ಬೆಂಗಳೂರು:"ನನಗೆ ಕಾವಲು ಹಾಕಿದ್ದಾರೆ. ನನ್ನ ಜೊತೆ ಇಬ್ಬರನ್ನು ಬಿಟ್ಟಿದ್ದಾರೆ, ನಾನು ಜಮೀರ್ ನಿವಾಸದಲ್ಲಿದ್ದೇನೆ" ಎಂದು ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, "ನಾನು ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇನೆ. ಕಾಂಗ್ರೆಸ್ ಗೆಲ್ಲಬೇಕು, ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ನಾಮಪತ್ರ ವಾಪಸ್ ತೆಗೆಯಿಸಿ ಅಂತಾ ಹೇಳಿದ್ದೇನೆ. ಮುಂದಿನದ್ದು ಅಲ್ಲಾನಿಗೆ ಬಿಟ್ಟಿದ್ದೇನೆ. ಸಿಎಂ, ಡಿಸಿಎಂ, ಜಮೀರ್ ಅಹ್ಮದ್ ಮಾತಾಡಿದ್ದಾರೆ. ನಾನು ಈಗ ಜಮೀರ್ ಅಹ್ಮದ್ ಸಾಹೇಬರ ಮನೆಯಲ್ಲಿದ್ದೇನೆ. ನನ್ನನ್ನು ಹೈಜಾಕ್ ಮಾಡಿದ್ದಾರೆ ಅಂತಾ ನಾನು ಹೇಳಲ್ಲ. ಈಗಲೇ ನನ್ನ ನಿರ್ಧಾರ ಹೇಳಲು ಆಗಲ್ಲ. ಅ.30ರಂದು ನನ್ನ ನಿರ್ಧಾರ ಗೊತ್ತಾಗುತ್ತದೆ. ನಮ್ಮ ಕಾರ್ಯಕರ್ತರು ನಾಮಪತ್ರ ವಾಪಸ್ ಪಡೆಯಬೇಡಿ ಅಂತಾ ಹೇಳ್ತಿದ್ದಾರೆ" ಎಂದು ತಿಳಿಸಿದರು.
"ಶಿಗ್ಗಾಂವಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾದ ನಾನು ಇನ್ನೂ ಗೊಂದಲದಲ್ಲಿದ್ದೇನೆ. ನನಗೆ ಪಕ್ಷ, ನಮ್ಮ ನಾಯಕರು ಮತ್ತು ಸಿಎಂ, ಡಿಸಿಎಂ, ಜಮೀರ್, ಸಂತೋಷ್ ಲಾಡ್ ಮುಖ್ಯ. ನಾಮಪತ್ರ ವಾಪಸ್ ಪಡೆಯುವಂತೆ ಅವರು ಹೇಳ್ತಿದ್ದಾರೆ. ಆದರೆ ನಾನು ಕಾರ್ಯಕರ್ತರನ್ನು ಬಿಡುವಂತಿಲ್ಲ" ಎಂದರು.