ಕರ್ನಾಟಕ

karnataka

ETV Bharat / state

ಡಿಸಿಎಂ ಹುದ್ದೆ ಅಪೇಕ್ಷೆ ಇಲ್ಲ ಎಂದ ಸತೀಶ್ ಜಾರಕಿಹೊಳಿ; ಸಿಕ್ಕ ಸ್ಥಾನಕ್ಕೆ ತೃಪ್ತಿಪಡೋಣ‌ ಅಂದ್ರು ಕೃಷ್ಣಭೈರೇಗೌಡ - DCM Post - DCM POST

ರಾಜ್ಯದಲ್ಲಿ ಮೂರು ಡಿಸಿಎಂ ಸ್ಥಾನಗಳ ಸೃಷ್ಠಿ ವಿಚಾರವಾಗಿ ಸಚಿವರಾದ ಕೃಷ್ಣಭೈರೇಗೌಡ ಮತ್ತು ಸತೀಶ್​ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.

Krishna Byre Gowda and Satish Jarkiholi
ಸಚಿವರಾದ ಕೃಷ್ಣಭೈರೇಗೌಡ ಮತ್ತು ಸತೀಶ್​ ಜಾರಕಿಹೊಳಿ (ETV Bharat)

By ETV Bharat Karnataka Team

Published : Jun 16, 2024, 9:45 AM IST

ಸಚಿವ ಸತೀಶ್​ ಜಾರಕಿಹೊಳಿ (ETV Bharat)

ಬೆಳಗಾವಿ: ''ಈ ಮೊದಲು ಮೂರು ಡಿಸಿಎಂ ಸ್ಥಾನಗಳನ್ನು ಸೃಷ್ಠಿಸುವಂತೆ ಒತ್ತಡಗಳಿದ್ದವು. ಆದ್ರೀಗ ಉಪಮುಖ್ಯಮಂತ್ರಿ ಹುದ್ದೆ ಕೊಡಿ ಎಂದು ನಾನೇನೂ ಕೇಳಲ್ಲ'' ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್​ ಜಾರಕಿಹೊಳಿ ತಿಳಿಸಿದರು.

ರಾಜ್ಯದಲ್ಲಿ ಮತ್ತೆ ಮೂರು ಉಪಮುಖ್ಯಮಂತ್ರಿ ಹುದ್ದೆಗಳ ‌ಸೃಷ್ಠಿ ಚರ್ಚೆ ಮುನ್ನೆಲೆಗೆ ಬಂದಿರುವ ಹಿನ್ನೆಲೆಯಲ್ಲಿ ಸಚಿವರು ಬೆಳಗಾವಿಯಲ್ಲಿ ಈ ರೀತಿ ಪ್ರತಿಕ್ರಿಯಿಸಿದರು.

ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವಂತೆ ಕಾಂಗ್ರೆಸ್ ಶಾಸಕರ ಆಗ್ರಹದ ಕುರಿತು ಮಾತನಾಡುತ್ತಾ, "ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಜಾರಿಗೆ ಹಣದ ಕೊರತೆಯಿಲ್ಲ. ಬಜೆಟ್​ನಲ್ಲಿ ಈಗಾಗಲೇ ಅದಕ್ಕಾಗಿ ಹಣ ಮೀಸಲಿಡಲಾಗಿದೆ" ಎಂದರು.

"ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಸೋಲು, ಚಿಕ್ಕೋಡಿ ಗೆಲುವಿನ ಬಗ್ಗೆ ವರದಿ ಕೇಳಿದ್ದಾರೆ. ಬೆಂಗಳೂರಿಗೆ ರಾಹುಲ್ ಗಾಂಧಿ ಬಂದಾಗ ವರದಿ ನೀಡುವಂತೆ ತಿಳಿಸಿದ್ದಾರೆ. 28 ಕ್ಷೇತ್ರಗಳ ಅಧ್ಯಕ್ಷರೇ ವರದಿ ಸಿದ್ಧಪಡಿಸುತ್ತಾರೆ, ವೀಕ್ಷಕರು ವರದಿ ಪಡೆಯಲಿದ್ದಾರೆ" ಎಂದು ಮಾಹಿತಿ ನೀಡಿದರು.

