂಡರಿಂಗ್ ಆರೋಪದಡಿ ದಾಖಲಾಗಿರುವ ಒಂದು ಇಡಿ ಪ್ರಕರಣ ಪ್ರಮುಖವಾಗಿದೆ. ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ತಾವು ಯಾವುದೇ ಮೊಕದ್ದಮೆ ಹೊಂದಿಲ್ಲ ಎಂದು ಅಫಿಡವಿಟ್​ನಲ್ಲಿ ತಿಳಿಸಿದ್ದಾರೆ.

ಉತ್ತರ ಕನ್ನಡ:ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಯಾವುದೇ ಪ್ರಕರಣಗಳನ್ನು ಹೊಂದಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ವಿರುದ್ಧ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪದಡಿ ಒಂದು ಪ್ರಕರಣವನ್ನು ಹೊಂದಿರುವುದಾಗಿ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ನೇಹಾ ಹತ್ಯೆ, ಪ್ರಜ್ವಲ್​ ಪ್ರಕರಣದ್ದೇ ಚರ್ಚೆ; ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ

ABOUT THE AUTHOR

...view details