ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳು ಷರತ್ತಿನ ಪ್ರಕಾರ ಇಂದು (ಶುಕ್ರವಾರ) ಬೆಂಗಳೂರಿನ ಸಿಸಿಹೆಚ್ 57ರ ನ್ಯಾಯಾಲಯದ ಮುಂದೆ ಹಾಜರಾದರು. ದರ್ಶನ್, ಪವಿತ್ರಾ ಗೌಡ, ಪ್ರದೋಶ್, ನಾಗರಾಜ್ ಸೇರಿದಂತೆ ಎಲ್ಲ 17 ಮಂದಿ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾದರು.
ಮೈಸೂರಿಗೆ ತೆರಳಲು ದರ್ಶನ್‌ಗೆ ಅನುಮತಿ: ನಟ ದರ್ಶನ್ ಮೈಸೂರಿಗೆ ತೆರಳಲು 57ನೇ ಸಿಸಿಹೆಚ್ ನ್ಯಾಯಾಲಯ ಅನುಮತಿ ನೀಡಿದೆ. ಜನವರಿ 12ರಿಂದ 5 ದಿನಗಳ ಕಾಲ ಮೈಸೂರಿಗೆ ತೆರಳಲು ಅವಕಾಶ ನೀಡಿದೆ. ಇದೇ ವೇಳೆ, ದೇವಾಲಯಗಳಿಗೆ ತೆರಳಲು ಅನುಮತಿ ಕೋರಿ ಪವಿತ್ರಾ ಗೌಡ ಸಲ್ಲಿಸಿದ್ದ ಮನವಿಗೂ ನ್ಯಾಯಾಲಯ ಅನುಮತಿ ನೀಡಿದೆ. ಅಲ್ಲದೇ ವ್ಯವಹಾರಿಕ ಕೆಲಸಗಳ ನಿಮಿತ್ತ ದೆಹಲಿ, ಮುಂಬೈಗೆ ತೆರಳಲು ಅನುಮತಿ ನೀಡಿ ನ್ಯಾಯಾಲಯ ಆದೇಶಿಸಿದೆ.
ಆರೋಪಿಗಳಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಪ್ರತಿ ತಿಂಗಳು ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಷರತ್ತು ವಿಧಿಸಲಾಗಿತ್ತು. ಅದರಂತೆ, ಎಲ್ಲಾ ಆರೋಪಿಗಳು ನ್ಯಾಯಾಧೀಶರೆದುರು ಹಾಜರಾಗಿದ್ದಾರೆ. ಆರೋಪಿಗಳ ಹಾಜರಿ ಪಡೆದುಕೊಂಡ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 25ಕ್ಕೆ ಮುಂದೂಡಿಕೆ ಮಾಡಿ ಆದೇಶಿಸಿದರು.
ಧನ್ವೀರ್ ಜೊತೆ ಬಂದ ದರ್ಶನ್: ದರ್ಶನ್ ತಮ್ಮ ಆಪ್ತ, ನಟ ಧನ್ವೀರ್ ಜೊತೆ ಕಾರಿನಲ್ಲಿ ನ್ಯಾಯಾಲಯಕ್ಕೆ ಆಗಮಿಸಿದರು. ಅವರೊಟ್ಟಿಗೆ ವಕೀಲರು ಇದ್ದರು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾದ ಬಳಿಕ ಇದೇ ಮೊದಲ ಬಾರಿಗೆ ದರ್ಶನ್ ಹಾಗೂ ಪವಿತ್ರಾ ಗೌಡ ನ್ಯಾಯಾಲಯದಲ್ಲಿ ಮುಖಾಮುಖಿಯಾದರು.
ಇದನ್ನೂ ಓದಿ: ದರ್ಶನ್ ಸೇರಿ ಎಲ್ಲ ಆರೋಪಿಗಳ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ
ಇದೇ ವೇಳೆ, ನ್ಯಾಯಾಲಯದ ವ್ಯಾಪ್ತಿ ಮೀರಿದ (ಹೊರರಾಜ್ಯದ) ಸ್ಥಳದಲ್ಲಿರುವ ದೇವಸ್ಥಾನಕ್ಕೆ ಹೋಗಲು ಅನುಮತಿ ಕೋರಿ ಪವಿತ್ರಾ ಗೌಡ ಅರ್ಜಿ ಸಲ್ಲಿಸಿದರು. ಅರ್ಜಿ ವಿಚಾರಣೆ ಮುಂದೂಡಿದ ಬಳಿಕ ಅವರವರ ವಕೀಲರೊಂದಿಗೆ ಚರ್ಚಿಸಿ ಆರೋಪಿಗಳು ವಾಪಸ್ ಆದರು.
ಇದನ್ನೂ ಓದಿ: ಮೈಸೂರು: ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡ ದರ್ಶನ್