ಕರ್ನಾಟಕ

karnataka

ETV Bharat / state

ಶಿರೂರು ಬಳಿ ಮತ್ತೆ ಕಾರ್ಯಾಚರಣೆ ಆರಂಭ: ಬೃಹತ್ ಬಾರ್ಜ್ ಸಹಿತ ಡ್ರಜ್ಜಿಂಗ್ ಮಶಿನ್ ಮೂಲಕ ಶೋಧ - Shiruru Landslide Search Operation

ಗುಡ್ಡ ಕುಸಿತ ದುರಂತ ಸಂಭವಿಸಿದ ಅಂಕೋಲಾದ ಶಿರೂರು ಬಳಿ ಗಂಗಾವಳಿ ನದಿಯಲ್ಲಿ ಮತ್ತೆ ಶೋಧ ಕಾರ್ಯಾಚರಣೆ ಆರಂಭಗೊಂಡಿದೆ. ಬೃಹತ್ ಬಾರ್ಜ್ ಸಹಿತ ಡ್ರಜ್ಜಿಂಗ್ ಮಷಿನ್ ಮೂಲಕ ಮಣ್ಣಿನ ತೆರವು ಕಾರ್ಯ ನಡೆಯುತ್ತಿದೆ.

search operation
ಗಂಗಾವಳಿ ನದಿಯಲ್ಲಿ ಮತ್ತೆ ಶೋಧ ಕಾರ್ಯಾಚರಣೆ (ETV Bharat)

By ETV Bharat Karnataka Team

Published : Sep 20, 2024, 10:18 PM IST

ಕಾರವಾರ (ಉತ್ತರ ಕನ್ನಡ):ಮಳೆ ಕಡಿಮೆಯಾದ ಬೆನ್ನಲ್ಲೇ ಶಿರೂರು ಗುಡ್ಡ ಕುಸಿತದ ಬಳಿಯ ಗಂಗಾವಳಿ ನದಿಯಲ್ಲಿ ನಾಪತ್ತೆಯಾದವರಿಗೆ ಮತ್ತೆ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಗೋವಾದಿಂದ ಆಗಮಿಸಿದ ಬಾರ್ಜ್ ಸಹಿತ ಡ್ರೆಜ್ಜಿಂಗ್ ಮಷಿನ್ ಮೂಲಕ ಶುಕ್ರವಾರ ಸಂಜೆ ವೇಳೆ ನದಿಯಲ್ಲಿ ಗುರುತು ಮಾಡಲಾಗಿರುವ ಪ್ರದೇಶದಲ್ಲಿ ಮಣ್ಣು ತೆರವು ಮಾಡಿ, ನಾಪತ್ತೆಯಾದ ಮೂವರು ಹಾಗೂ ಲಾರಿಗಾಗಿ ಹುಡುಕಾಟ ಮುಂದುವರೆಸಲಾಗಿದೆ.

ಜುಲೈ 16ರಂದು ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದ ಗುಡ್ಡ ಕುಸಿತದ ದುರಂತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಪೈಕಿ 8 ಮಂದಿಯ ಮೃತದೇಹಗಳು ಮಾತ್ರ ಪತ್ತೆಯಾಗಿವೆ. ಸ್ಥಳೀಯರಾದ ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ ಹಾಗೂ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಮೃತದೇಹ ಈವರೆಗೂ ಪತ್ತೆಯಾಗಿಲ್ಲ.

