ಬೆಳಗಾವಿ: ಶಿಗ್ಗಾವಿ ಕ್ಷೇತ್ರದ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಬೆಳಗಾವಿಗೆ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ್ ಅವರು ಸಚಿವ ಸತೀಶ ಜಾರಕಿಹೊಳಿ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು.
ಶನಿವಾರ ರಾತ್ರಿ ನಗರದ ಕಾಂಗ್ರೆಸ್ ಭವನಕ್ಕೆ ಆಗಮಿಸಿದ ಪಠಾಣ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಂಡರು. ಇದೇ ವೇಳೆ ಪಠಾಣ್, ಸತೀಶ ಜಾರಕಿಹೊಳಿ ಅವರ ಕಾಲಿಗೆ ನಮಸ್ಕರಿಸಿದರು. ನಂತರ ಪಕ್ಷದ ಜಿಲ್ಲಾ ಘಟಕದಿಂದ ಅವರನ್ನು ಸತ್ಕರಿಸಲಾಯಿತು.
ನನ್ನ ಗೆಲುವಿಗೆ ಸತೀಶ ಜಾರಕಿಹೊಳಿ ಕಾರಣ: ಸನ್ಮಾನ ಸ್ವೀಕರಿಸಿ ಮಾತನಾಡಿದ ಯಾಸೀರ್ ಅಹ್ಮದ್ ಖಾನ್ ಪಠಾಣ್, "ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಓರ್ವ ಸಾಮಾನ್ಯ ಕಾರ್ಯಕರ್ತನನ್ನು ಗೆಲ್ಲಿಸುವ ಮೂಲಕ 30 ವರ್ಷಗಳ ವನವಾಸದಿಂದ ಶಿಗ್ಗಾವಿ ಕ್ಷೇತ್ರವನ್ನು ಸತೀಶ ಜಾರಕಿಹೊಳಿ ಮುಕ್ತಗೊಳಿಸಿದ್ದಾರೆ. ಅವರಿಗೆ ನಾನು ಸದಾ ಋಣಿ ಆಗಿರುತ್ತೇನೆ. ನನ್ನ ಪರವಾಗಿ ಶಿಗ್ಗಾವಿಗೆ ಬಂದು ಇಲ್ಲಿನ ಸಾವಿರಾರ ಜನರ ಜೊತೆ ಕೆಲಸ ಮಾಡಿ, ಗೆಲ್ಲಿಸಿದ್ದೀರಿ. ನನ್ನ ಗೆಲುವಿಗೆ ಸತೀಶ ಜಾರಕಿಹೊಳಿ ಕಾರಣ" ಎಂದು ಸ್ಮರಿಸಿದರು.
"ಬಿಜೆಪಿ ದೊಡ್ಡ ನಾಯಕರು ಇರುವ ಶಿಗ್ಗಾವಿ ಕ್ಷೇತ್ರವನ್ನು ಸತೀಶ ಜಾರಕಿಹೊಳಿ ಅವರು ದತ್ತು ತೆಗೆದುಕೊಂಡು ಗೆಲ್ಲಿಸಿದ್ದಾರೆ. ದೀಪಾವಳಿ ಹಬ್ಬ ಆಚರಿಸಲಿಲ್ಲ. ವಿದೇಶ ಪ್ರವಾಸ ರದ್ದು ಮಾಡಿದರು. ಅವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಮುಂದುವರಿಯುತ್ತೇನೆ" ಎಂದು ಯಾಸೀರ್ ಅಹ್ಮದ್ ಖಾನ್ ಪಠಾಣ್ ಹೇಳಿದರು.
ಸತೀಶ ಜಾರಕಿಹೊಳಿ ಮಾತನಾಡಿ, "ಸಾಮಾನ್ಯ ಕಾರ್ಯಕರ್ತರ ಸಲಹೆ ಮೇರೆಗೆ ಚುನಾವಣೆ ಎದುರಿಸಿ ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದಿದೆ. ಇದು ಮೊದಲ ಪ್ರಯೋಗ. ಯಾಸೀನ್ ಅವರಿಗೆ ದೊಡ್ಡ ರಾಜಕೀಯ ಹಿನ್ನೆಲೆ ಏನೂ ಇಲ್ಲ. ಮುಖ್ಯಮಂತ್ರಿ ಮಗನನ್ನು ಓರ್ವ ಸಾಮಾನ್ಯ ಕಾರ್ಯಕರ್ತ ಸೋಲಿಸಿದ್ದಾರೆ. 50 ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಕುಸ್ತಿ ಪಂದ್ಯಾವಳಿಯಲ್ಲಿ ಸತ್ಪಾಲ್ ಮಲಿಕ್‌ನನ್ನು ಚಂಬಾ ಮುತ್ನಾಳ ಸೋಲಿಸಿದ್ದರು. ಅದೇ ರೀತಿ ಯಾಸೀರ್ ಪಠಾಣ್ ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಗೆಲುವು ಪಕ್ಷಕ್ಕೆ ಹೊಸ ಹುಮ್ಮಸ್ಸು ತಂದಿದೆ" ಎಂದರು.