ಲೋಕಸಭೆ ಚುನಾವಣೆ ಬಳಿಕ ತಮ್ಮ ಹಾಗೂ ಲಕ್ಷ್ಮಣ ಸವದಿ ಮಧ್ಯೆ ಕೋಲ್ಡ್​​ ವಾರ್ ನಡೆಯುತ್ತಿದೆ ಎಂಬ ಪ್ರಶ್ನೆಗೆ, "ನಮ್ಮಿಬ್ಬರ ಮಧ್ಯೆ ಕೋಲ್ಡ್ ಅಷ್ಟೇ ಇದೆ. ನೋ ವಾರ್" ಎಂದು ಸ್ಪಷ್ಟಪಡಿಸಿದರು. ಸಂಸದ ಜಗದೀಶ್​ ಶೆಟ್ಟರ್ ಒಳ ಹೊಡೆತದ ಲಾಭ ಸಿಕ್ಕಿದೆಯೇ ಎಂದು ಹೇಳಿದ್ದಕ್ಕೆ, "ಜನರು ಅಂತಿಮವಾಗಿ ಮತ ಹಾಕುತ್ತಾರೆ. ಒಳ ಹೊಡೆತದ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ‌ಶಾಸಕರು, ನಾಯಕರು ಕಾಂಗ್ರೆಸ್ ಅಭ್ಯರ್ಥಿ ಪರ ಮತ ಹಾಕಿದ್ದಾರೆ. ಅಂತಿಮವಾಗಿ ಜನರೇ ನಿರ್ಧಾರ ಮಾಡಿದಂತೆ ಕಾಣುತ್ತಿದೆ" ಎಂದು ಸಮರ್ಥಿಸಿಕೊಂಡರು.

ಬಿಜೆಪಿ ಮಾಜಿ ಶಾಸಕ ಮಹೇಶ ಕುಮಟಳ್ಳಿ ತಮ್ಮ ಮನೆಗೆ ಬಂದು ಶುಭ ಕೋರಿರುವುದಕ್ಕೆ ಪ್ರತಿಕ್ರಿಯಿಸಿ, "ನನ್ನ ಮನೆಗೆ ಎಲ್ಲರೂ ಬರುತ್ತಾರೆ. ಹೆಬ್ಬಾರ್ ಬರುತ್ತಾರೆ, ಎಸ್.ಟಿ.ಸೋಮಶೇಖರ್ ಬರುತ್ತಾರೆ. ಹಾಗಾಗಿ, ಅಥಣಿಯವರು ದುರ್ಬಿನ್ ಉಲ್ಟಾ ಹಿಡಿದು ನೋಡುತ್ತಿದ್ದಾರೆ" ಎನ್ನುವ ಮೂಲಕ ಪರೋಕ್ಷವಾಗಿ ಲಕ್ಷ್ಮಣ ಸವದಿಗೆ ಟಾಂಗ್ ಕೊಟ್ಟರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​​ ತಂಡದ ವಿಚಾರಣೆ ನಡೆಸುತ್ತಿರುವ ಪೊಲೀಸ್ ಠಾಣೆಗೆ ಶಾಮಿಯಾನ ಕಟ್ಟಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ, "ತನಿಖೆಯ ಮಾಹಿತಿಯನ್ನು ಬೆಂಗಳೂರಿನ ನಾಯಕರನ್ನೇ ಕೇಳಬೇಕು. ನಮಗೆ ಬೆಂಗಳೂರು 500 ಕಿ.ಮೀ ದೂರದಲ್ಲಿದೆ. ಈ ವಿಷಯ ಬೆಂಗಳೂರಿನವರನ್ನೇ ಕೇಳಿ" ಎಂದರು‌.

ಇದೇ ವೇಳೆ, ದರ್ಶನ್​​ ಬಚಾವ್ ಮಾಡಲು ಪ್ರಭಾವಿ ಸಚಿವರ ಒತ್ತಡ ಇದೆಯೆಂಬ ಆರೋಪ ತಳ್ಳಿಹಾಕಿದ ಸಚಿವರು, "ನಟರ ಜತೆಗೆ ಉತ್ತರ ಕರ್ನಾಟಕದ ರಾಜಕೀಯ ನಾಯಕರಿಗೆ ಯಾವುದೇ ನಂಟಿಲ್ಲ. ಬೆಂಗಳೂರು-ಮೈಸೂರಿನ ನಾಯಕರಿಗೆ ಈ ಬಗ್ಗೆ ನೀವು ಪ್ರಶ್ನಿಸಿ" ಎಂದು ತಿಳಿಸಿದರು.