ಶಿರೂರು ಬಳಿ ಮತ್ತೆ ಕಾರ್ಯಾಚರಣೆ ಆರಂಭ: ಬೃಹತ್ ಬಾರ್ಜ್ ಸಹಿತ ಡ್ರಜ್ಜಿಂಗ್ ಮಶಿನ್ ಮೂಲಕ ಶೋಧ (ETV Bharat)

ಜುಲೈ 28ರಂದು ಸ್ಥಗಿತಗೊಂಡಿದ ಕಾರ್ಯಾಚರಣೆ:ಮೃತದೇಹಗಳ ಪತ್ತೆಗೆ ಜಿಲ್ಲಾಡಳಿತದಿಂದ ಸತತ ಕಾರ್ಯಾಚರಣೆ ನಡೆಸಲಾಗಿತ್ತು. ಭಾರತೀಯ ಸೇನೆ, ಎನ್​ಡಿಆರ್​​ಎಫ್ ಹಾಗೂ ಎಸ್​ಡಿಆರ್​​ಎಫ್ ಪಡೆಗಳು, ಡ್ರೋನ್, ಕ್ರಾಲಿಂಗ್ ಎಕ್ಸ್ಕಾವೇಟರ್ ಮೂಲಕ ನಿರಂತರ ಶೋಧ ಕಾರ್ಯ ಕೈಗೊಂಡರೂ ಯಾವುದೇ ಪ್ರತಿಫಲ ದೊರಕಿರಲಿಲ್ಲ. ಉಡುಪಿಯ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ ಸತತ ಎರಡು ದಿನಗಳ ಕಾಲ ಕಾರ್ಯಾಚರಣೆ ಕೈಗೊಂಡರೂ ಮೃತದೇಹ ಪತ್ತೆಯಾಗಿರಲಿಲ್ಲ. ಅಲ್ಲದೇ, ಮಳೆ ಜೋರಾಗಿ ಗಂಗಾವಳಿ ನದಿಯ ನೀರಿನ ಹರಿವು ಹೆಚ್ಚಿದ್ದರಿಂದ ಜುಲೈ 28ರಂದು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಪೂಜೆ ಸಲ್ಲಿಸಿ ಶೋಧ ಕಾರ್ಯ: ಆದರೆ, ಇದೀಗ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಶಾಸಕ ಸತೀಶ್ ಸೈಲ್, ಹಾಗೂ ಸರ್ಕಾರದೊಂದಿಗೆ ಚರ್ಚೆ ನಡೆಸಿ ಗೋವಾದಿಂದ ಕಾರ್ಯಾಚರಣೆಗೆ ಡ್ರೆಜ್ಜಿಂಗ್ ಮಷಿನ್ ತರಿಸಿದೆ. ಶುಕ್ರವಾರ ಮುಂಜಾನೆ ವೇಳೆಗೆ ಡ್ರೆಜ್ಜಿಂಗ್ ಮಶಿನ್ ಶಿರೂರು ತಲುಪಿತ್ತಾದರೂ ಸಂಜೆ ವೇಳೆಗೆ ಆಗಮಿಸಿದ ಶಾಸಕ ಸತೀಶ್ ಸೈಲ್, ಭಾರಿ ಯಂತ್ರಕ್ಕೆ ಪೂಜೆ ಸಲ್ಲಿಸಿ ನಾಪತ್ತೆಯಾದವರ ಶೋಧ ಕಾರ್ಯ ಯಶಸ್ವಿಯಾಗಲಿ. ಮೃತದೇಹ ದೊರೆಯಲಿ ಎಂದು ಸ್ಥಳೀಯ ದೇವರಲ್ಲಿ ಪ್ರಾರ್ಥಿಸಿ ಪೂಜೆ ಸಲ್ಲಿಸಿದರು. ಆ ಬಳಿಕ ಗಂಗಾವಳಿ ನದಿಯಲ್ಲಿನ ಮಣ್ಣನ್ನು ತೆರವುಗೊಳಿಸುವ ಕಾರ್ಯ ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಕೇರಳ ಶಾಸಕ ಅಶ್ರಫ್, ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಉಪಸ್ಥಿತರಿದ್ದರು.

