ಹಾವೇರಿ: ಬೇಸಿಗೆ ಪ್ರಾರಂಭವಾಗಿ, ಬಿಸಿಲಿನ ಧಗೆ ಹೆಚ್ಚಾಗಿದೆ. ಹೀಗಾಗಿ ಎಲ್ಲೆಡೆಯೂ ನೀರಿಗೆ ಹಾಹಾಕಾರ ಎದ್ದಿದೆ. ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ಜನ ಕಳೆದ ತಿಂಗಳಿನಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಜನರ ದಿನಬಳಕೆಗೆ ಗಡಸು ನೀರು ಪೂರೈಕೆ ಕೊರತೆಯ ನಡುವೆ ಕುಡಿಯುವ ನೀರು ಕೂಡ ಸಿಗುತ್ತಿಲ್ಲ. ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಕಂಡ ಗ್ರಾಮದ ಯುವಕ ಸಂತೋಷ್ ದುಂಡಣ್ಣನವರ್ ಮತ್ತು ಸ್ನೇಹಿತರ ಬಳಗ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಕೆಲಸ ಮಾಡುತ್ತಿದ್ದಾರೆ.
ತಮ್ಮದೇ ಟ್ರ್ಯಾಕ್ಟರ್ನಲ್ಲಿ, ತಾವೇ ಡೀಸೆಲ್ ಹಾಕಿಸಿಕೊಂಡು ಸಾವಿರ ಲೀಟರ್‌ನ ಎರಡು ಸಿಂಟ್ಯಾಕ್ಸ್‌ಗಳಲ್ಲಿ ನೀರು ತುಂಬಿ ತಂದು ಗ್ರಾಮದ ಜನರ ಕುಡಿಯುವ ನೀರಿನ ದಾಹ ತೀರಿಸಲು ಈ ಯುವಪಡೆ ಮುಂದಾಗಿದೆ. ಗ್ರಾಮದ ಹತ್ತಿರದ ಜಮೀನುಗಳಲ್ಲಿರುವ ಕೊಳವೆಬಾವಿಗಳಿಂದ ಸಿಂಟ್ಯಾಕ್ಸ್‌ಗಳಲ್ಲಿ ನೀರು ತುಂಬಿಸಿಕೊಳ್ಳುತ್ತಾರೆ. ನಂತರ ಗ್ರಾಮಕ್ಕೆ ತರುವ ಯುವಕರು ಗ್ರಾಮದ ಮನೆ ಮನೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದಾರೆ.
ಗ್ರಾಮದ ಪ್ರಮುಖ ಓಣಿಯ ವೃತ್ತದಲ್ಲಿ ಟ್ರ್ಯಾಕ್ಟರ್ ನಿಲ್ಲಿಸುವ ಯುವಕರು ಮಹಿಳೆಯರು ತರುವ ಕೊಡಗಳಿಗೆ ನೀರು ತುಂಬಿಸುತ್ತಾರೆ. ಒಂದು ದಿನಕ್ಕೆ 10 ಸಾವಿರದಿಂದ 12 ಸಾವಿರ ಲೀಟರ್ವರೆಗೆ ಯುವಕರು ಕುಡಿಯುವ ನೀರು ಪೂರೈಸುತ್ತಿದ್ದಾರೆ. ಪ್ರತಿ ಮನೆಗೆ ನಾಲ್ಕು ಕೊಡಗಳಿಗೆ ಸರತಿಯಲ್ಲಿ ನಿಂತು ಗ್ರಾಮಸ್ಥರು ಕುಡಿಯುವ ನೀರು ಪಡೆಯುತ್ತಾರೆ. ಈ ರೀತಿ ಮುಂಜಾನೆಯಿಂದಲೇ ಕೆಲಸ ಪ್ರಾರಂಭಿಸುವ ಯುವಕರಿಗೆ ಊಟಕ್ಕೂ ಬಿಡುವು ಸಿಗುವುದಿಲ್ಲ. ವಿದ್ಯುತ್ ಇಲ್ಲದ ವೇಳೆ ಈ ಯುವಕರು ಮಧ್ಯಾಹ್ನದ ಊಟ ಸೇವಿಸುತ್ತಾರೆ. ಮತ್ತೆ ನೀರು ಪೂರೈಕೆ ಆರಂಭಿಸುವ ಯುವಕರು ರಾತ್ರಿ 12 ಗಂಟೆಯವರೆಗೆ ನೀರು ಪೂರೈಸಿದ ಉದಾಹರಣೆಗಳಿವೆ. ಅಷ್ಟೇ ಅಲ್ಲದೆ ವಯೋವೃದ್ಧರು, ವಿಕಲಚೇತನರ ಮನೆಗಳಿಗೆ ಈ ಯುವಕರೇ ಕೊಡಗಳನ್ನು ತುಂಬಿಸಿ ನೀರು ಪೂರೈಸುತ್ತಿದ್ದಾರೆ.
ಯುವಕರ ತಂಡ ಉಚಿತವಾಗಿ ಪೂರೈಸುವ ಕುಡಿಯುವ ನೀರಿಗೆ ಗ್ರಾಮಸ್ಥರು ಮುಗಿಬೀಳುತ್ತಾರೆ. ಈ ಯುವಕರು ಎಷ್ಟು ಕಷ್ಟಪಟ್ಟರೂ ಸಹ ಪೂರ್ಣ ಗ್ರಾಮಕ್ಕೆ ಒಂದೇ ದಿನ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ವಿದ್ಯುತ್ ಸಮಸ್ಯೆಯಿಂದ ಗ್ರಾಮದ ಒಂದು ಭಾಗಕ್ಕೆ ಒಂದು ದಿನ. ಮತ್ತೊಂದು ದಿನ ಇನ್ನೊಂದು ಭಾಗಕ್ಕೆ ನೀರು ಕೊಡುತ್ತಾರೆ.