  • 'ಸಿಕ್ಕ ಸ್ಥಾನಕ್ಕೆ ತೃಪ್ತಿ ಪಡೋಣ‌':"ಡಿಸಿಎಂ ಆಗುತ್ತೇನೆ ಎನ್ನುವವರು ಪಕ್ಷದಲ್ಲಿ ಯಾರನ್ನು ಭೇಟಿ ಆಗಬೇಕೋ ಅವರನ್ನು ಭೇಟಿಯಾಗಿ, ಅಲ್ಲಿ ಕೇಳಿಕೊಳ್ಳಬೇಕು. ಇದು ಸಾರ್ವಜನಿಕವಾಗಿ ಚರ್ಚೆಯಾಗಿ ತೀರ್ಮಾನ ಆಗುವಂಥದ್ದಲ್ಲ" ಎಂದು ಡಿಸಿಎಂ ಸ್ಥಾನದ ಆಕಾಂಕ್ಷಿಗಳಿಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಪರೋಕ್ಷವಾಗಿ ತಿರುಗೇಟು ಕೊಟ್ಟರು.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಡಿಸಿಎಂ ಹುದ್ದೆ ಸೃಷ್ಠಿ ವಿಚಾರ ಪಕ್ಷದ ವೇದಿಕೆಯಲ್ಲಿ ಚರ್ಚೆ ಆಗಬೇಕು. ನಾಲ್ಕು ಜನರನ್ನು ಡಿಸಿಎಂ ಮಾಡುತ್ತಾರೋ ಅಥವಾ ಇಲ್ಲವೋ? ಎಂಬುದನ್ನು ಪಕ್ಷ ನಿರ್ಧರಿಸುತ್ತದೆ. ಇದು ಸಾರ್ವಜನಿಕರಿಗೇನೂ ಬಹಳ ಮಹತ್ವದ ವಿಷಯವಲ್ಲ" ಎಂದರು.

ಸಚಿವ ಕೃಷ್ಣಭೈರೇಗೌಡ (ETV Bharat)

ನೀವು ಡಿಸಿಎಂ ಸ್ಥಾನದ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ, "ನಾನು ಡಿಸಿಎಂ ಆಗಬೇಕು ಎಂದಿದ್ದರೆ ಯಾರ ಹತ್ತಿರ ಮಾತನಾಡಬೇಕೋ ಅವರ ಹತ್ತಿರ ಮಾತನಾಡುತ್ತೇನೆ. ನಿಮ್ಮ ಹತ್ತಿರ ಮಾತನಾಡಿದರೆ ನೀವು ನನ್ನನ್ನು ಡಿಸಿಎಂ ಮಾಡುತ್ತೀರಾ? ಎಂದು ಮಾಧ್ಯಮಗಳಿಗೆ ಮರುಪ್ರಶ್ನಿಸಿದ ಕೃಷ್ಣಭೈರೇಗೌಡ, ನಾವು ನೀವು ಮಾತನಾಡಿದರೆ ಏನು ಪ್ರಯೋಜನ?" ಎಂದು ಹಾಸ್ಯ ಚಟಾಕಿ ಹಾರಿಸಿದರು.

"ಅರ್ಹತೆಗಿಂತ ನಮಗೆ ಹೆಚ್ಚು ಅವಕಾಶ ಸಿಕ್ಕಿದೆ. ಈ ಕೆಲಸ ಮಾಡಿದರೆ, ಎಷ್ಟೋ ಜನರಿಗೆ ಸಹಾಯ ಮಾಡಿ ಪುಣ್ಯ ಕಟ್ಟಿಕೊಳ್ಳಬಹುದು. ಸಿಕ್ಕಿರುವುದಕ್ಕೆ ತೃಪ್ತಿಪಡೋಣ‌. ನಾಲ್ಕು ಜನರಿಗೆ ಅನುಕೂಲ ಆಗೋ ಕೆಲಸ ಮಾಡೋಣ. ಅದರಲ್ಲಿ ಸಾರ್ಥಕತೆ ಪಡೆಯೋಣ. ಕೊನೆಯುಸಿರು ಇರೋವರೆಗೂ ಎಲ್ಲಾ ಬೇಕು, ಬೇಕು. ಆದರೆ, ಇರೋದರಲ್ಲಿ ಖುಷಿಪಟ್ಟು, ಕೆಲಸ ಮಾಡಬೇಕು. ಉಳಿದದ್ದು ಏನಾದರು ಬೇಕಾದರೆ ಅದೇ ನಮ್ಮನ್ನು ಹುಡುಕಿಕೊಂಡು ಬರುತ್ತದೆ" ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