ಗಂಗಾವಳಿ ನದಿಯಲ್ಲಿ ಮತ್ತೆ ಶೋಧ ಕಾರ್ಯಾಚರಣೆ (ETV Bharat)

ಶಾಸಕ ಸತೀಶ್ ಸೈಲ್ ಹೇಳಿದ್ದೇನು?: ಈ ಬಗ್ಗೆ ಮಾಹಿತಿ ನೀಡಿದ ಶಾಸಕ ಸತೀಶ್ ಸೈಲ್, ಘಟನೆ ನಡೆದು ಸುಮಾರು 2 ತಿಂಗಳು ಕಳೆದಿದೆ. ಒಂದು ತಿಂಗಳು ಎಲ್ಲ ರೀತಿಯ ಕಾರ್ಯಾಚರಣೆ ನಡೆಸಿದರೂ ಕೇವಲ 8 ಮಂದಿಯ ಮೃತದೇಹಗಳು ಮಾತ್ರ ಸಿಕ್ಕಿವೆ. ಇನ್ನೂ ಮೂವರು ಸಿಕ್ಕಿಲ್ಲ. ಇದೀಗ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿದೆ. 10 ದಿನಗಳವರೆಗೆ ಕಾರ್ಯಾಚರಣೆ ನಡೆಸುವುದು ಎಂದು ನಿಗದಿ ಮಾಡಲಾಗಿದೆ. ಈಗಾಗಲೇ ಗುರುತು ಮಾಡಿದ ಪಾಯಿಂಟ್‌ನಲ್ಲಿ ಮೊದಲು ಹುಡುಕಾಟ ನಡೆಸುತ್ತೇವೆ. ನಂತರ ನದಿಯ ಮಧ್ಯದಲ್ಲಿ ನಿರ್ಮಾಣವಾಗಿರುವ ದಿಬ್ಬಗಳನ್ನು ಒಡೆದು, ನೀರು ಸರಾಗವಾಗಿ ಹರಿಯುವಂತೆ ಮಾಡುವ ಯೋಜನೆ ಇದೆ'' ಎಂದು ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಸ್ಥಳೀಯರು ಮಾತ್ರವಲ್ಲದೆ, ನಾಪತ್ತೆಯಾದ ಕುಟುಂಬದವರು ಆಗಮಿಸಿ ತಮ್ಮವರ ಮೃತದೇಹಗಳಿಗೆ ಎದುರು ನೋಡುತ್ತಿದ್ದರು. ಎರಡು ತಿಂಗಳ ಬಳಿಕ ಮತ್ತೆ ಕಾರ್ಯಾಚರಣೆ ಆರಂಭಿಸಿದ್ದರಿಂದ ಈಗಲಾದರೂ ದೇಹಗಳು ಸಿಗಬಹುದು ಎಂಬ ಆಶಯ ಕುಟುಂಬಸ್ಥರಲ್ಲಿ ಮೂಡಿದೆ.

''ಕಾರ್ಯಾಚರಣೆ ಮೂಲಕ ಮೃತದೇಹಗಳನ್ನು ತೆಗೆಯುವುದರ ಜೊತೆಗೆ, ನದಿಯಲ್ಲಿ ಸಂಗ್ರಹವಾಗಿರುವ ಮಣ್ಣನ್ನು ತೆರವು ಮಾಡಿ, ಮುಂದೆ ಮತ್ತೆ ಈ ಪ್ರದೇಶದಲ್ಲಿ ನೀರು ನಿಲ್ಲದಂತೆ ಕ್ರಮ‌ ಕೈಗೊಳ್ಳುವಂತೆ'' ಸ್ಥಳೀಯರಾದ ಮಂಜುನಾಥ ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಪ್ರಯಾಣಿಕರ ಗಮನಕ್ಕೆ; ದಸರಾ ಹಬ್ಬಕ್ಕೆ 34 ರೈಲುಗಳಿಗೆ ತಾತ್ಕಾಲಿಕ ಹೆಚ್ಚುವರಿ ಬೋಗಿಗಳ ಜೋಡಣೆ - Dasara Trains

ABOUT THE AUTHOR

...view details