ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಮಾಜಿ ಸಚಿವ ಬಿ.ನಾಗೇಂದ್ರನನ್ನ ಬಂಧಿಸಿ ಜಾರಿ ನಿರ್ದೇನಾಲಯ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಮತ್ತೊಂದೆಡೆ 94 ಕೋಟಿಯಿಂದ ವರ್ಗಾವಣೆ ಮಾಡಿದ ಆರೋಪ ಎದುರಿಸುತ್ತಿರುವ ಯೂನಿಯನ್ ಬ್ಯಾಂಕ್ನ ಆರು ಮಂದಿ ಅಧಿಕಾರಿಗಳು ನಾಪತ್ತೆಯಾಗಿದ್ದು, ಶೋಧ ಕಾರ್ಯಕ್ಕೆ ಎಸ್ಐಟಿ ತಲಾಶ್ ನಡೆಸುತ್ತಿದೆ.
ವಾಲ್ಮೀಕಿ ಅಭಿವೃದ್ಧಿ ಅವ್ಯವಹಾರ ಪ್ರಕರಣದ ತನಿಖೆಯನ್ನ ಮೂರು ತನಿಖಾ ಸಂಸ್ಥೆಗಳು ಪರ್ಯಾಯವಾಗಿ ತನಿಖೆ ನಡೆಸುತ್ತಿವೆ. ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆಯಡಿ ನಾಗೇಂದ್ರನನ್ನ ಬಂಧಿಸಿ ತನಿಖೆ ನಡೆಸುತ್ತಿದೆ. ಎಸ್ಐಟಿ ಸಹ ವಾಲ್ಮೀಕಿ ನಿಗಮದ ಜನರಲ್ ಮ್ಯಾನೇಜರ್ ರಾಜಶೇಖರ್ ಮೇ.12ರಂದು ನೀಡಿದ ದೂರಿನಡಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ವರ್ಗಾಯಿಸಿಕೊಂಡು ಎಸ್ಐಟಿ ತನಿಖೆ ನಡೆಸುತ್ತಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಂಡಿ ಮತ್ತು ಸಿಇಒ ಮನಮೇಕಲೈ, ನಿರ್ದೇಶಕರಾದ ನಿತೇಶ್ ರಂಜನ್, ರಾಮಸುಬ್ರಮಣ್ಯಂ, ಸಂಜಯ್ ರುದ್ರ, ಪಂಕಜ್ ದ್ವಿವೇದಿ, ಎಂ.ಜಿ.ರೋಡ್ನ ಬ್ಯಾಂಕ್ ಚೀಫ್ ಮ್ಯಾನೇಜರ್ ಸುಚಿಸ್ಮಿತಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಇವರ ಬಂಧನಕ್ಕಾಗಿ ಎಸ್ಐಟಿ ಶೋಧ ನಡೆಸುತ್ತಿದೆ. ಮತ್ತೊಂದೆಡೆ ಕೋಟ್ಯಂತರ ಹಣ ವಂಚನೆ ಸಂಬಂಧ ಯೂನಿಯನ್ ಬ್ಯಾಂಕ್ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಸಿಬಿಐ, ಜನರಲ್ ಮ್ಯಾನೇಜರ್ ಸುಚಿಸ್ಮಿತಾ, ಡೆಪ್ಯೂಟಿ ಮ್ಯಾನೇಜರ್ ಡಿ.ದೀಪಾ ಹಾಗೂ ಕೇಶವಮೂರ್ತಿ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಕೇಂದ್ರ ಹಾಗೂ ರಾಜ್ಯ ತನಿಖಾ ಸಂಸ್ಥೆಗಳು ಶೋಧ ಕಾರ್ಯ ತೀವ್ರಗೊಳಿಸಿವೆ.