ಇದನ್ನೂ ಓದಿ:ಕಲಬುರಗಿ: ಕುವೈತ್​ ಅಗ್ನಿ ದುರಂತದಲ್ಲಿ ಕೊನೆಯುಸಿರೆಳೆದ ವಿಜಯಕುಮಾರ್ ಅಂತ್ಯಕ್ರಿಯೆ - Kuwait Fire Accident

"ಒಬ್ಬರ ಜಮೀನನ್ನು ಮತ್ತೊಬ್ಬರು ಲಪಟಾಯಿಸಿ ವಂಚಿಸುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಬೆಳಕಿಗೆ ಬಂದಿವೆ. ಇದನ್ನು ತಡೆಗಟ್ಟಲು ಆರ್‌ಟಿಸಿಗೆ ಆಧಾರ್ ಜೋಡಣೆ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ರಾಜ್ಯದಲ್ಲಿ 4 ಕೋಟಿ ಜಮೀನು ಮಾಲೀಕರಿದ್ದಾರೆ. ಈ ಪೈಕಿ ಈಗಾಗಲೇ 1.48 ಕೋಟಿ ಮಾಲೀಕರ ಜಮೀನುಗಳಿಗೆ ಆಧಾರ್ ಜೋಡಣೆ ಮಾಡಲಾಗಿದೆ. ಜುಲೈ 15ರೊಳಗೆ ಇನ್ನುಳಿದ ಜಮೀನುಗಳಿಗೆ ಆಧಾರ್ ಜೋಡಣೆ ಮಾಡುವುದಕ್ಕೆ ಅಧಿಕಾರಿಗಳಿಗೆ ಗಡುವು ನೀಡಲಾಗಿದೆ. ಆರ್‌ಟಿಸಿಗಳಿಗೆ ಆಧಾರ್ ಜೋಡಣೆ ಮಾಡುವುದರಿಂದ ಒಬ್ಬರ ಜಮೀನನ್ನು ಮತ್ತೊಬ್ಬರು ನಕಲಿ ದಾಖಲೆ ಸೃಷ್ಟಿಸಿ ಲಪಟಾಯಿಸಲು ಬರುವುದಿಲ್ಲ. ಜೊತೆಗೆ, ಯಾವುದೇ ವ್ಯವಹಾರ ಮಾಡುವುದು ಸರಳೀಕರಣವಾಗಲಿದೆ" ಎಂದು ಹೇಳಿದರು.

ಇದನ್ನೂ ಓದಿ:8 ವರ್ಷಗಳ ಬಳಿಕ ಆರೋಗ್ಯ ಇಲಾಖೆಯಲ್ಲಿ ಕೌನ್ಸಿಲಿಂಗ್ ಮೂಲಕ ವರ್ಗಾವಣೆ - Transfer Through Counselling

ಬರ ಪರಿಹಾರ ವಿತರಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, "ಈಗಾಗಲೇ ಸುಪ್ರೀಂ ಕೋರ್ಟ್​​ಗೆ ಹೋಗಿ ಹೋರಾಟ ಮಾಡಿದ ಬಳಿಕ ಕೇಂದ್ರ ಸರ್ಕಾರದಿಂದ 3,454 ಕೋಟಿ ರೂ. ಪಡೆದಿದ್ದು, ರಾಜ್ಯದ 35 ಲಕ್ಷ ರೈತರಿಗೆ ನೇರವಾಗಿ ಅವರ ಖಾತೆಗಳಿಗೆ ಬರ ಪರಿಹಾರ ವಿತರಿಸಿದ್ದೇವೆ. ಬರುವ ಒಂದು ವಾರದಲ್ಲಿ ಬಾಕಿ ಇರುವ 5 ಲಕ್ಷ ರೈತರಿಗೂ ವಿತರಿಸಲಿದ್ದೇವೆ" ಎಂದು ಭರವಸೆ ನೀಡಿದರು. "ಕೇಂದ್ರ ಸರ್ಕಾರ ಹೆಚ್ಚುವರಿ ಬರ ಪರಿಹಾರ ವಿತರಿಸಲು ಒಪ್ಪುತ್ತಿಲ್ಲ. ವಿಚಾರ ಸುಪ್ರೀಂ ಕೋರ್ಟ್​​ನಲ್ಲಿದೆ. ಕೋರ್ಟ್ ರಜೆ ಮುಗಿದ ಬಳಿಕ ಈ ವಿಷಯ ಮತ್ತೆ ಚರ್ಚೆಗೆ ಬರಲಿದೆ" ಎಂದು ಹೇಳಿದರು.

ABOUT THE AUTHOR

...view details