ಹುಬ್ಬಳ್ಳಿ: ಆಸ್ತಿ ವಿಚಾರವಾಗಿ ತಂದೆ ಹಾಗೂ ಮಲತಾಯಿಯನ್ನು ಮಗನೇ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದೆ.
ಅಶೋಕ ಕೊಬ್ಬನ್ನವರ, ಶಾರವ್ವ ಕೊಬನ್ನವರ ಮೃತರು. ಗಂಗಾಧರ ಕೊಬ್ಬನ್ನವರ ಕೊಲೆ ಆರೋಪಿ. ಘಟನಾ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಹತ್ಯೆಯದವರ ಮೃತದೇಹಗಳನ್ನು ಕಿಮ್ಸ್ನ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಕೊಲೆ ಮಾಡಿ ಪರಾರಿ ಆಗಿರುವ ಆರೋಪಿ ಗಂಗಾಧರನ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ ಪ್ರತಿಕ್ರಿಯಿಸಿ, "ಆಸ್ತಿ ವಿಚಾರವಾಗಿ ತಂದೆ ಮತ್ತು ಮಗ ಕಳೆದ 15 ರಿಂದ 20 ದಿನಗಳಿಂದ ಜಗಳವಾಡುತ್ತಿದ್ದರು. ನಿನ್ನೆ ರಾತ್ರಿ ಜಗಳ ವಿಕೋಪಕ್ಕೆ ತಿರುಗಿ ಮಗ ಮಾರಕಾಸ್ತ್ರದಿಂದ ಇಬ್ಬರ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಮೃತ ಅಶೋಕ ಅವರ ಮೊದಲ ಹೆಂಡತಿ ಪುತ್ರ ಗಂಗಾಧರ. ಮೊದಲ ಪತ್ನಿ ತೀರಿಕೊಂಡ ಮೇಲೆ ಅಶೋಕ ಅವರು ಎರಡನೇ ಮದುವೆಯಾಗಿದ್ದರು. ಆರೋಪಿ ಗಂಗಾಧರ ಬಾಗಲಕೋಟಿಯಲ್ಲಿ ವಾಸವಾಗಿದ್ದ. ಘಟನೆ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗುವುದು" ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬಿಯರ್ ಬಾಟಲ್ ಕಿತ್ತುಕೊಂಡ ಸ್ನೇಹಿತನ ಹತ್ಯೆ ಮಾಡಿದ್ದ 7 ಜನರ ಬಂಧನ
ಇದನ್ನೂ ಓದಿ: ಬೆಳಗಾವಿ: ಕಾರಿನಲ್ಲಿ ಹೋಗುತ್ತಿದ್ದ ಉದ್ಯಮಿ ಮೇಲೆ ಗುಂಡಿನ ದಾಳಿ