ಕರ್ನಾಟಕ

karnataka

ETV Bharat / state

2024-25ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ಮೇ 29ರಿಂದ ಶಾಲೆಗಳು ಆರಂಭ - Academic Schedule

2024-25ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟವಾಗಿದೆ. ರಾಜ್ಯಾದ್ಯಂತ ಮೇ 29ರಿಂದ ಶಾಲೆಗಳು ಆರಂಭವಾಗಲಿವೆ.

ರಾಜ್ಯ ಸರ್ಕಾರ
ರಾಜ್ಯ ಸರ್ಕಾರ

By ETV Bharat Karnataka Team

Published : Apr 8, 2024, 10:43 PM IST

ಬೆಂಗಳೂರು:ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ 2024-25ನೇ ಸಾಲಿನ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ಕ್ರಿಯಾಯೋಜನೆ/ಮಾರ್ಗಸೂಚಿಯನ್ನು ಇಂದು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.

ಶೈಕ್ಷಣಿಕ ವರ್ಷದ ಮೊದಲನೇ ಅವಧಿ 2024ರ ಮೇ 29ರಿಂದ ಅಕ್ಟೋಬರ್ 2 ರವರೆಗೆ, ಎರಡನೇ ಅವಧಿಯು ಅಕ್ಟೋಬರ್‌ 21ರಿಂದ 2025ರ ಏಪ್ರಿಲ್‌ 10 ರವರೆಗೆ ಇರಲಿದೆ. ಅಕ್ಟೋಬರ್ 3 ರಿಂದ 20 ರವರೆಗೆ ದಸರಾ ರಜೆ ಇರಲಿದ್ದು, 2025ರ ಏಪ್ರಿಲ್ 11 ರಿಂದ ಮೇ 28ರವರೆಗೆ ಬೇಸಿಗೆ ರಜೆ ನಿಗದಿ ಮಾಡಿ ಸುತ್ತೋಲೆ ಹೊರಡಿಸಿದೆ.

ಈ ಬಾರಿಯ ಶೈಕ್ಷಣಿಕ ವರ್ಷದಲ್ಲಿ 224 ಶಾಲಾ ಕರ್ತವ್ಯದ ದಿನಗಳು ಇರಲಿದ್ದು, ಪರೀಕ್ಷೆ ಮೌಲ್ಯಾಂಕನ ಕಾರ್ಯಕ್ಕೆ 26 ದಿನಗಳು, ಪಠ್ಯೇತರ ಚಟುವಟಿಕೆಗೆ 24 ದಿನಗಳು, ಮೌಲ್ಯಮಾಪನ, ಫಲಿತಾಂಶ ವಿಶ್ಲೇಷಣೆಗೆ 10 ದಿನ, ಶಾಲಾ ಸ್ಥಳೀಯ ರಜೆ 4 ದಿನ, ಬೋಧನಾ ಕಲಿಕೆಗೆ 180 ದಿನಗಳು ಎಂದು ವಿಂಗಡಿಸಲಾಗಿದೆ.

ಏಪ್ರಿಲ್ 14ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಆಚರಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಪ್ರಸ್ತುತ ಚಾಲ್ತಿ ಇರುವ ಲೋಕಸಭಾ ಚುನಾವಣಾ ಮಾರ್ಗಸೂಚಿ ಪ್ರಕಾರ ಇದನ್ನು ಆಚರಿಸಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.

ಕ್ರಿಸ್ ಮಸ್ ರಜೆ ನೀಡಲು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳು ಆಯಾ ಜಿಲ್ಲೆಯ ಉಪ ನಿರ್ದೇಶಕರಿಗೆ ಕೋರಿಕೆ ಸಲ್ಲಿಸಿ ಅನುಮತಿ ಪಡೆಯಬೇಕು ಆ ರಜಾ ದಿನಗಳನ್ನು ಅಕ್ಟೋಬರ್​ನಲ್ಲಿ ನೀಡುವ ರಜೆಯಲ್ಲಿ ಕಡಿತಗೊಳಿಸಿ ಸರಿದೂಗಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

2024-25 ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗುವುದರಿಂದ ರಾಜ್ಯಾದ್ಯಂತ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳ ಏಕರೂಪದ ಅನುಷ್ಠಾನಕ್ಕಾಗಿ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ಕ್ರಿಯಾಯೋಜನೆ/ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ. ಮಾರ್ಗಸೂಚಿಯಲ್ಲಿ ವಾರ್ಷಿಕ/ಮಾಹೆವಾರು ಪಾಠ ಹಂಚಿಕೆ, ಪಠ್ಯತರ ಚಟುವಟಿಕೆಗಳು, ಗುಣಮಟ್ಟದ ಶಿಕ್ಷಣಕ್ಕಾಗಿ ಫಲಿತಾಂಶಮುಖಿ ಚಟುವಟಿಕೆಗಳು, ಸಂಭ್ರಮ ಶನಿವಾರ (ನೋ ಬ್ಯಾಗ್ ಡೇ) ಆಯೋಜನೆಗೆ ಪೂರಕವಾದ ಪಠ್ಯಾಧಾರಿತ ಚಟುವಟಿಕೆ ಬ್ಯಾಂಕ್ ನಿರ್ವಹಣೆ ಹಾಗೂ ವಿವಿಧ ಶಾಲಾ ಹಂತದ CCE (ಪರೀಕ್ಷೆಗಳು/ ಮೌಲ್ಯಾಂಕನ, ವಿಶ್ಲೇಷಣೆ) ಚಟುವಟಿಕೆಗಳನ್ನು ನಿರ್ವಹಿಸಲು ಸಹಾಯವಾಗುವಂತೆ ಯೋಜಿಸಿ, ಸಿದ್ಧಪಡಿಸಲಾಗಿದೆ.

ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಸಹಾಯವಾಗುವಂತೆ ಒಟ್ಟು ವಾರ್ಷಿಕ ದಿನಗಳಲ್ಲಿ ಲಭ್ಯವಾಗುವ ಶೈಕ್ಷಣಿಕ ಚಟುವಟಿಕೆ ಅವಧಿಗಳು, ರಜಾ ದಿನಗಳನ್ನಾಧರಿಸಿ ಅದಕ್ಕನುಗುಣವಾಗಿ ವಾರ್ಷಿಕ ಕಾರ್ಯಸೂಚಿಯನ್ನು ನಿಗದಿಪಡಿಸಲಾಗಿದೆ. ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ ಅನುಷ್ಠಾನಗೊಳಿಸಿ ಮತ್ತು ಅನುಪಾಲನೆ ಮಾಡಲು ಸೂಚಿಸಿದೆ.

ಇದನ್ನೂ ಓದಿ:ಸಿಇಟಿ ಪರೀಕ್ಷೆಗೆ ತಪ್ಪಾದ ಕೇಂದ್ರ ಆಯ್ಕೆ: ಏ.12ರೊಳಗೆ ಮನವಿ ಸಲ್ಲಿಸಲು ಅವಕಾಶ - CET

ABOUT THE AUTHOR

...view details