ಚಾಮರಾಜನಗರ: ಇಂದು ವೈಕುಂಠ ಏಕಾದಶಿ. ಜಿಲ್ಲೆಯ ವಿಷ್ಣು ದೇಗುಲಗಳಲ್ಲಿ ಶುಕ್ರವಾರ ಮುಂಜಾನೆಯಿಂದಲೇ ವಿಶೇಷ ಪೂಜೆಗಳು ನೆರವೇರುತ್ತಿವೆ. ಚಳಿ ಲೆಕ್ಕಿಸದೆ ಭಕ್ತಸಾಗರವೇ ದೇಗುಲಕ್ಕೆ ಹರಿದು ಬರುತ್ತಿದೆ.
ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಮಧ್ಯರಂಗನಾಥ ಸ್ವಾಮಿ ದೇವಾಲಯದಲ್ಲಿ ರಂಗನಾಥಸ್ವಾಮಿಯನ್ನು ವಿಶೇಷ ಹೂಗಳಿಂದ ಅಲಂಕರಿಸಲಾಗಿತ್ತು.
ಶಾಸಕ ನರೇಂದ್ರ ಸ್ವಾಮಿ ಸೇರಿದಂತೆ ರಾಜಕೀಯ ಗಣ್ಯರು, ಅಧಿಕಾರಿಗಳು ಮಧ್ಯರಂಗನಾಥನಿಗೆ ಕುಟುಂಬಸಮೇತ ತೆರಳಿ ವಿಶೇಷ ಪೂಜೆ, ಅರ್ಚನೆ ಮಾಡಿಸಿ ಪ್ರಾರ್ಥನೆ ಸಲ್ಲಿಸಿದರು.
ಸಪ್ತದ್ವಾರ ನಿರ್ಮಾಣ: ಚಾಮರಾಜನಗರದ ಕೊಳದ ಬೀದಿಯಲ್ಲಿರುವ ಶ್ರೀದೇವಿ ಸಮೇತ ಕಾಡು ನಾರಾಯಣಸ್ವಾಮಿ ದೇಗುಲದಲ್ಲಿ ಸಪ್ತದ್ವಾರ ನಿರ್ಮಾಣ ಮಾಡಲಾಗಿದೆ. ಸಪ್ತದ್ವಾರದ ಮೂಲಕ ನಾರಾಯಣನ ದರ್ಶನ ಮಾಡಿದರೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಸಹಸ್ರಾರು ಮಂದಿ ಭಕ್ತರು ಸಪ್ತದ್ವಾರಗಳ ಮೂಲಕ ನಾರಾಯಣನಿಗೆ ನಮಿಸಿದರು.
ದೇಗುಲ ಅರ್ಚಕರಾದ ರಾಮಚಂದ್ರ, ವಿಪ್ರ ಮುಖಂಡರಾದ ಸತೀಶ್ ರುದ್ರಭೂಮಿ, ಶ್ರೀಧರ್ ಸೇರಿದಂತೆ ಆಗಮಿಕರು ಮುಂಜಾನೆ 2.30ರಲ್ಲಿ ವಿಶೇಷ ಪಂಚಾಮೃತ ಅಭಿಷೇಕ, ಬೆಳಗ್ಗೆ 6ಕ್ಕೆ ದೇವಸ್ಥಾನ ಸಭಾಂಗಣದಲ್ಲಿ ಉತ್ಸವ ನೆರವೇರಿಸಿದರು. ಭಕ್ತರು ವಿವಿಧ ಹೂಗಳಿಂದ ಕಂಗೊಳಿಸುತ್ತಿದ್ದ ಶ್ರೀದೇವಿ ಸಮೇತ ನಾರಾಯಣ ದೇವರ ದರ್ಶನ ಪಡೆದರು. ಅರ್ಚನೆ, ವಿಶೇಷ ಪೂಜೆಗಳನ್ನು ಮಾಡಿಸಿ ಪ್ರಾರ್ಥನೆ ಸಲ್ಲಿಸಿದರು. ಸಹಸ್ರಾರು ಭಕ್ತರಿಗೆ ಪ್ರಸಾದ ಹಾಗೂ ವಿಶೇಷ ಲಾಡುಗಳನ್ನು ವಿತರಣೆ ಮಾಡಲಾಗುತ್ತಿತ್ತು.
ಬಿಳಿಗಿರಿ-ಹಿಮಗಿರಿಯಲ್ಲೂ ಜನಸಾಗರ: ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥ ದೇಗುಲ, ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲೂ ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಜಿಲ್ಲೆ ಹಾಗೂ ಹೊರ ಜಿಲ್ಲೆ, ಹೊರ ರಾಜ್ಯದಿಂದಲೂ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಇಷ್ಟಾರ್ಥ ಪ್ರಾರ್ಥನೆ ಮಾಡಿದರು.
ಇದನ್ನೂ ಓದಿ: ಬೆಂಗಳೂರಲ್ಲಿ ವೈಕುಂಠ ಏಕಾದಶಿ ಸಂಭ್ರಮ: ದೇವಾಲಯಗಳಲ್ಲಿ ಹಬ್ಬದ ವಾತಾವರಣ - VAIKUNTHA EKADASHI